ಹಾವೇರಿ: ಜಮೀನು ವಿವಾದದ ಹಿನ್ನೆಲೆಯಲ್ಲಿ ಚಿಕ್ಕಪ್ಪನನ್ನು ಅಣ್ಣನ ಮಗನೇ ಕೊಲೆಗೈದ ಘಟನೆ ಹಾವೇರಿ ತಾಲೂಕಿನ ಹಳೆರಿತ್ತಿ ಗ್ರಾಮದಲ್ಲಿ ಗುರುವಾರ ನಡೆದಿದೆ. 55 ವರ್ಷದ ಹಾಲಪ್ಪ ಚಕ್ರಸಾಲಿ ಹತ್ಯೆಯಾದವರು. 35 ವರ್ಷದ ಚಂದ್ರಶೇಖರ ಚಕ್ರಸಾಲಿ ಕೊಲೆ ಆರೋಪಿ. ಈತ ಹಾಲಪ್ಪನ ಅಣ್ಣ ಬಸಪ್ಪನ ಮಗ.
ಘಟನೆಯ ವಿವರ: ಜಮೀನು ಅತಿಕ್ರಮಿಸಿ ಒಂದು ಸಾಲು ಮೆಣಸಿನಕಾಯಿ ಬೆಳೆದಿರುವ ಕುರಿತು ಹಾಲಪ್ಪ ಮತ್ತು ಬಸಪ್ಪನ ನಡುವೆ ವಾಗ್ವಾದ ನಡೆದು ಕೈ ಕೈ ಮಿಲಾಯಿಸುವ ಹಂತ ತಲುಪಿತ್ತು. ಇದಾದ ನಂತರ ಹಾಲಪ್ಪ ಜಮೀನಿಂದ ಮನೆಗೆ ಮರಳಿ ಮಧ್ಯಾಹ್ನದ ಘಟನೆಯ ಬಗ್ಗೆ ಸಂಜೆ ಮತ್ತೆ ಮಾತನಾಡಲು ಅಣ್ಣ ಬಸಪ್ಪನ ಮನೆಗೆ ತೆರಳಿದ್ದಾನೆ. ಈ ವೇಳೆ ಮತ್ತೆ ವಾಗ್ಯುದ್ಧ ನಡೆದಿದೆ. ಇದನ್ನು ಗಮನಿಸಿ, ಅಲ್ಲಿಯೇ ಇದ್ದ ಬಸಪ್ಪನ ಮಗ ಚಂದ್ರಶೇಖರ ಚಕ್ರಸಾಲಿ ಕಲ್ಲು ತೆಗೆದುಕೊಂಡು ಬಂದು ಚಿಕ್ಕಪ್ಪ ಹಾಲಪ್ಪನ ತಲೆ ಮೇಲೆ ಹಾಕಿದ್ದಾನೆ. ಬಲವಾದ ಏಟು ಬಿದ್ದು ಹಾಲಪ್ಪನ ತಲೆ ಹಾಗೂ ಕಿವಿಯಲ್ಲಿ ತೀವ್ರವಾಗಿ ರಕ್ತಸ್ರಾವ ಉಂಟಾಗಿ ನೆಲಕ್ಕೆ ಕುಸಿದು ಬಿದ್ದಿದ್ದಾನೆ. ತಕ್ಷಣ ಬಸಪ್ಪ ಹಾಗೂ ಚಂದ್ರಶೇಖರ ಮತ್ತಿತರರು ಸೇರಿ ಹೊಸರಿತ್ತಿ ಗ್ರಾಮದ ಆಸ್ಪತ್ರೆಗೆ ಹಾಲಪ್ಪನನ್ನು ಚಿಕಿತ್ಸೆಗೆ ಕರೆದೊಯ್ದಿದ್ದಾರೆ. ಆದರೆ ಮಾರ್ಗಮಧ್ಯೆ ಆತ ಸಾವನ್ನಪ್ಪಿದ್ದಾನೆ. ಮೃತದೇಹವನ್ನು ಹಾಲಪ್ಪನ ಮನೆಯ ಹತ್ತಿರ ಇಟ್ಟು ಬಸಪ್ಪ ಹಾಗೂ ಚಂದ್ರಶೇಖರ ಮನೆಗೆ ಮರಳಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಗುತ್ತಲ ಪೊಲೀಸ್ ಠಾಣೆಯ ಸಿಬ್ಬಂದಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸ್ಥಳಕ್ಕೆ ಎಸ್ಪಿ ಅಂಶುಕುಮಾರ, ಹೆಚ್ಚುವರಿ ಎಸ್ಪಿ ಗೋಪಾಲ ಸಿ., ಡಿವೈಎಸ್ಪಿ ಗಣೇಶ ಎ.ಎಲ್., ಸಿಪಿಐ ಸಂತೋಷ ಪವಾರ, ಪಿಎಸ್ಐ ರಾಜು ಟಿ. ಹಾಗೂ ವಿಧಿ ವಿಜ್ಞಾನ ಪ್ರಯೋಗಾಲದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.