ಮಂಡ್ಯ: ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಕಳೆದ ವರ್ಷ ರಾಜ್ಯದಲ್ಲಿ 2ನೇ ಸ್ಥಾನ ಗಳಿಸಿದ್ದ ಮಂಡ್ಯ ಜಿಲ್ಲೆ ಈ ಬಾರಿ ಬರೋಬ್ಬರಿ 19ನೇ ಸ್ಥಾನಕ್ಕಿಳಿದಿದೆ. ಆದರೂ ಜಿಲ್ಲೆಯ ವಿದ್ಯಾರ್ಥಿ ಕೆ.ಸಿ.ನವನೀತ್ ರಾಜ್ಯಕ್ಕೆ ಮೂರನೇ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಈ ಸಾರಿ ಜಿಲ್ಲೆಯಲ್ಲಿ 20,529 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 15,108 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.73.59 ಫಲಿತಾಂಶ ಬಂದಿದೆ. ಇದು ಇತ್ತೀಚಿನ ವರ್ಷದಲ್ಲಿ ಬಂದ ಅತೀ ಕಡಿಮೆ ಫಲಿತಾಂಶವಾಗಿದೆ.
ಕಳೆದ ಸಾಲಿನಲ್ಲಿ ಶೇ.96.04 ಫಲಿತಾಂಶದೊಂದಿಗೆ ಮಂಡ್ಯ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿತ್ತು. 19,965 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇವರಲ್ಲಿ 19,133 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು.
ರೈತನ ಮಗನಿಗೆ ವೈದ್ಯನಾಗುವ ಆಸೆ: ಒಟ್ಟಾರೆ ಫಲಿತಾಂಶದಲ್ಲಿ ಕುಸಿತವಾಗಿರುವುದರ ನಡುವೆ ಸಂತಸದ ವಿಷಯವೆಂದರೆ ಸರ್ಕಾರಿ ವಸತಿ ನಿಲಯದಲ್ಲಿ ಓದಿದ ಜಿಲ್ಲೆಯ ವಿದ್ಯಾರ್ಥಿ ರಾಜ್ಯದಲ್ಲಿಯೇ ತೃತೀಯ ಸ್ಥಾನ ಗಳಿಸಿದ್ದಾರೆ. ಮಂಡ್ಯ ತಾಲೂಕಿನ ಕನ್ನಲಿ ಗ್ರಾಮದ ಕೆ.ಸಿ.ನವನೀತ್ 625ಕ್ಕೆ 623 ಅಂಕಗಳನ್ನು ಪಡೆದು ರಾಜ್ಯದಲ್ಲಿ ಮೂರನೇ ಟಾಪರ್ ಆಗಿದ್ದಾರೆ.
ನವನೀತ್ ತಂದೆ ಚನ್ನೇಗೌಡ ರೈತರಾಗಿದ್ದು, ತಾಯಿ ವೆಂಕಟಲಕ್ಷ್ಮಮ್ಮ ಟೈಲರಿಂಗ್ ವೃತ್ತಿ ಮಾಡುತ್ತಿದ್ದಾರೆ. ಕಷ್ಟದ ನಡುವೆಯೂ ಮಗನಿಗೆ ಬೆಂಬಲವಾಗಿ ನಿಂತಿದ್ದಾರೆ. ಆರನೇ ತರಗತಿಯಿಂದ ಎಸ್ಎಸ್ಎಲ್ಸಿವರೆಗೆ ತಾಲೂಕಿನ ತುಂಬಕೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾನೆ. ಕನ್ನಡದಲ್ಲಿ 125, ಇಂಗ್ಲೀಷ್ ಮತ್ತು ಹಿಂದಿ, ಗಣಿತದಲ್ಲಿ 100 ಅಂಕ, ಸಮಾಜ ವಿಜ್ಞಾನದಲ್ಲಿ ಹಾಗೂ ವಿಜ್ಞಾನದಲ್ಲಿ ತಲಾ 99 ಅಂಕಗಳಿಸಿ ಜಿಲ್ಲೆಗೆ ಕೀರ್ತಿ ತಂದಿರುವ ನವನೀತ್‌ಗೆ ವೈದ್ಯನಾಗುವ ಆಸೆ.
ಇದನ್ನೂ ಓದಿ: ಸರ್ಕಾರಿ ಶಾಲೆಯಲ್ಲಿ ಓದಿ ರಾಜ್ಯಕ್ಕೆ ಫಸ್ಟ್ ಬಂದ ರೈತನ ಮಗಳು: IAS ಅಧಿಕಾರಿಯಾಗುವ ಕನಸು - SSLC Topper