ವಿಜಯಪುರ: ದೈವ ಪ್ರೇರಣೆಯಿಂದಾಗಿ ಹೆತ್ತ ತಾಯಿಯ ಆಸೆ ಪೂರ್ಣಗೊಳಿಸಲು ಕಾಶಿ, ಅಯೋಧ್ಯೆ ಸೇರಿ ವಿವಿಧ ತೀರ್ಥ ಕ್ಷೇತ್ರಗಳಿಗೆ ಬಳ್ಳಾರಿ ಜಿಲ್ಲೆಯ ಶಿರುಗುಪ್ಪ ಪಟ್ಟಣದ ವ್ಯಕ್ತಿಯೊಬ್ಬರು ಏಕಾಂಗಿಯಾಗಿ ಪಾದಯಾತ್ರೆ ಆರಂಭಿಸಿದ್ದಾರೆ.
ಬಳ್ಳಾರಿ ಜಿಲ್ಲೆ ಶಿರುಗುಪ್ಪ ಪಟ್ಟಣದ ಗೋಪಾಲಕೃಷ್ಣ ಶೆಟ್ಟಿ ಅವರು ತಮ್ಮ ಇಳಿ ವಯಸ್ಸಿನಲ್ಲಿಯೂ ಹೆತ್ತಮ್ಮನ ಬಯಕೆ ಈಡೇರಿಸಲು ಉತ್ತರ ಭಾರತದ ತೀರ್ಥ ಕ್ಷೇತ್ರಗಳಿಗೆ ಏಕಾಂಗಿಯಾಗಿ ಪಾದಯಾತ್ರೆ ಕೈಗೊಂಡಿದ್ದಾರೆ. ಒಂದು ವಾರದ ಹಿಂದೆ ಶಿರುಗುಪ್ಪದಿಂದ ತಮ್ಮ ಈ ಪ್ರಯಾಣ ಆರಂಭಿಸಿದ್ದಾರೆ. ಗೋಪಾಲಕೃಷ್ಣ ಶೆಟ್ಟಿ ಅವರು ಉರಿಬಿಸಿಲಿನಲ್ಲೇ ಕನಿಷ್ಠ ದಿನನಿತ್ಯ 30 ರಿಂದ 30 ಕಿಲೋ ಮೀಟರ್ ದೂರ ಸಂಚರಿಸುತ್ತಿದ್ದಾರೆ. ನಿನ್ನೆ (ಶುಕ್ರವಾರ) ಗುಮ್ಮಟನಗರಿ ವಿಜಯಪುರ ನಗರಕ್ಕೆ ತಲುಪಿದ್ದರು.
''ಮಹಾರಾಷ್ಟ್ರದಲ್ಲಿ ಇರುವ ಶಕ್ತಿಪೀಠಗಳಿಗೆ ಭೇಟಿ ಕೊಡಲಿದ್ದೇನೆ. ನಂತರ ಕಾಶಿ, ಅಯೋಧ್ಯೆ ಸೇರಿದಂತೆ ವಿವಿಧ ತೀರ್ಥ ಕ್ಷೇತ್ರಗಳಿಗೂ ತೆರಳಿ ದರ್ಶನ ಪಡೆಯುತ್ತೇನೆ. ಕಾಶಿಗೆ ತಲುಪಲು ಎರಡು ತಿಂಗಳಾದರೂ ಆಗಬಹುದು. ಮುಂದೆಯೂ ದೈವ ಸಂಕಲ್ಪವಿದ್ದರೆ, ಯಾವುದೇ ದೈಹಿಕ ಆರೋಗ್ಯ ಸಮಸ್ಯೆ ಕಂಡು ಬಾರದೇ ಇದ್ದರೆ ಕೇದಾರನಾಥ, ಬದರಿನಾಥ ಸೇರಿದಂತೆ ಚಾರ್‌ಧಾಮ್‌ಯಾತ್ರೆಯನ್ನು ಪಾದಯಾತ್ರೆ ಮೂಲಕವೇ ಮುಗಿಸಿ ಮರಳುತ್ತೇನೆ'' ಎಂದು ಗೋಪಾಲಕೃಷ್ಣ ಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದರು.
''ಹಾದಿಯುದ್ದಕ್ಕೂ ಆಯಾ ಊರುಗಳಲ್ಲಿರುವ ತಮ್ಮ ಪರಿಚಿತರು ಮತ್ತು ದೈವ ಭಕ್ತರು ತಮಗೆ ವಿಶ್ರಾಂತಿಗೆಂದು ತಂಗುವ ಹಾಗೂ ಪ್ರಸಾದದ ವ್ಯವಸ್ಥೆ ಮಾಡಿದ್ದಾರೆ. ಅದು ಸಾಧ್ಯವಿಲ್ಲದಾಗ ನನ್ನ ಸ್ವಂತ ಖರ್ಚಿನಲ್ಲಿ ಉಳಿದುಕೊಳ್ಳುವ ಮತ್ತು ಊಟದ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಿದ್ದೇನೆ'' ಎಂದು ಅವರು ತಿಳಿಸಿದರು.
ಉತ್ತರ ಭಾರತದ ತೀರ್ಥ ಕ್ಷೇತ್ರಗಳಿಗೆ ಗೋಪಾಲಕೃಷ್ಣ ಶೆಟ್ಟಿ ಅವರ ಏಕಾಂಗಿ ಪಾದಯಾತ್ರೆ ಪ್ರಯಾಣ ಯಶಸ್ವಿಯಾಗಿ ಆರೋಗ್ಯಯುತವಾಗಿ ತವರೂರಿಗೆ ಮರಳಲಿ ಎಂದು ವಿಜಯಪುರದ ಜನರು ಹಾರೈಸಿದರು. ಗೋಪಾಲಕೃಷ್ಣ ಶೆಟ್ಟಿ ಅವರನ್ನು ಸನ್ಮಾನಿಸಿ, ನಂತರ ಬೀಳ್ಕೊಟ್ಟರು.
ಇದನ್ನೂ ಓದಿ: ಬೆಂಗಳೂರಿನ ರಾಮೇಶ್ವರ ಕೆಫೆಯಲ್ಲಿ ಸುಧಾರಿತ ಸ್ಫೋಟ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ-ಸಿಎಂ ಸಿದ್ದರಾಮಯ್ಯ