ಬೆಂಗಳೂರು: ಪ್ರತಿಷ್ಠಿತ ಫ್ಯಾಷನ್ ಬ್ರ್ಯಾಂಡ್ ಕಂಪನಿಗಳ ಬಟ್ಟೆಗಳ ನಕಲು ದಾಸ್ತಾನು ಮಾಡಿಕೊಂಡು ಅಸಲಿಯೆಂದು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನರಸಿಂಹರಾಜು (38) ಬಂಧಿತ ಆರೋಪಿ. ಬಂಧಿತನ ಅಂಗಡಿಯಲ್ಲಿದ್ದ 1.38 ಕೋಟಿ ಮೌಲ್ಯದ ನಕಲಿ ಬಟ್ಟೆಗಳನ್ನು ಜಪ್ತಿ ಮಾಡಲಾಗಿದೆ.
ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಿಇಎಂಎಲ್ ಲೇಔಟ್ನಲ್ಲಿ ಅಂಗಡಿ ಹೊಂದಿದ್ದ ಆರೋಪಿ, ನೈಕಿ, ಪೂಮಾ, ಟಾಮಿ ಹಿಲ್ಫಿಗರ್, ಅಂಡರ್ ಆರ್ಮರ್, ಜಾರಾ ಮತ್ತಿತರ ಬ್ರ್ಯಾಂಡ್‌ಗಳ ನಕಲಿ ಬಟ್ಟೆಗಳನ್ನು ದಾಸ್ತಾನು ಮಾಡಿಟ್ಟುಕೊಂಡಿದ್ದ. ಅವುಗಳನ್ನೇ ಅಸಲಿ ಬಟ್ಟೆಗಳೆಂದು ಸಾರ್ವಜನಿಕರಿಗೆ ನಂಬಿಸಿ ಮಾರಾಟ ಮಾಡುತ್ತಿದ್ದ. ಆರೋಪಿಯ ಕೃತ್ಯದ ಕುರಿತು ಖಚಿತ ಮಾಹಿತಿ ಪಡೆದ ಸಿಸಿಬಿಯ ಆರ್ಥಿಕ ಅಪರಾಧ ದಳದ ಪೊಲೀಸರು, ಆತನ ಅಂಗಡಿ ಮೇಲೆ ದಾಳಿ ನಡೆಸಿದ್ದರು.
ಬಂಧಿತನಿಂದ ಸದ್ಯ 1.38 ಕೋಟಿ ಮೌಲ್ಯದ ನಕಲಿ ಬಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ. ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಕಾಪಿರೈಟ್ಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ವಿಲಾಸಿ ಜೀವನ ನಡೆಸುತ್ತಿದ್ದ ಯುವಕನ ಅಪಹರಣ, ಆರೋಪಿಗಳ ಬಂಧನ - Kidnap Case