ದಾವಣಗೆರೆ : ಮಳೆ ಈ ಬಾರಿ ಕೈಕೊಟ್ಟಿದೆ. ರಾಜ್ಯದಲ್ಲಿ ಕೆಲ ಭಾಗದಲ್ಲಿ ಈಗಾಗಲೇ ಅಲ್ಪಸ್ವಲ್ಪ ಮಳೆಯಾಗಿದೆ. ನೀರಿಗಾಗಿ ಹಾಹಾಕಾರ ತಲೆದೋರಿದೆ. ಆದರೆ ಬೆಣ್ಣೆನಗರಿ ದಾವಣಗೆರೆಯಲ್ಲಿ ಮಾತ್ರ ಮಳೆಯ ಅಭಾವ ಎದುರಾಗಿದೆ. ಆದ್ದರಿಂದ ಇಲ್ಲೊಬ್ಬರು ಮಳೆಗಾಗಿ ದೇವರ ಮೊರೆ ಹೋಗಿ, 14 ಬಾರಿ ರಕ್ತದಾನ ಮಾಡಿದ್ದಾರೆ. ಅಲ್ಲದೆ ಜಿಲ್ಲೆಯಲ್ಲಿ ಮಳೆಯಾಗಲಿ, ರೈತರ ಮೊಗದಲ್ಲಿ ಮಂದಹಾಸ ಮೂಡಲಿ ಎಂದು ಹಾರೈಸಿದ್ದಾರೆ.
ನಗರದ ಶ್ರೀಕಾಂತ್ ಇಂತಹ ವಿನೂತನ ಕೆಲಸಕ್ಕೆ ಕೈಹಾಕಿದ್ದಾರೆ. ಈ ಹಿಂದೆ ಇದೇ ಶ್ರೀಕಾಂತ್ ಒಮ್ಮುಖ ರಸ್ತೆಯಲ್ಲಿ ಸಂಚಾರಿ ನಿಯಮ ಪಾಲಿಸದೆ ಬರುತ್ತಿದ್ದ ವಾಹನ ಸವಾರರಿಗೆ ತೂತುಒಡೆ ಹಾಗೂ ಗುಲಾಬಿ ಹೂವು ಕೊಟ್ಟು ವಿನೂತನವಾಗಿ ಜಾಗೃತಿ ಮೂಡಿಸಿ ಸುದ್ದಿಯಾಗಿದ್ದರು. ಇದೀಗ ಅದೇ ಶ್ರೀಕಾಂತ್ ಅವರು ರಾಜ್ಯದಲ್ಲಿ ಸಮೃದ್ಧ ಮಳೆಯಾಗಲಿ ಎಂದು ಒಂದಲ್ಲ, ಎರಡಲ್ಲ.. ಸತತವಾಗಿ 14 ಬಾರಿ ರಕ್ತದಾನ ಮಾಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಹೌದು, ಕರ್ನಾಟಕ ರಾಜ್ಯದಲ್ಲಿ ಉತ್ತಮ ಮಳೆಯಾಗ್ಬೇಕೆಂದು ಇವರು 14 ಬಾರಿ ರಕ್ತದಾನ ಮಾಡಿರುವುದು ಜನರ ಹುಬ್ಬೇರಿಸುವಂತಾಗಿದೆ. ದಾವಣಗೆರೆ ನಗರದ ಎವಿಕೆ ರಸ್ತೆಯಲ್ಲಿರುವ ಸಿದ್ದಗಂಗಾ ರಕ್ತ ಭಂಡಾರದಲ್ಲಿ ಇಂದು 14ನೇ ಬಾರಿ ರಕ್ತದಾನ ಮಾಡಿದ್ರು. ಅಲ್ಲದೆ ಭರ್ಜರಿ ಮಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿರುವ ಶ್ರೀಕಾಂತ್ ಅವರು ಬರಗಾಲ ದೂರವಾಗಲಿ ಎಂದು ದೇವರಲ್ಲಿ ಬೇಡಿಕೊಂಡರು.
''ರಕ್ತದಾನ ಶ್ರೇಷ್ಠ ದಾನ. ರಾಜ್ಯದಲ್ಲಿ ಹಲವೆಡೆ ಮಳೆ ಆಗಿಲ್ಲ. ಅದ್ರಲ್ಲೂ ದಾವಣಗೆರೆಯಲ್ಲೂ ಮಳೆ ಅಭಾವ ಆಗಿದೆ. ಮೂರು ವರ್ಷದಲ್ಲಿ ಸತತವಾಗಿ 14 ಬಾರಿ ರಕ್ತದಾನ ಮಾಡಿದ್ದೇನೆ. ರಕ್ತದಾನ ಮಾಡಿದ ದಿನವೇ ಅಲ್ಪ ಮಳೆಯಾಗಿದೆ. ಅವರಿವರ ಹುಟ್ಟುಹಬ್ಬಕ್ಕೆ ಸಾಮಾನ್ಯವಾಗಿ ರಕ್ತದಾನ ಮಾಡಲಾಗುತ್ತದೆ. ಆದ್ರೆ ನಾನು ರಾಜ್ಯದ ರೈತರಿಗಾಗಿ ಮಳೆ ಅವಶ್ಯಕತೆ ಇದೆ. ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡು ರಾಜ್ಯದಲ್ಲಿ ಸಮೃದ್ಧ ಮಳೆ ಆಗಲಿ ಎಂದು ರಕ್ತದಾನ ಮಾಡಿದ್ದೇನೆ'' ಎಂದು ಶ್ರೀಕಾಂತ್ ತಿಳಿಸಿದರು.
ಪ್ರಾಣಿ ಪಕ್ಷಿಗಳಿಗೆ ನೀರಿನ ಅಭಾವ, ಮಳೆಗಾಗಿ ಪ್ರಾರ್ಥನೆ : ಮಳೆ ಇಲ್ಲದೆ ಕೆರೆ ಕಟ್ಟೆಗಳು, ಬಾವಿಗಳು ಬತ್ತಿ ಹೋಗಿದ್ದು, ಪ್ರಾಣಿ ಪಕ್ಷಿಗಳಿಗೆ ನೀರಿನ ಸಮಸ್ಯೆ ಎದುರಾಗಿದೆ. ಹೀಗಾಗಿ ಪೂಜೆ ಸಲ್ಲಿಸಿರುವ ಶ್ರೀಕಾಂತ್ ಉತ್ತಮ ಮಳೆಯಾಗಲಿ, ಕೆರೆ ಕಟ್ಟೆಗಳು, ನದಿ ತೊರೆಗಳು, ಜೀವ ಜಲದಿಂದ ತುಂಬಲಿ ಎಂದು ಹಾರೈಸಿ ರಕ್ತದಾನ ಮಾಡಿರುವುದು ಪ್ರಶಂಸನೀಯ.
ಇದನ್ನೂ ಓದಿ : ಬರೋಬ್ಬರಿ 117 ಬಾರಿ ರಕ್ತದಾನ ಮಾಡಿ ಗಿನ್ನೆಸ್ ದಾಖಲೆ ಮಾಡಿದ ಮಹಿಳೆ