ಕಾರವಾರ (ಉತ್ತರ ಕನ್ನಡ) : ಶಿರೂರು ಗುಡ್ಡ ಕುಸಿತದಿಂದಾಗಿ ಅನೇಕ ಸಾವು- ನೋವು, ಹಾನಿ ಸಂಭವಿಸಿದೆ. ಹಠಾತ್ ಎದುರಾದ ಗಂಗಾವಳಿ ನದಿ ಅಲೆ ರಭಸಕ್ಕೆ ಉಳುವರೆ ಗ್ರಾಮಕ್ಕೆ ಗ್ರಾಮವೇ ಕೊಚ್ಚಿಹೋಗಿದೆ. ಈ ವೇಳೆ ಐವರು ಪುಟ್ಟ ಮಕ್ಕಳು ಕೊಚ್ಚಿ ಹೋಗುತ್ತಿರುವಾಗ ತನ್ನ ಪ್ರಾಣವನ್ನು ಲೆಕ್ಕಿಸದೇ ಮಕ್ಕಳನ್ನು ರಕ್ಷಣೆ ಮಾಡಿದ ಹುವಾಗೌಡ ಅವರ ಮಾತುಗಳನ್ನು ಕೇಳಿದ್ರೆ ಮೈ ಜುಂ ಎನ್ನುತ್ತದೆ.
ಶಿರೂರು ಗುಡ್ಡ ಕುಸಿತದಿಂದ ಸಂಭವಿಸಿದ ಮಹಾ ದುರ್ಘಟನೆಯಲ್ಲಿ ಕೆದಕಿದಷ್ಟು ನೋವಿನ ಸಂಗತಿಗಳು ಹೊರಬರುತ್ತಿವೆ. ನದಿಯ ಆಚೆ ಕಳೆದ ಏಳೆಂಟು ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕಾಗಿ ಐಆರ್ಬಿ ಕಂಪೆನಿ ಕತ್ತರಿಸಿದ ಬೃಹತ್ ಗುಡ್ಡ ಕಣ್ಣಿಗೆ ಕುಕ್ಕುವಂತೆ ಕಾಣಿಸತೊಡಗಿದ್ದರೂ ಅದರಿಂದಲೇ ತಮಗೆ ಆಪತ್ತು ಬರಬಹುದೆಂದು ಈ ಗ್ರಾಮದ ಜನ ಕನಸಿನಲ್ಲೂ ಊಹಿಸಿರಲಿಲ್ಲ.
ಜು. 16 ರಂದು ಭಾರಿ ಮಳೆಯ ನಡುವೆ ಕುಸಿದ ಗುಡ್ಡದ ಅರ್ಧಕ್ಕೂ ಹೆಚ್ಚು ಮಣ್ಣು ನದಿಗೆ ಬಿದ್ದಿದ್ದು, ಒಮ್ಮೆಲೇ ನದಿ ದಿಕ್ಕನ್ನು ಬದಲಿಸಿದ ಪರಿಣಾಮ ಉಳುವರೆ ಗ್ರಾಮದ ಮೇಲೆ ಗಂಗಾವಳಿ ನದಿ ಪ್ರವಾಹವಾಗಿ ಹರಿದಿದೆ. ಈ ಭೀಕರ ದುರಂತದ ವೇಳೆ ಗ್ರಾಮದ ಬಹುತೇಕರು ಕೆಲಸ ಹಾಗೂ ಕೂಲಿಗೆ ತೆರಳಿದ್ದರು. ಆದರೆ ಮನೆಯಲ್ಲಿದ್ದ ಪುಟ್ಟ ಮಕ್ಕಳು, ಮಹಿಳೆಯರು ಒಮ್ಮೆಲೇ ಬಂದ ಪ್ರವಾಹದಿಂದಾಗಿ ಒಂದಿಷ್ಟು ಮಂದಿ ಗುಡ್ಡ ಏರಿ ತಪ್ಪಿಸಿಕೊಂಡರೆ, ಇನ್ನೊಂದಿಷ್ಟು ಮಂದಿ ಮಕ್ಕಳು ಓಡುವುದರೊಳಗೆ ನೀರಿನಲ್ಲಿ ಕೊಚ್ಚಿಹೋಗಿದ್ದರು.
'ಮನೆಯ ಹೊರಗೆ ದೊಡ್ಡ ಶಬ್ಧ ಬಂತು ಎಂದು ನೋಡಲು ಬರುವಷ್ಟರಲ್ಲಿ ನೀರು ನುಗ್ಗಿ ಬರುತ್ತಿರುವುದನ್ನು ಮನೆಯಲ್ಲಿ ಕಂಡು ಓದುತ್ತಿದ್ದ ಮಕ್ಕಳನ್ನು ಎತ್ತಿಕ್ಕೊಂಡು ಓಡಲು ಮುಂದಾದಾಗ, ಎಲ್ಲರನ್ನು ನೀರು ಕೊಚ್ಚಿಕೊಂಡು ಹೋಗಿತ್ತು. ನಮ್ಮ ಇಬ್ಬರ ಮಕ್ಕಳ ಜೊತೆ ತಮ್ಮನ ಮೂವರು ಮಕ್ಕಳು ಕೊಚ್ಚಿ ಹೋಗಿದ್ದರು. ನಾನು ಕೂಡ ಕೊಚ್ಚಿ ಹೋಗಿದ್ದೆ. ಆದರೆ ಆ ಕ್ಷಣ ಮಕ್ಕಳನ್ನು ರಕ್ಷಣೆ ಮಾಡಬೇಕಿತ್ತು.
ಕೊಚ್ಚಿ ಹೋಗುತ್ತಿದ್ದ ಐವರು ಮಕ್ಕಳನ್ನು ಬಿಗಿದಪ್ಪಿಕೊಂಡು ರಕ್ಷಣೆ ಮಾಡಿಕೊಂಡು ಬಂದೆ. ಆಸ್ಪತ್ರೆಗೆ ದಾಖಲಾದ ಬಳಿಕವೇ ಆ ಆಘಾತದಿಂದ ನಾನು ಹೊರಬಂದಿದ್ದೇನೆ. ನನ್ನ ಮಗಳ ಕೈಗೆ ಪೆಟ್ಟಾಗಿದೆ. ಆದರೆ ನಾವು ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಯಾರೋ ಮಾಡಿದ ತಪ್ಪಿನಿಂದಾಗಿ ನಾವು ಇದೀಗ ಜೀವನ ಪರ್ಯಂತ ತೊಂದರೆ ಅನುಭವಿಸುವಂತಾಗಿದೆ' ಎಂದು ಹುವಾ ಗೌಡ ಅಳಲು ತೋಡಿಕೊಂಡಿದ್ದಾರೆ.
ಇನ್ನು ಘಟನೆಯಲ್ಲಿ ಉಳುವರೆ ಗ್ರಾಮದ ಏಳು ಮನೆಗಳ ಅಡಿಪಾಯ ಹೊರತುಪಡಿಸಿ ಸಣ್ಣ ಕುರುಹು ಇಲ್ಲದಂತೆ ಮನೆಗಳು ಕೊಚ್ಚಿ ಹೋಗಿವೆ. ಗ್ರಾಮದಲ್ಲಿ ಸಣ್ಣಿಗೌಡ ಮೃತಪಟ್ಟಿದ್ದು, 25ಕ್ಕಿಂತ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಅಲ್ಲದೆ ಜೀವನಕ್ಕೆ ಆಧಾರವಾಗಿದ್ದ ಕೃಷಿ ಭೂಮಿ, ನಾಟಿ ಮಾಡಿದ ಗದ್ದೆಗಳು ಸಂಪೂರ್ಣ ಕಲ್ಲು ಮಣ್ಣು ತುಂಬಿಕೊಂಡು ನಾಶವಾಗಿವೆ.
ಬಲೆ, ಬೋಟ್ ಎಲ್ಲವೂ ನದಿ ಪಾಲಾಗಿದ್ದು, ಗ್ರಾಮದಲ್ಲಿ ವಾಸವೇ ಭಯಾನಕವಾಗಿದೆ. ಇನ್ನು ಅಂದು ನಡೆದ ಘಟನೆ ಪುಟ್ಟ ಮಕ್ಕಳಲ್ಲಿಯೂ ಆತಂಕ ಹುಟ್ಟಿಸಿದ್ದು, ಮಕ್ಕಳು ಹುವಾಗೌಡ ಅವರಿಂದಾಗಿ ತಾವು ಬದುಕಿ ಬಂದಿದ್ದೇವೆ ಎಂದಿದ್ದಾರೆ. ನಾವು ಐದು ಜನರು ಕೊಚ್ಚಿಹೋಗಿದ್ದೆವು. ಆಗ ನಾವು ಗಿಡಗಳನ್ನು ಹಿಡಿದುಕೊಂಡಿದ್ದೆವು. ದೊಡ್ಡಪ್ಪ ಕೂಡ ಕೊಚ್ಚಿ ಹೋಗಿದ್ದರು. ಆದರೆ ಆ ವೇಳೆ ನಮ್ಮನ್ನು ಬಂದು ಅವರು ರಕ್ಷಣೆ ಮಾಡುವುದಾಗಿ ತಿಳಿಸಿದರು.
ಒಟ್ಟಾರೆ ತಮ್ಮದಲ್ಲದ ತಪ್ಪಿಗೆ ಎಂದೂ ಕಂಡರಿಯದ ಭೂಕುಸಿತ ಉಂಟಾಗಿ ಉಳುವರೆ ಗ್ರಾಮಸ್ಥರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಅಲ್ಪ ಪರಿಹಾರ ನೀಡಿ ಕೈ ತೊಳೆದುಕೊಂಡಿದೆ. ನಿರ್ಲಕ್ಷ್ಯ ವಹಿಸಿದ ಹೆದ್ದಾರಿ ಕಾಮಗಾರಿ ಕೈಗೊಂಡ ಖಾಸಗಿ ಕಂಪನಿಯಿಂದ ಈವರೆಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಸಂಬಂಧಪಟ್ಟ ಜನಪ್ರತಿನಿಧಿಗಳು, ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ ಆಗಿರುವ ಹಾನಿ ಹಾಗೂ ಮನೆಗಳನ್ನು ಅದೇ ಕಂಪನಿ ಮೂಲಕವೇ ಕಟ್ಟಿಸಿಕೊಡುವ ಕೆಲಸ ಮಾಡಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.