ಬೆಂಗಳೂರು: ಪ್ರೀತಿಗೆ ನಿರಾಕರಣೆ, ಕಿರುಕುಳ, ಆಸ್ತಿ ಕಲಹ, ಬಾಂಬ್ ಸ್ಫೋಟ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳು ರಾಜ್ಯ ಮಾತ್ರವಲ್ಲದೇ ರಾಷ್ಟ್ರದೆಲ್ಲೆಡೆ ಚರ್ಚೆಗಳಿಗೆ ಕಾರಣವಾಯಿತು. ರಾಜ್ಯದಲ್ಲಿ ಈ ವರ್ಷ ನಡೆದ ಪ್ರಮುಖ ಅಪರಾಧಗಳು ವೈಯಕ್ತಿಕ ಕಾರಣಕ್ಕಾಗಿ ನಡೆದಿರುವುದು ಗರ್ಮನಾಹವಾಗಿದೆ. ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಹೊರತುಪಡಿಸಿದರೆ ಉಳಿದೆಲ್ಲ ಪ್ರಕರಣಗಳು ಕುಳಿತು ಬಗೆಹರಿಸಿಕೊಳ್ಳಬಹುದಾಗಿದ್ದರೂ ಕಾನೂನು ಪರಿಧಿ ಮೀರಿ ಕ್ರೈಂನಲ್ಲಿ ಭಾಗಿಯಾಗಿರುವುದು ಕಳವಳಕಾರಿ. ರಾಜ್ಯದಲ್ಲಿ ನಡೆದ ಕೆಲ ಪ್ರಮುಖ ಅಪರಾಧಗಳ ಹಿನ್ನೋಟ ನೀಡಲಾಗಿದೆ.
ದಿ ರಾಮೇಶ್ವರ ಕೆಫೆ ಸ್ಫೋಟ ಪ್ರಕರಣ: ಬ್ರೂಕ್ ಫೀಲ್ಡ್ನಲ್ಲಿರುವ ರಾಮೇಶ್ವರ ಕೆಫೆಗೆ ಗ್ರಾಹಕನ ಸೋಗಿನಲ್ಲಿ ಬಂದು ಶಂಕಿತ ಉಗ್ರ ತೀರ್ಥಹಳ್ಳಿ ಮೂಲದ ಮುಸಾವಿರ್ ಹುಸೇನ್ ಶಾಜೀಬ್ ಮಾ.1 ರಂದು ಐಇಡಿ ಬಾಂಬ್ ಇಟ್ಟು ಸ್ಫೋಟಿಸಿದ ಘಟನೆ ರಾಜಧಾನಿಯನ್ನೇ ಬೆಚ್ಚಿ ಬೀಳಿಸಿತ್ತು. ಘಟನೆಯಲ್ಲಿ 9 ಮಂದಿ ಗಾಯಗೊಂಡಿದ್ದರು. ಬಸ್ನಲ್ಲಿ ಸಾಮಾನ್ಯ ಪ್ರಯಾಣಿಕಂತೆ ಪ್ರಯಾಣಿಸಿ ಬಾಂಬ್ ಸ್ಫೋಟಿಸಿರುವುದು ವಿಡಿಯೊ ವೈರಲ್ ಆಗಿದ್ದವು. ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡ ಎನ್ಐಎ ಅಧಿಕಾರಿಗಳು, ಸತತ ಕಾರ್ಯಾಚರಣೆ ನಡೆಸಿ ಬಾಂಬ್ ಇಟ್ಟಿದ್ದ ಮುಸಾವೀರ್ ಹುಸೇನ್, ಮಾಸ್ಟರ್ ಮೈಂಡ್ ಅಬ್ದುಲ್ ಮತಿನ್ ತಾಹ ಅವರನ್ನ ಪಶ್ಚಿಮ ಬಂಗಾಳದಲ್ಲಿ ಬಂಧಿಸಲಾಗಿತ್ತು. ಶಂಕಿತರಿಗೆ ಆಶ್ರಯ ನೀಡಿದ್ದ ಮುಜಾಮಿಲ್ ಷರೀಫ್ ಹಾಗೂ ಕೃತ್ಯವೆಸಗಲು ಒಳಸಂಚು ರೂಪಿಸಿದ್ದ ಮಾಜ್ ಮುನೀರ್ ಎಂಬುವರನ್ನ ಬಂಧಿಸಿ ಸೆ.8ರಂದು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ಅಯ್ಯೋಧೆ ರಾಮಮಂದಿರ ಉದ್ಘಾಟನೆ ದಿನವೇ ಮಲ್ಲೇಶ್ವರ ಬಿಜೆಪಿ ಕಚೇರಿ ಬಳಿ ಬಾಂಬ್ ಇಟ್ಟು ವಿಫಲರಾಗಿದ್ದರಿಂದ ಮಾ.1ರಂದು ರಾಮೇಶ್ವರ ಕೆಫೆಗೆ ಬಾಂಬ್ ವಿಟ್ಟು ಸ್ಫೋಟಿಸಿದ್ದ ಎಂದು ತನಿಖೆಯಲ್ಲಿ ಎನ್ಐಎ ಅಧಿಕಾರಿಗಳು ಕಂಡುಕೊಂಡಿದ್ದರು.
ಯುವತಿಯನ್ನ ಕೊಂದು ತುಂಡು ತುಂಡಾಗಿ ಕತ್ತರಿಸಿ ಪ್ರಿಡ್ಜ್ನಲ್ಲಿಟ್ಟ ಭೂಪ: ದೇಶದೆಲ್ಲೆಡೆ ತೀವ್ರ ಸಂಚಲನ ಮೂಡಿಸಿದ್ದ ವೈಯಾಲಿಕಾವಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆ.2ರಂದು ಈ ಕೃತ್ಯ ನಡೆದಿತ್ತು. ಸೆ.21ರಂದು ನಡೆದಿದ್ದ ಒಂಟಿ ಮಹಿಳೆ ಮಹಾಲಕ್ಷ್ಮಿ ಬರ್ಬರ ಹತ್ಯೆ ಪ್ರಕರಣ ಬೆಳಕಿಗೆ ಬಂದಿತ್ತು. ಮದುವೆ ನಿರಾಕರಣೆ ಸಂಬಂಧ ಆರೋಪಿ ಮುಕ್ತಿರಂಜನ್ ರಾಯ್ ನಡುವೆ ಮಹಾಲಕ್ಷ್ಮಿ ವೈಮನ್ಸಸು ಮೂಡಿತ್ತು. ಆಕೆಯ ವರ್ತನೆಯಿಂದ ಅಸಮಾಧಾನಗೊಂಡು ಆಕೆಯ ಮನೆಯಲ್ಲೇ ಚಾಕುವಿನಿಂದ ಹತ್ಯೆ ಮಾಡಿದ್ದ. ಯಾರಿಗೂ ತಿಳಿಯದಿರಲು ದೇಹವನ್ನ ಆ್ಯಕ್ಸಲ್ ಬ್ಲೇಡ್ನಿಂದ 59 ತುಂಡುಗಳಾಗಿ ಮಾಡಿ ಪ್ರಿಡ್ಜ್ನಲ್ಲಿದ್ದ. ಬಾತ್ ರೂಮಿನಲ್ಲಿ ರಕ್ತದ ಕಲೆಗಳನ್ನ ಆ್ಯಸಿಡ್ನಿಂದ ಸ್ವಚ್ಛಗೊಳಿಸಿ ಸಾಕ್ಷ ನಾಶ ಮಾಡಿದ್ದ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ವಿಶೇಷ ತಂಡ ರಚಿಸಿ ಆರೋಪಿಯ ಜಾಡು ಹತ್ತಿದ್ದ ಪೊಲೀಸರು, ಇನ್ನೇನು ಬಂಧಿಸಬೇಕು ಎನ್ನುವಷ್ಟರಲ್ಲಿ ಬಂಧನ ಭೀತಿಯಿಂದ ಒಡಿಶಾದ ಭದ್ರಕ್ ಜಿಲ್ಲೆಯ ತನ್ನ ತವರು ಗ್ರಾಮದ ಸಮೀಪ ಮರವೊಂದಕ್ಕೆ ನೇಣುಬಿಗಿದುಕೊಂಡು ಸೆ.24ರಂದು ಆತ್ಮಹತ್ಯೆ ಮಾಡಿಕೊಂಡಿದ್ದ.
ಹುಬ್ಬಳ್ಳಿಯಲ್ಲಿ ಬೆಚ್ಚಿ ಬೀಳಿಸಿದ್ದ ನೇಹಾ, ಅಂಜಲಿ ಹತ್ಯೆಗಳು: ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ನಡೆದಿದ್ದ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನಯ್ಯ ಹಿರೇಮಠ ಎಂಬವರ ಪುತ್ರಿ ನೇಹಾ ಹಿರೇಮಠ ಕೊಲೆ ಪ್ರಕರಣ ರಾಜ್ಯದೆಲ್ಲೆಡೆ ತೀವ್ರ ಸಂಚಲನಕ್ಕೆ ಕಾರಣವಾಯಿತು. ಮದುವೆಗೆ ನಿರಾಕರಿಸಿದಕ್ಕೆ ನೇಹಾಳನ್ನ ಸಹಪಾಠಿ ಫಯಾಜ್ ಚಾಕುವಿನಿಂದ ಹತ್ಯೆ ಮಾಡಿದ ಆರೋಪದಡಿ ಆತನನ್ನ ಬಂಧಿಸಲಾಗಿತ್ತು. ಸರ್ಕಾರವು ತನಿಖೆಗೆ ಸಿಐಡಿಗೆ ವರ್ಗಾಯಿಸಿತ್ತು. ಮದುವೆಗೆ ಒಲ್ಲೆ ಎಂದಿದಕ್ಕೆ ಫಯಾಜ್ ಹತ್ಯೆ ಮಾಡಿರುವುದಾಗಿ ಚಾರ್ಜ್ ಶೀಟ್ನಲ್ಲಿ ಹೇಳಲಾಗಿತ್ತು.
ನೇಹಾ ಹತ್ಯೆಯಾದ ತಿಂಗಳು ಕಳೆಯುವ ಬೆನ್ನಲ್ಲೇ ಅಂಜಲಿ ಅಂಬಿಗೇರ ಎಂಬ ಯುವತಿಯನ್ನ ಪ್ರಿಯಕರ ಗೀರಿಶ್ ಸಾವಂತ ಹತ್ಯೆ ಮಾಡಿದ್ದ. ಮೇ.15ರಂದು ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಅಂಜಲಿಯನ್ನ ಕೊಲೆ ಮಾಡಿ ರೈಲಿನಲ್ಲಿ ಪ್ರಯಾಣಿಸುವಾಗ ಮಹಿಳಾ ಪ್ರಯಾಣಿಕರೊಂದಿಗೆ ಜಗಳವಾಡಿ ಹಲ್ಲೆಗೊಳಗಾಗಿದ್ದ. ದಾವಣಗೆರೆ ಪೊಲೀಸರು ಆತನನ್ನು ವಶಕ್ಕೆ ಪಡೆದು ಬಳಿಕ ಹುಬ್ಬಳ್ಳಿ ಪೊಲೀಸರ ಸುಪರ್ದಿಗೆ ಒಪ್ಪಿಸಿದ್ದರು. ಈ ಪ್ರಕರಣವನ್ನ ಸಿಐಡಿ ತನಿಖೆ ನಡೆಸಿದ ಚಾರ್ಜ್ ಶೀಟ್ ಸಲ್ಲಿಸಿತ್ತು. ಮೊಬೈಲ್ ನಂಬರ್ ಬ್ಲಾಕ್ ಮಾಡಿದಕ್ಕೆ ಕೋಪಗೊಂಡು ಗಿರೀಶ್ ಹತ್ಯೆ ಮಾಡಿದ್ದ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖವಾಗಿತ್ತು. ಹತ್ಯೆ ಮಾಡುವ ಮುನ್ನ ಆರೋಪಿಯು ನೇಹಾ ರೀತಿ ಹತ್ಯೆ ಮಾಡುವುದಾಗಿ ಧಮಕಿ ಹಾಕಿದ್ದ. ದೂರು ನೀಡಿದರೂ ನಿರ್ಲಕ್ಷ್ಯವಹಿಸಿದ ಆರೋಪದಡಿ ಡಿಸಿಪಿ, ಎಸಿಪಿ, ಇನ್ಸ್ಪೆಕ್ಟರ್ ಒಳಗೊಂಡಂತೆ ನಾಲ್ವರನ್ನ ಸರ್ಕಾರವು ಸಸ್ಪೆಂಡ್ ಮಾಡಿತ್ತು.
ಒಟ್ಟಾರೆ ಎರಡು ಹತ್ಯೆ ಪ್ರಕರಣಗಳು ಅವಳಿ ನಗರವನ್ನೇ ಬೆಚ್ಚಿ ಬೀಳಿಸಿತ್ತು.
ಟೆಕ್ಕಿ ಆತುಲ್ ಸುಭಾಷ್ ಆತ್ಮಹತ್ಯೆ: ಪತ್ನಿಯ ಕಿರುಕುಳ ತಾಳಲಾರದೇ ಸುದೀರ್ಘ ಡೆತ್ ನೋಟ್ ಬರೆದು ಹಾಗೂ ವಿಡಿಯೋ ಮಾಡಿ ಡಿ.9ರಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಶರಣಾದ ಟೆಕ್ಕಿ ಆತುಲ್ ಸುಭಾಷ್ ಘಟನೆಯು ರಾಷ್ಟ್ರದ್ಯಾದಂತ ಚರ್ಚೆಗೆ ಗ್ರಾಸವಾದವು. ಪ್ರಸ್ತುತವಿರುವ ಮಹಿಳಾ ಪರವಿರುವ ನ್ಯಾಯದಾನದ ವ್ಯವಸ್ಥೆ ಬದಲಾಯಿಸಬೇಕೆಂದು ಒತ್ತಾಯ ಕೇಳಿ ಬಂದವು. ಸಾಮಾಜಿಕ ಜಾಲತಾಣದಲ್ಲಂತೂ ಟೆಕ್ಕಿ ಸುಸೈಡ್ ಕೇಸ್ ಟ್ರೆಂಡ್ ಆಗಿತ್ತು. ಘಟನೆ ಸಂಬಂಧ ಮಾರತ್ ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಉತ್ತರ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ಟೆಕ್ಕಿ ಪತ್ನಿ ನಿಖಿತಾ ಸಿಂಘಾನಿಯಾ ಸೇರಿದಂತೆ ಮೂವರನ್ನ ಬಂಧಿಸಿದ್ದರು. ಸದ್ಯ ಈ ಮೂವರು ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
ಬೆಂಗಳೂರು ಹೊರವಲಯ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಿ.ಆರ್.ಫಾರ್ಮ್ ಹೌಸ್ನಲ್ಲಿ ನಡೆದಿದ್ದ ರೇವ್ ಪಾರ್ಟಿಯಲ್ಲಿ ಮಾದಕವಸ್ತು ಸೇವನೆ ಆರೋಪದಡಿ ತೆಲುಗು ನಟಿ ಹೇಮಾ ಹಾಗೂ ಪಾರ್ಟಿ ಆಯೋಜಕರು ಒಳಗೊಂಡಂತೆ ಐವರ ಬಂಧನವಾಗಿತ್ತು. ಬಿಟ್ ಕಾಯಿನ್ ಪ್ರಕರಣ ಕೂಡ ಸದ್ದು ಮಾಡಿದ್ದು, ಹಗರಣದಲ್ಲಿ ವಿಶೇಷ ತನಿಖಾ ತಂಡವು ಇಬ್ಬರು ಇನ್ಸ್ಪೆಕ್ಟರ್ಗಳನ್ನ ಬಂಧಿಸಿತ್ತು.
ಹಾವೇರಿ ಸಾಮೂಹಿಕ ಅತ್ಯಾಚಾರ: ವರ್ಷಾರಂಭದಲ್ಲಿ ಹಾವೇರಿಯ ಹಾನಗಲ್ ತಾಲೂಕಿನ ಲಾಡ್ಜ್ವೊಂದರಲ್ಲಿ ತಂಗಿದ್ದ ಜೋಡಿ ಮೇಲೆ ಹಲ್ಲೆ ಮಾಡಿ ಯುವತಿಯನ್ನ ಕಾಡಿಗೆ ಕರೆದೊಯ್ದು ಸಾಮೂಹಿಕ ಆತ್ಯಾಚಾರವೆಸಗಿದ್ದ ಆರೋಪದಡಿ 19 ಮಂದಿ ಆರೋಪಿಗಳನ್ನ ಬಂಧಿಸಲಾಗಿತ್ತು. ಜ.8ರಂದು ಜೋಡಿಯೊಂದು ಲಾಡ್ಜ್ವೊಂದರಲ್ಲಿ ತಂಗಿತ್ತು. ಈ ಬಗ್ಗೆ ಕೆಲವರು ನೀಡಿದ ಮಾಹಿತಿ ಮೇರೆಗೆ ಯುವಕರ ಗುಂಪು ಏಕಾಏಕಿ ಲಾಡ್ಜ್ಗೆ ನುಗ್ಗಿತ್ತು. ನೀರು ಬರುತ್ತಿದ್ದೆಯೇ ಎಂದು ಚೆಕ್ ಮಾಡುವ ನೆಪದಲ್ಲಿ ರೂಂ ಬಾಗಿಲು ತೆರೆಯುವಂತೆ ಜೋಡಿಗೆ ಹೇಳಿದ್ದರು. ಬಳಿಕ ರೂಂಗೆ ನುಗ್ಗಿ ಹಲ್ಲೆ ಮಾಡಿದ ವಿಡಿಯೋ ವೈರಲ್ ಆಗಿತ್ತು. ನಂತರ ಮಹಿಳೆಯನ್ನು ಲಾಡ್ಜ್ನಿಂದ ಹೊರಗೆ ಕರೆದುಕೊಂಡು ಬಂದು ಧಮ್ಕಿ ಹಾಕಿದ್ದ ವಿಡಿಯೋ ವೈರಲ್ ಆಗಿತ್ತು. ಆ ಬಳಿಕ ಹಲ್ಲೆಗೈದವರ ವಿರುದ್ಧ ದೂರು ದಾಖಲಾಗಿತ್ತು.
ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣ: ಆಸ್ತಿ ಕಲಹದ ಹಿನ್ನೆಲೆಯಲ್ಲಿ ತಂದೆ-ತಾಯಿಗೆ ಹತ್ಯೆಗೆ ಮಗನಿಂದಲೇ ಸುಪಾರಿ ನೀಡಿದ ಆರೋಪದ ಹಿನ್ನೆಲೆಯಲ್ಲಿ ಆರೋಪಿಗಳು ತಪ್ಪಾಗಿ ಭಾವಿಸಿ ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿರುವ ಘಟನೆ ಗದಗದಲ್ಲಿ ನಡೆದಿತ್ತು. ಪ್ರಕರಣ ಸಂಬಂಧ 8 ಮಂದಿ ಆರೋಪಿಗಳನ್ನ ಗದಗ ಪೊಲೀಸರು ಬಂಧಿಸಿದ್ದರು. ಗದಗ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಅವರ ಪುತ್ರ ಸೇರಿದಂತೆ ನಾಲ್ವರನ್ನ ಏ.19 ರಂದು ಕೊಲೆ ಮಾಡಲಾಗಿತ್ತು.
4 ವರ್ಷದ ಮಗು ಕೊಂದು ಸೂಟ್ಕೇಸ್ನಲ್ಲಿ ತಂದ ತಾಯಿ: ಸ್ಟಾರ್ಟ್ ಅಪ್ ಕಂಪನಿಯಲ್ಲಿ ಸಿಇಒ ಆಗಿದ್ದ ಬೆಂಗಳೂರಿನ ಸುಚನಾ ಸೇಠ್ ಎಂಬ ಮಹಿಳೆ ಜನವರಿ 08ರಂದು ತನ್ನ 4 ವರ್ಷದ ಮಗುವನ್ನು ಗೋವಾದಲ್ಲಿ ಕೊಂದು ಕರ್ನಾಟಕಕ್ಕೆ ಸೂಟ್ಕೇಸ್ನಲ್ಲಿ ತಂದಿದ್ದ ಪ್ರಕರಣ ಬೆಚ್ಚಿ ಬೀಳಿಸಿತ್ತು. ಆರೋಪಿ ಸುಚನಾ ಸೇಠ್ ದಿ ಮೈಂಡ್‌ಫುಲ್ ಅಲ್ ಲ್ಯಾಬ್ ಎಂಬ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್(ಎಐ) ಸ್ಟಾರ್ಟ್‌ಅಪ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ)ಆಗಿದ್ದರು. ಶವಪರೀಕ್ಷೆ ವರದಿಯಲ್ಲಿ ಮಗುವನ್ನು ಉಸಿರುಗಟ್ಟಿಸಿ ಕೊಲ್ಲಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಮಂಡ್ಯ ಜಿಲ್ಲೆಯಲ್ಲಿ ಮಾ. 19ರಂದು ಮಹಿಳೆ ಮತ್ತು ಆಕೆಯ ಮೊಮ್ಮಗಳನ್ನು ಕೊಲೆ ಮಾಡಿದ್ದ ಘಟನೆ ಕೂಡಾ ನಡೆದಿತ್ತು. ಕೊಲೆ ಬಳಿಕ ಇಬ್ಬರ ಮೃತದೇಹಳನ್ನು ಹಲವು ತುಂಡುಗಳಾಗಿ ಕತ್ತರಿಸಿ ಬೆಳ್ಳೂರು ಕೆರೆಗೆ ಎಸೆಯಲಾಗಿತ್ತು. ಘಟನೆ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು.
ಮಾಗಡಿ 4 ವರ್ಷದ ಬಾಲಕಿ ಅತ್ಯಾಚಾರ, ಕೊಲೆ: ಜುಲೈ 23, 2024ರಂದು ನಾಲ್ಕು ವರ್ಷದ ಬಾಲಕಿ ಅತ್ಯಾಚಾರ ಮತ್ತು ಕೊಲೆ ಮಾಡಿದ ಘಟನೆ ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣವನ್ನು ಬೆಚ್ಚಿಬೀಳಿಸಿತ್ತು. ಆರೋಪಿಯು ಅಪ್ರಾಪ್ತೆಗೆ ಐಸ್ ಕ್ರೀಂ ನೀಡುವ ಆಮಿಷವೊಡ್ಡಿ ಕರೆದೊಯ್ದು ದುಷ್ಕೃತ್ಯ ಎಸಗಿದ್ದ. ಈ ಬಗ್ಗೆ ಪೋಕ್ಸೋ ಕಾಯ್ದೆಯಡಿ ಆರೋಪಿಯನ್ನು ಬಂಧಿಸಲಾಗಿದೆ.
ಉಡುಪಿಯ ಕುಟುಂಬದ ಹತ್ಯೆ: 12 ನವೆಂಬರ್, 2023ರಂದು ಏರ್ ಇಂಡಿಯಾ ಕ್ಯಾಬಿನ್ ಸಿಬ್ಬಂದಿ ತನ್ನ ಸಹೋದ್ಯೋಗಿ ಹಾಗೂ ಕುಟುಂಬಸ್ಥರನ್ನು ಹತ್ಯೆ ಮಾಡಿದ ಘಟನೆ ಉಡುಪಿಯ ನೇಜಾರು ಗ್ರಾಮದಲ್ಲಿ ನಡೆದಿತ್ತು. ಗಗನಸಖಿ ಐನಾಜ್ ಎಂ (21), ಆಕೆಯ ತಾಯಿ ಹಸೀನಾ ಎಂ (47), ಸಹೋದರಿ ಅಫ್ನಾನ್ ಎಂ.ಎನ್. (23) ಹಾಗೂ ಸಹೋದರ ಅಸೀಮ್ ಎಂ. (14) ಎಂಬಾತನನ್ನು ಚಾಕುವಿನಿಂದ ಇರಿದು ಅಮಾನುಷವಾಗಿ ಹತ್ಯೆ ಮಾಡಲಾಗಿತ್ತು. ಬಳಿಕ ಕೊಲೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.
ಜೈನ ಮುನಿ ಹತ್ಯೆ ಪ್ರಕರಣ: 05 ಜುಲೈ, 2023ರಂದು ಬೆಳಗಾವಿಯ ಚಿಕ್ಕೋಡಿಯ ಗ್ರಾಮದಲ್ಲಿನ ಆಶ್ರಮದಿಂದ ಜೈನ ಮುನಿ ಶ್ರೀ ಕಾಮಕುಮಾರ ನಂದಿ ಮಹಾರಾಜರು ನಾಪತ್ತೆಯಾಗಿದ್ದರು. ಬಳಿಕ ಮುನಿಯವರನ್ನು ಕೊಲೆ ಮಾಡಿ, ದೇಹವನ್ನು 400 ಅಡಿ ಬೋರ್‌ವೆಲ್‌ನಲ್ಲಿ ವಿಲೇವಾರಿ ಮಾಡಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ತದನಂತರ, ಪ್ರಕರಣದ ತನಿಖೆಯನ್ನು ಸರ್ಕಾರವು ಜುಲೈ 19ರಂದು ಸಿಐಡಿಗೆ ವಹಿಸಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣ: 9 ಜೂನ್ ರಂದು ನಡೆದ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಕೂಡ ರಾಜ್ಯವನ್ನು ಬೆಚ್ಚಿ ಬೀಳಿಸಿತ್ತು. ಪ್ರಕರಣ ಸಂಬಂಧ ನಟ ದರ್ಶನ್ ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು.
ಇದಷ್ಟೇ ಅಲ್ಲದೇ ಕಡಬದ ಆ್ಯಸಿಡ್ ದಾಳಿನ ಪ್ರಕರಣ, ಬೆಳಗಾವಿಯ ಮಹಿಳೆಯರ ಮೇಲೆ ಹಲ್ಲೆ ಪ್ರಕರಣ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳು ರಾಜ್ಯ ಮಾತ್ರವಲ್ಲದೆ ರಾಷ್ಟ್ರದೆಲ್ಲೆಡೆ ಚರ್ಚೆಗಳಿಗೆ ಕಾರಣವಾದವು.