ಬೆಳಗಾವಿ: ಕುಂದಾನಗರಿ ಈಗ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವಕ್ಕೆ ಸಜ್ಜಾಗುತ್ತಿದೆ. ಇದರ ನಡುವೆ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಸುವರ್ಣ ವಿಧಾನಸೌಧದಲ್ಲಿ ಮಹಾತ್ಮ ಗಾಂಧೀಜಿ ಅವರ ಇಡೀ ಜೀವನ ಸಾರುವ ಚಿತ್ರಗಳ ಪ್ರದರ್ಶನ ಆಯೋಜಿಸಲಾಗಿದೆ. ಕಲಾಪ ವೀಕ್ಷಣೆಗೆ ಸುವರ್ಣ ಸೌಧಕ್ಕೆ ಬರುತ್ತಿರುವ ವಿದ್ಯಾರ್ಥಿಗಳು, ಸಾರ್ವಜನಿಕರು ಮಹಾತ್ಮ ಗಾಂಧೀಜಿ ಅವರ ಚಿತ್ರಗಳನ್ನೂ ಕಂಡು ಇತಿಹಾಸವನ್ನು ಮೆಲುಕು ಹಾಕುತ್ತಿದ್ದಾರೆ.
ಬೆಳಗಾವಿಯಲ್ಲಿ 1924ರ ಡಿ.26, 27ರಂದು ನಡೆದ ಕಾಂಗ್ರೆಸ್ ಅಧಿವೇಶನ ಮಹಾತ್ಮ ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ ಏಕೈಕ ಅಧಿವೇಶನ. ಈ ಐತಿಹಾಸಿಕ ಅಧಿವೇಶನಕ್ಕೆ ಈಗ ಶತಮಾನದ ಸಂಭ್ರಮ. ಹಾಗಾಗಿ, ರಾಜ್ಯ ಸರ್ಕಾರ ವರ್ಷವಿಡೀ 'ಗಾಂಧಿ ಭಾರತ' ಹೆಸರಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಅದರ ಭಾಗವಾಗಿ ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಕೆಆರ್‌ಐಡಿಎಲ್ ವತಿಯಿಂದ ಸುವರ್ಣ ವಿಧಾನಸೌಧದಲ್ಲಿ ಗಾಂಧಿ ಅವರ ವಿಶೇಷ ಫೋಟೋಗಳ ಪ್ರದರ್ಶನ ಆಯೋಜಿಸಲಾಗಿದೆ. ದೆಹಲಿಯ ಗಾಂಧಿ ಮ್ಯೂಸಿಯಂನಿಂದ ಈ ಫೋಟೋಗಳನ್ನು ತರಲಾಗಿದ್ದು, ಗಾಂಧೀಜಿಯ ಇಡೀ ಜೀವನವನ್ನು ಫೋಟೋಗಳಲ್ಲಿ ನೋಡಬಹುದು.
ಸುವರ್ಣ ವಿಧಾನಸೌಧದ ನೆಲಮಹಡಿ ಮತ್ತು ವಿದ್ಯಾರ್ಥಿಗಳು ಕಲಾಪ ವೀಕ್ಷಿಸಲು ತೆರಳುವ ಮಾರ್ಗದಲ್ಲಿ 130 ಅಪರೂಪದ ಫೋಟೋಗಳನ್ನು ಪ್ರದರ್ಶನಕ್ಕಿಡಲಾಗಿದೆ. ಗಾಂಧೀಜಿ ಹುಟ್ಟಿದ ಮನೆ, ಕಲಿತ ಶಾಲೆ, ಚಳುವಳಿಯಲ್ಲಿ ಪಾಲ್ಗೊಂಡಿದ್ದು, ಮಗುವನ್ನು ಮುದ್ದಾಡುತ್ತಿರುವುದೂ ಸೇರಿ ವಿವಿಧ ಫೋಟೋಗಳನ್ನು ನಾಡಿನ ವಿವಿಧೆಡೆಯಿಂದ ಆಗಮಿಸುವ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಕಣ್ತುಂಬಿಕೊಂಡು, ಫೋಟೋ ಕ್ಲಿಕ್ಕಿಸಿಕೊಂಡು ಖುಷಿಪಡುತ್ತಿದ್ದಾರೆ.
![ಬಾಪೂಜಿ ಜೀವನ ಚರಿತ್ರೆ ಸಾರುವ ಫೋಟೋಗಳ ಪ್ರದರ್ಶನ](https://etvbharatimages.akamaized.net/etvbharat/prod-images/16-12-2024/bgm-gandhiji-exhibition-special-story_16122024110342_1612f_1734327222_184.jpg)
ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ವೀಣಾ ಹೆಗಡೆ 'ಈಟಿವಿ ಭಾರತ್' ಜೊತೆಗೆ ಮಾತನಾಡಿ, "ಸುವರ್ಣ ಸೌಧದೊಳಗೆ ನಾವು ಬರುತ್ತಿದ್ದಂತೆ ಗಾಂಧೀಜಿ ಫೋಟೋಗಳನ್ನು ನೋಡಿದಾಗ ಅವರ ಚಳುವಳಿ ನಮ್ಮ ಕಣ್ಮುಂದೆ ಬಂತು. ಅದೇ ರೀತಿ ಮಕ್ಕಳ ಮೇಲೆ ಅವರಿಗಿದ್ದ ಪ್ರೀತಿ ತಿಳಿಯಿತು. ಅವರ ಇಡೀ ಜೀವನ ಒಮ್ಮೆ ಸ್ಮೃತಿ ಪಟಲದ ಮೇಲೆ ಬಂದು ಹೋಯಿತು. ಗಾಂಧಿ ಅವರ ಅಹಿಂಸೆ, ಸತ್ಯ, ಸರಳತೆ ಮಾರ್ಗ ನನಗೆ ಪ್ರೇರಣೆ" ಎಂದರು.
![ಮಹಾತ್ಮ ಗಾಂಧೀಜಿ ಅವರ ಫೋಟೋ](https://etvbharatimages.akamaized.net/etvbharat/prod-images/16-12-2024/bgm-gandhiji-exhibition-special-story_16122024110342_1612f_1734327222_836.jpg)
ಮರಿಕಟ್ಟಿ ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ರದ್ಧಾ ಪರವೆನ್ನವರ ಮಾತನಾಡಿ, "ಮಹಾತ್ಮ ಗಾಂಧೀಜಿ ಅವರ ಎಲ್ಲಾ ಫೋಟೋಗಳನ್ನು ಒಂದೇ ಕಡೆ ನೋಡಲು ಅವಕಾಶ ಸಿಕ್ಕಿದ್ದಕ್ಕೆ ತುಂಬಾ ಸಂತೋಷವಾಯಿತು. ಮಗುವನ್ನು ಮುದ್ದಾಡುತ್ತಿರುವ ಫೋಟೋ ನನಗೆ ತುಂಬಾ ಇಷ್ಟವಾಯಿತು. ಗಾಂಧೀಜಿ ನಮಗೆ ಎಂದೆಂದೂ ಸ್ಫೂರ್ತಿ. ಗಾಂಧಿ ದರ್ಶನ ಮಾಡಿಸಿದ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಧನ್ಯವಾದ" ಎಂದು ಹೇಳಿದರು.
![ಮಹಾತ್ಮ ಗಾಂಧೀಜಿ ಅವರ ಫೋಟೋ](https://etvbharatimages.akamaized.net/etvbharat/prod-images/16-12-2024/bgm-gandhiji-exhibition-special-story_16122024110342_1612f_1734327222_480.jpg)
ಕೆಂಗಾನೂರ ಸರ್ಕಾರ ಪ್ರೌಢಶಾಲೆ ಶಿಕ್ಷಕ ಮಡಿವಾಳಯ್ಯ ಪೂಜೇರ ಮಾತನಾಡಿ, "ಕಲಾಪ ವೀಕ್ಷಣೆಗೆ ನಮ್ಮ ಶಾಲೆಯ ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದಿದ್ದೇವೆ. ಇಲ್ಲಿ ಗಾಂಧಿ ಅವರ ಜೀವನ ಚರಿತ್ರೆ ಸಾರುವ ಫೋಟೋಗಳನ್ನು ಮಕ್ಕಳು ತುಂಬಾ ಆನಂದದಿಂದ ವೀಕ್ಷಿಸಿದರು. ಒಂದೆಡೆ ಕಲಾಪ ವೀಕ್ಷಣೆ ಮಾಡಿದರೆ, ಮತ್ತೊಂದೆಡೆ ಬಾಪೂಜಿ ವಿಚಾರಧಾರೆ ತಿಳಿಯುವ ಸುವರ್ಣ ಅವಕಾಶವೂ ಸಿಕ್ಕಿದ್ದು, ಗಾಂಧೀಜಿ ವ್ಯಕ್ತಿತ್ವದಿಂದ ಪ್ರೇರಿತರಾಗಿ ನಮ್ಮ ಮಕ್ಕಳು ಅವರಂತೆ ದೊಡ್ಡ ಸಾಧನೆ ಮಾಡಲಿ ಎಂಬುದು ನಮ್ಮ ಆಶಯ" ಎಂದರು.
![ರಾಷ್ಟ್ರಪಿತ ಮಹಾತ್ಮ ಗಾಂಧೀಜಿ](https://etvbharatimages.akamaized.net/etvbharat/prod-images/16-12-2024/bgm-gandhiji-exhibition-special-story_16122024110342_1612f_1734327222_534.jpg)
ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಶಿಂಧೆ ಮಾತನಾಡಿ, "1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ಮಹಾತ್ಮ ಗಾಂಧೀಜಿ ವಹಿಸಿದ್ದರು. ಹಾಗಾಗಿ, ಅವರ ತತ್ವಾದರ್ಶಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲು ಸೌಧದಲ್ಲಿ ಫೋಟೋಗಳ ಪ್ರದರ್ಶನ ಏರ್ಪಡಿಸಿದ್ದೇವೆ. ಫೋಟೋ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಾಪೂಜಿ ವಿಚಾರಧಾರೆಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು" ಎಂದು ಕರೆ ನೀಡಿದರು.
![ಮಹಾತ್ಮ ಗಾಂಧೀಜಿ ಅವರ ಚಿತ್ರಗಳನ್ನು ವೀಕ್ಷಿಸುತ್ತಿರುವ ವಿದ್ಯಾರ್ಥಿಗಳು](https://etvbharatimages.akamaized.net/etvbharat/prod-images/16-12-2024/bgm-gandhiji-exhibition-special-story_16122024110342_1612f_1734327222_438.jpg)
ಇದನ್ನೂ ಓದಿ: ಹಾವೇರಿ : ಪ್ಲಾಸ್ಟಿಕ್ ಮಾಲೆಗಳ ಪೈಪೋಟಿ ನಡುವೆಯೂ ಖ್ಯಾತಿ ಉಳಿಸಿಕೊಂಡ ನೈಜ ಏಲಕ್ಕಿ ಹಾರ