ಮಂಡ್ಯ: 2024ರ ಲೋಕಸಭಾ ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೇಂದ್ರ ಚುನಾವಣಾ ಆಯೋಗವು 18ನೇ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಮಾದರಿ ನೀತಿ ಸಂಹಿತೆಯನ್ನು ಜಾರಿಗೊಳಿಸಿದೆ. ಎಂದು ಮಂಡ್ಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಕುಮಾರ ತಿಳಿಸಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆಯಿಂದಲೇ ಜಿಲ್ಲೆಯ ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ ಎಂದು ತಿಳಿಸಿದರು.
ಮಂಡ್ಯ ಜಿಲ್ಲೆಯು ಸಾಮಾನ್ಯ ಕ್ಷೇತ್ರವಾಗಿದೆ. ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಾದ ಮಳವಳ್ಳಿ, ಮದ್ದೂರು, ಮಂಡ್ಯ ಮತ್ತು ಮೇಲುಕೋಟೆ, ನಾಗಮಂಗಲ ಹಾಗೂ ಕೆಆರ್ ಪೇಟೆ, ಶ್ರೀರಂಗಪಟ್ಟಣ, ಕೆಆರ್ ನಗರ ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ಮಾರ್ಚ್ 28ರಂದು ಅಧಿಸೂಚನೆಯನ್ನು ಪ್ರಕಟಿಸಲಾಗುವುದು. ಮಾರ್ಚ್ 28 ರಿಂದ ಏಪ್ರಿಲ್ 4 ರ ವರೆಗೆ ನಾಮಪತ್ರಗಳನ್ನು ಸ್ವೀಕರಿಸಲಾಗುವುದು. ಏಪ್ರಿಲ್ 5 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್ 08 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕವಾಗಿದ್ದು, ನಾಮಪತ್ರ ಹಿಂತೆಗೆದುಕೊಳ್ಳುವುದಕ್ಕೆ ಅವಕಾಶ ಇದೆ. ಏಪ್ರಿಲ್ 26 ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದ್ದು, ಜೂನ್ 4 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 17,59,175 ಮತದಾರರಿದ್ದಾರೆ. ಇದರಲ್ಲಿ 8,67,652 ಪುರುಷ ಮತದಾರರು, 8,91,355 ಮಹಿಳಾ ಮತದಾರರಿದ್ದಾರೆ. 168 ತೃತೀಯ ಲಿಂಗಿ ಮತದಾರರು ಸೇರಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 35,140 ಯುವ ಮತದಾರರು ಹಾಗೂ 85 ವರ್ಷ ಮೇಲ್ಪಟ್ಟ 23,044 ಮತದಾರರು ಇದ್ದಾರೆ. ಕ್ಷೇತ್ರದಲ್ಲಿ 2,074 ಮತಗಟ್ಟೆಗಳನ್ನು ತೆರೆಯಲಿದ್ದು, ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾವಣೆಗೆ ಜಿಲ್ಲಾಡಳಿತ ಕ್ರಮ ವಹಿಸಿದೆ. ಚುನಾವಣೆಯ ವೇಳೆ ಅಕ್ರಮ ನಡೆಯದಂತೆ ಕಟ್ಟೆಚ್ಚರ ವಹಿಸಿದೆ. ಜಿಲ್ಲೆಯಲ್ಲಿ 25 ಚೆಕ್ ಪೋಸ್ಟ್‌ಗಳನ್ನು ನಿರ್ಮಾಣ ಮಾಡಲಾಗಿದ್ದು, ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳ ಚಲನವಲನಗಳ ಮೇಲೆ ನಿಗಾ ವಹಿಸಲಾಗಿದೆ. ಎಲ್ಲಾ ಚೆಕ್ ಪೋಸ್ಟ್ ಗಳಲ್ಲಿ ಸಿಸಿಟಿವಿ ಕ್ಯಾಮರಾ ಕಣ್ಗಾವಲು ಇರಲಿದೆ ಎಂದು ತಿಳಿಸಿದರು.
ಎಲ್ಲಾ ರೀತಿಯ ಭದ್ರತಾ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ: ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್ ಮಾತನಾಡಿ, ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ರೂಟ್ಮಾರ್ಚ್ ಮಾಡಲಾಗಿದೆ. ಜಿಲ್ಲೆಯಲ್ಲಿರುವ ರೌಡಿಶೀಟರ್ ಗಳ ಮೇಲೆ ನಿಗಾವಹಿಸಲಾಗಿದೆ. ಚುನಾವಣಾ ಸಂದರ್ಭದಲ್ಲಿ ಅಶಾಂತಿ ಉಂಟುಮಾಡುವವರನ್ನ ಗಡಿಪಾರು ಮಾಡಲು ನಿರ್ಧರಿಸಲಾಗಿದೆ. ರೌಡಿಶೀಟರ್ ಗಳ ಮನೆ ಪರಿಶೀಲಿಸಿ, ಎಚ್ಚರಿಕೆ ಕೂಡ ಕೊಟ್ಟಿದ್ದೇವೆ. ಚುನಾವಣೆಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಭದ್ರತಾ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಕಳೆದ 1 ವಾರದಿಂದ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೀತಿಯ ಭಯದ ವಾತಾವರಣ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುವುದು. 1 ಸಿಆರ್ಪಿಎಫ್ ತುಕಡಿ ಜಿಲ್ಲೆಗೆ ಆಗಮಿಸಿ ಪಥಸಂಚಲನ ನಡೆಸಲಾಗಿದೆ ಎಂದರು.
ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ರಾಜಕೀಯ ನಾಯಕರ ಫ್ಲೆಕ್ಸ್ಗಳನ್ನು ತೆರವು ಮಾಡಲಾಯಿತು. ಮಂಡ್ಯದ ವಿವಿಧೆಡೆ ಅಳವಡಿಸಿದ್ದ ಸರ್ಕಾರಿ ಜಾಹೀರಾತು ಫಲಕಗಳನ್ನು ಮಂಡ್ಯ ನಗರಸಭೆ ಪೌರ ಕಾರ್ಮಿಕರು ತೆರವು ಮಾಡಿದರು.
ಇದನ್ನೂ ಓದಿ: ಕೆ.ಎಸ್ ಈಶ್ವರಪ್ಪ ಪಕ್ಷದ ನಿರ್ಣಯ ಮಾನ್ಯ ಮಾಡುತ್ತಾರೆ: ಪ್ರಹ್ಲಾದ್ ಜೋಶಿ