ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಯಾರನ್ನು ಬೇಕಾದರೂ ತೆಗೆದುಕೊಳ್ಳಬಾರದು. ಪಕ್ಷ ನಿಷ್ಠೆ ಇರುವವರನ್ನು ಮಾತ್ರ ಸೇರಿಸಿಕೊಳ್ಳಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೂಚ್ಯವಾಗಿ ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಇಂದು ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಪಕ್ಷಕ್ಕೆ ಬರುವವರಿಗೆ ಪಕ್ಷ ನಿಷ್ಠೆ ಇರಬೇಕು. ಅಂಥವರನ್ನು ಮಾತ್ರ ಪಕ್ಷಕ್ಕೆ ಸೇರಿಸಬೇಕು ಎಂದರು. ಜಗದೀಶ್ ಶೆಟ್ಟರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಖರ್ಗೆ ಹೇಳಿಕೆ ಮಹತ್ವ ಪಡೆದಿದೆ.
ಗುಣ, ಸಿದ್ದಾಂತಗಳ ಬಗ್ಗೆ ಯೋಚಿಸಿ ಪಕ್ಷಕ್ಕೆ ಸೇರಿಸಬೇಕು. ಹೀಗೆ ಬಂದರು ಹಾಗೆ ಹೋದರು ಎಂತಾಗಬಾರದು. ನಮ್ಮದು ತತ್ವ ಸಿದ್ದಾಂತದಿಂದ ನಡೆದುಕೊಳ್ಳುವ ಪಕ್ಷ. ನಮ್ಮ ಪಕ್ಷ ಈ ತತ್ವಗಳಿಗೆ ಬದ್ಧ. ಇಂದು ಪ್ರಜಾಪ್ರಭುತ್ವಕ್ಕೆ ಧಕ್ಕೆ ಬಂದಿದೆ. ನಿರುದ್ಯೋಗ ಹೆಚ್ಚುತ್ತಿದೆ. ಇದನ್ನು ತಡೆಯಲು ಮುಂಬರುವ ಚುನಾವಣೆಯಲ್ಲಿ ಬೇರೆಯವರನ್ನು ಕರೆದುಕೊಂಡು ಬಂದು ಶಕ್ತಿ ತುಂಬುವ ಕೆಲಸ ಮಾಡಬೇಕು. ಕೆಲವರು ನಮ್ಮನ್ನು ಟೀಕಿಸುತ್ತಿದ್ದಾರೆ. ಟೀಕಿಸಲಿ ಪರವಾಗಿಲ್ಲ. ನಾವು ಸಂವಿಧಾನ, ಪ್ರಜಾಪ್ರಭುತ್ವವನ್ನು ಕಾಪಾಡಬೇಕು. ಮುಂದಿನ ಚುನಾವಣೆಯಲ್ಲಿ ಒಗ್ಗಟ್ಟಾಗಿ ಹೋರಾಡಬೇಕು ಎಂದು ಕರೆ ನೀಡಿದರು.
ಪ್ರಧಾನಿ ಆರ್ಎಸ್ಎಸ್ ಕೈಗೊಂಬೆ: ಸಂವಿಧಾನ ಅಸ್ತಿತ್ವದಲ್ಲಿ ಇರದೇ ಹೋಗಿದ್ದರೆ ಪ್ರಜಾಪ್ರಭುತ್ವ ಉಳಿಸಲು ಸಾಧ್ಯವಾಗುತ್ತಿರಲಿಲ್ಲ. ಸಂವಿಧಾನ ತಿರುಚಬೇಕು ಎಂದು ಆರ್ಎಸ್ಎಸ್, ಬಿಜೆಪಿ ಕುತಂತ್ರ ಮಾಡುತ್ತಿದೆ. ಸ್ವಾಯತ್ತ ಸಂಸ್ಥೆಗಳನ್ನು ನಾಶ ಮಾಡಲು ಬಿಜೆಪಿ ಯತ್ನಿಸುತ್ತಿದೆ. ಮೋದಿ ಆರ್ಎಸ್ಎಸ್ ಕೈಗೊಂಬೆಯಾಗಿ ನಡೆದುಕೊಳ್ಳುತ್ತಿದ್ದಾರೆ. ಆ ಮೂಲಕ ಜಾತ್ಯತೀತತೆಗೆ ಪೆಟ್ಟು ಬೀಳುತ್ತಿದೆ ಎಂದರು.
ಬಿಜೆಪಿಯವರು ಈ ದೇಶ ಕಾಪಾಡುವವವರು ಎನ್ನುತ್ತಿದ್ದಾರೆ. ಬೇರೆಯವರೆಲ್ಲರೂ ದೇಶದ್ರೋಹಿಗಳು ಎಂದು ಬಿಂಬಿಸುತ್ತಿದ್ದಾರೆ. ನಾವು ಮಾತ್ರ ದೇಶ ಪ್ರೇಮಿಗಳು ಎನ್ನುತ್ತಿದ್ದಾರೆ. ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯ ಕೊಟ್ಟಿದೆ. ಆದರೆ ಇವತ್ತು ಬಿಜೆಪಿ ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರನ್ನು ತಮ್ಮ ಕೈಗೊಂಬೆಯಾಗಿ ಇಟ್ಟುಕೊಳ್ಳುವ ಯತ್ನ ಮಾಡುತ್ತಿದೆ. ಸಂವಿಧಾನ ಉಳಿದರೆ ಮುಂದಿನ ಪೀಳಿಗೆಗೆ ಒಳ್ಳೆಯದಾಗುತ್ತದೆ, ಸಂವಿಧಾನ ಇಲ್ಲ ಅಂದರೆ ಮುಂದೆ ಯಾರಿಗೂ ಅವಕಾಶ ಇಲ್ಲ. ದೇಶದಲ್ಲಿ ಹಿಂದೆ 59 ಸಾವಿರ ಕೋಟಿ ರೂ ಸಾಲ ಇತ್ತು. ಇಂದು 1.50 ಲಕ್ಷ ಕೋಟಿ ಸಾಲವಿದೆ. ಹತ್ತು ವರ್ಷದಲ್ಲಿ ಮೋದಿ ಸರ್ಕಾರ ಎರಡು ಪಟ್ಟು ಸಾಲ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲರಿಗೂ ಅಧಿಕಾರ ಸಿಕ್ಕಿದ ಹಾಗೆಯೇ. ಸಂವಿಧಾನ ಉಳಿಸಿದರೆ ಭಾರತ ಉಳಿಸಿದ ಹಾಗೆ. ನಮ್ಮ ನಡೆ ದೇಶದ ಸಂವಿಧಾನ ಉಳಿಸುವತ್ತ ಇದೆ. ಒಗ್ಗಟ್ಟಿನ ಹೋರಾಟ ಮಾಡಬೇಕು. ನಾವು ತ್ಯಾಗಕ್ಕೆ ಸಿದ್ದರಾಗಬೇಕು ಎಂದರು.
ಇದನ್ನೂ ಓದಿ: ದೆಹಲಿಯ ಕರ್ತವ್ಯ ಪಥದಲ್ಲಿ 75ನೇ ಗಣರಾಜ್ಯೋತ್ಸವ ಪರೇಡ್: ನೇರಪ್ರಸಾರ