ದಾವಣಗೆರೆ: ಜಿಲ್ಲೆಯ ಹೊನ್ನಾಳಿ ಅರಣ್ಯ ಪ್ರದೇಶದಲ್ಲಿ ಬೇಟೆಯಾಡಲು ಹೋದ ವ್ಯಕ್ತಿಯ ಬಳಿ 63 ಜೀವಂತ ನಾಡಬಾಂಬ್ಗಳು ಪತ್ತೆಯಾಗಿದ್ದು ಆತನನ್ನು ಬಂಧಿಸಲಾಗಿದೆ. ದೊಡ್ಡೆತ್ತಿನಹಳ್ಳಿ ಗ್ರಾಮದ ನಿವಾಸಿ ಬಸವರಾಜಪ್ಪ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ಹೊನ್ನಾಳಿ ಪ್ರಾದೇಶಿಕ ವಲಯದ ಅರಣ್ಯ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆ ವೇಳೆ ಈ ನಾಡಬಾಂಬ್ ಪತ್ತೆಯಾಗಿವೆ. ಶಿವಮೊಗ್ಗ ಮೂಲದ ವೀರಣ್ಣ ಹಾಗೂ ಬೆನವಳ್ಳಿ ಗ್ರಾಮದ ಅಪ್ಪು ಎಂಬ ಇಬ್ಬರು ಆರೋಪಿಗಳು ಕಾರ್ಯಾಚರಣೆ ವೇಳೆ ಪರಾರಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ನ್ಯಾಮತಿ ತಾಲೂಕಿನ ಹರಮಘಟ್ಟ ಅರಣ್ಯವನ್ನು ಅರೋಪಿಗಳು ಅಕ್ರಮವಾಗಿ ಪ್ರವೇಶಿಸಿದ್ದರು. ಕಾಡು ಪ್ರಾಣಿಗಳನ್ನು ಬೇಟೆಯಾಡುವ ಉದ್ದೇಶದಿಂದಲೇ ಸ್ಫೋಟಕ ಮದ್ದುಗುಂಡುಗಳನ್ನು ತಂದಿದ್ದರು. ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖೆಯ ಸಿಬ್ಬಂದಿ, ಕೂಡಲೇ ಕಾರ್ಯಾಚರಣೆ ಕೈಗೊಂಡು ಅರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಜೀವಂತ ಸ್ಫೋಟಕ ಹಾಗೂ ಮದ್ದುಗುಂಡುಗಳು ಪತ್ತೆಯಾಗಿದ್ದು, ಅವುಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು ಚಿತ್ರದುರ್ಗದ ಡಿಎಸ್ ಹಳ್ಳಿ ಸ್ಫೋಟಕ ವಸ್ತುಗಳ ಸಂಗ್ರಹಾಲಯಕ್ಕೆ ರವಾನಿಸಿದ್ದಾರೆ.
ಜಿಲ್ಲಾ ಅರಣ್ಯಧಿಕಾರಿ ಹೇಳಿದ್ದಿಷ್ಟು: ಈ ಬಗ್ಗೆ ದೂರವಾಣಿ ಮೂಲಕ ಈಟಿವಿ ಭಾರತದೊಂದಿಗೆ ಮಾತನಾಡಿದ ಜಿಲ್ಲಾ ಅರಣ್ಯಾಧಿಕಾರಿ (ಡಿಎಫ್ಒ) ಶಶಿಧರ್, "ಈ ಘಟನೆ ಮೂರು ದಿನಗಳ ಹಿಂದೆ ನಡೆದಿದೆ. ಕಾಡು ಹಂದಿ, ಮೊಲ ಸೇರಿ ಕಾಡು ಪ್ರಾಣಿಗಳ ಬೇಟೆಯಾಡಲು ಮೂರು ಜನರ ತಂಡವೊಂದು ನ್ಯಾಮತಿ ತಾಲೂಕಿನ ಹರಮಘಟ್ಟ ಅರಣ್ಯವನ್ನು ಅಕ್ರಮವಾಗಿ ಪ್ರವೇಶ ಮಾಡಿತ್ತು. ಈ ಸುದ್ದಿ ತಿಳಿದ ನ್ಯಾಮತಿ ಆರ್ಎಫ್ಒ ಕಿಶೋರ್ ಅವರ ನೇತೃತ್ವದ ತಂಡ ದಾಳಿ ಮಾಡಿತ್ತು. ಈ ವೇಳೆ ಓರ್ವನನ್ನು ಬಂಧಿಸುವಲ್ಲಿ ತಂಡ ಯಶಸ್ವಿಯಾಗಿದೆ. ಆದರೆ, ಕಾರ್ಯಾಚರಣೆ ವೇಳೆ ಇಬ್ಬರು ಪರಾರಿಯಾಗಿದ್ದು ಅವರಿಗಾಗಿ ಶೋಧ ಮುಂದುವರೆದಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮುಂಡಗೋಡದಲ್ಲಿ ನಾಡಬಾಂಬ್ ಸ್ಫೋಟ: ಕೈ ಬೆರಳು ಕಳೆದುಕೊಂಡ ಕುರಿಗಾಯಿ