ಮಂಗಳೂರು: ನಗರದ ಬಲ್ಮಠದಲ್ಲಿ ಕಟ್ಟಡ ಕಾಮಗಾರಿ ಅವಘಡದ ಬೆನ್ನಲ್ಲೇ ಎಚ್ಚೆತ್ತ ಮಂಗಳೂರು ಮಹಾನಗರ ಪಾಲಿಕೆ ಮಳೆಗಾಲ ಮುಗಿಯುವವರೆಗೆ ಎಲ್ಲಾ ಕಟ್ಟಡದ ಕಾಮಗಾರಿ ಸ್ಥಗಿತಕ್ಕೆ ಆದೇಶ ನೀಡಿದೆ.
ಇನ್ನು ಮುಂದೆ ಯಾವುದೇ ಕಟ್ಟಡದ ಕಾಮಗಾರಿಯನ್ನು ನಡೆಸದಂತೆ ಹಾಗೂ ಈಗಾಗಲೇ ಪ್ರಾರಂಭಿಸಿರುವ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ನಿಲ್ಲಿಸಬೇಕು. ಹಾಗೂ ಅಗತ್ಯ ಮುನ್ನೆಚ್ಚರಿಕೆ ಕ್ರಮ ಅಳವಡಿಸಿಕೊಂಡು ಕಾಮಗಾರಿಯನ್ನು ಸ್ಥಗಿತಗೊಳಿಸಲು ಸೂಚನೆ ನೀಡಿದೆ. ಅವೈಜ್ಞಾನಿಕವಾಗಿ ಭೂಮಿಯನ್ನು ಅಗೆದು ಹಾಕದಂತೆ ಸೂಚನೆ ನೀಡಿದೆ. ಆದೇಶ ಉಲ್ಲಂಘನೆ ಕಂಡುಬಂದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮದ ಎಚ್ಚರಿಕೆ ನೀಡಿ ಮನಪ ಆಯುಕ್ತರು ಕಟ್ಟುನಿಟ್ಟಾಗಿ ಆದೇಶಿಸಿದ್ದಾರೆ.
ಆದೇಶ ಪತ್ರದಲ್ಲಿ ಏನಿದೆ?: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ಪರವಾನಿಗೆ ಪಡೆದಂತಹ ಕಟ್ಟಡ ನಿರ್ಮಾಣದಾರರು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಅವೈಜ್ಞಾನಿಕವಾಗಿ ಭೂ ಅಗೆತ ಹಾಗೂ ಕಟ್ಟಡ ನಿರ್ಮಾಣ ಕಾಮಗಾರಿ ಮಾಡುತ್ತಿರುವುದರಿಂದ ಭೂ ಕುಸಿತ ಉಂಟಾಗಿ ಸಾರ್ವಜನಿಕ ಆಸ್ತಿ - ಪಾಸ್ತಿಗಳಿಗೆ ಸಾಕಷ್ಟು ಹಾನಿಯುಂಟಾಗುತ್ತಿರುವ ಪ್ರಕರಣಗಳು ಕಂಡುಬಂದಿವೆ. ಜೊತೆಗೆ ಜೀವಹಾನಿಯೂ ಸಂಭವಿಸಿರುತ್ತದೆ.
ಈ ನಿಟ್ಟಿನಲ್ಲಿ ಪ್ರಸ್ತುತ ಮುಂಗಾರಿಗೆ ಅತ್ಯಧಿಕ ಮಳೆಯಾಗುವ ಸಾಧ್ಯತೆಗಳೊಂದಿಗೆ ರೆಡ್, ಆರೆಂಜ್, ಯೆಲ್ಲೊ ಅಲರ್ಟ್, ಬಗ್ಗೆ ಹವಾಮಾನ ಇಲಾಖೆಯಿಂದ ನಿರಂತರವಾಗಿ ಮುನ್ಸೂಚನೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಯಾವುದೇ ಕಟ್ಟಡದ ಕಾಮಗಾರಿಯನ್ನು ಮಳೆಗಾಲ ಮುಕ್ತಾಯವಾಗುವವರೆಗೆ ನಡೆಸದಂತೆ ಹಾಗೂ ಈಗಾಗಲೇ ಪ್ರಾರಂಭಿಸಿರುವ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ಅಗತ್ಯ ಮುನ್ನೆಚ್ಚರಿಕೆ ಕ್ರಮವನ್ನು ಅಳವಡಿಸಿಕೊಂಡು ಕಾಮಗಾರಿಯನ್ನು ನಿಲ್ಲಿಸುವಂತೆ ಈ ಮೂಲಕ ತಿಳಿಸಿದೆ. ಈ ಬಗ್ಗೆ ಯಾವುದೇ ಉಲ್ಲಂಘನೆ ಕಂಡುಬಂದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ಸಂಬಂಧಪಟ್ಟವರ ವಿರುದ್ಧ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಮಂಗಳೂರು ಭೂ ಕುಸಿತ - ಸತತ 7 ಗಂಟೆ ಕಾರ್ಯಾಚರಣೆ; ಓರ್ವನ ರಕ್ಷಣೆ, ಮತ್ತೋರ್ವ ಸಾವು - a laborer died in landslide