ಕಾರವಾರ: ಕಾಳಿ ನದಿಗೆ ಬಿದ್ದಿದ್ದ ಲಾರಿಯನ್ನು ಎರಡು ದಿನಗಳ ಕಾರ್ಯಾಚರಣೆ ಬಳಿಕ ಕೊನೆಗೂ ಗುರುವಾರ ಸಂಜೆ ಕ್ರೇನ್ ಮೂಲಕ ಎಳೆದು ನದಿ ದಡಕ್ಕೆ ತರಲಾಗಿದೆ. ಮುಳುಗು ತಜ್ಞ ಈಶ್ವರ್ ಮಲ್ಪೆ, ಕಾರ್ಮಿಕ ಸಣ್ಯಾ ಸಿದ್ದಿ ಎಂಬವರು ನೀರಿನಾಳದಲ್ಲಿ ಸಾಹಸಮಯ ಪ್ರದರ್ಶನ ತೋರಿ, ಯಶಸ್ವಿಯಾಗಿ ಲಾರಿ ಎಳೆದು ಮೇಲಕ್ಕೆ ತಂದಿದ್ದಾರೆ. ಐಆರ್‌ಬಿ ಕಂಪೆನಿ ಜೊತೆಗೆ ಎನ್‌ಡಿಆರ್‌ಎಫ್, ಕರಾವಳಿ ಕಾವಲು ಪಡೆ, ಪೊಲೀಸರು ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಕಾಳಿ ನದಿಯ ಹಳೆಯ ಸೇತುವೆಯು ಆಗಸ್ಟ್ 6ರ ರಾತ್ರಿ ದಿಢೀರ್ ಕುಸಿತಗೊಂಡಿದ್ದರಿಂದ, ಲಾರಿ ನದಿಗೆ ಬಿದ್ದಿತ್ತು. ಬಳಿಕ ಲಾರಿ ಕ್ಯಾಬಿನ್ ಮೇಲೆ ಕುಳಿತಿದ್ದ ತಮಿಳುನಾಡು ಮೂಲದ ಚಾಲಕನನ್ನು ಸ್ಥಳೀಯ ಮೀನುಗಾರರು ಹಾಗೂ ಪೊಲೀಸರು ರಕ್ಷಣೆ ಮಾಡಿದ್ದರು. ನದಿಯಲ್ಲಿದ್ದ ಲಾರಿ ಮೇಲೆತ್ತಲು ಗುರುವಾರ ಮುಂಜಾನೆಯಿಂದಲೇ ಆರಂಭಗೊಂಡಿದ್ದ ಕಾರ್ಯಾಚರಣೆಯಲ್ಲಿ ಈಶ್ವರ್ ಮಲ್ಪೆ ತಂಡ ಹಾಗೂ ಇಮ್ರಾನ್ ಕ್ರೇನ್ ಸರ್ವಿರ್ಸ್ನ ಕಾರ್ಮಿಕರು ನದಿಯ ಆಳದಲ್ಲಿ ಸೇತುವೆ ಸ್ಲಾಬ್ ಮೇಲಿದ್ದ ಲಾರಿಗೆ ರೋಪ್ ಬಿಗಿಯಲು ಹಲವು ಗಂಟೆ ಬೇಕಾಯಿತು.
ಬಳಿಕ ಎರಡು ಕ್ರೇನ್ಗಳ ರೋಪ್ ಮೂಲಕ ಲಾರಿ ಎಳೆಯಲು ಪ್ರಯತ್ನಿಸಲಾಯಿದರೂ, ಸ್ಲಾಬ್ನಿಂದ ತಪ್ಪಿ ನೀರಿನ ಆಳಕ್ಕೆ ಬಿದ್ದಿತು. ಬಳಿಕ ಮತ್ತೊಂದು ರೋಪ್ ಕಟ್ಟಿಕ್ಕೊಂಡು ಕ್ರೇನ್ ಮೂಲಕ ಎಳೆಯುವಾಗ ಲಾರಿ ನದಿಯ ಅರ್ಧಕ್ಕೆ ಬಂದ ವೇಳೆ ಬಂಡೆಗೆ ಸಿಲುಕಿ ಸಣ್ಣ ರೋಪ್ ಕಟ್ ಆಗಿ ಮತ್ತೆ ಅಡಚಣೆಯಾಗಿತ್ತು.
ಮತ್ತೊಮ್ಮೆ ಲಾರಿಯ ಹಿಂಭಾಗದಲ್ಲಿ ರೋಪ್ ಕಟ್ಟಿಕೊಂಡು ಕಾರ್ಯಾಚರಣೆ ನಡೆಸಿದ ತಂಡ ಬಂಡೆಯನ್ನು ತಪ್ಪಿಸಿ, ಯಶಸ್ವಿಯಾಗಿ ದಡದತ್ತ ಎಳೆಯುವಲ್ಲಿ ಸಫಲವಾಗಿದೆ. ಮೂರು ರೋಪ್ ಎರಡು ಕ್ರೇನ್, ಮೂರು ಟೋಯಿಂಗ್ ವಾಹನ ಮತ್ತು ಎರಡು ಬೋಟ್ ಮೂಲಕ 50ಕ್ಕೂ ಹೆಚ್ಚು ಕಾರ್ಮಿಕರು 9 ಗಂಟೆಗಳಿಂದ ಕಾರ್ಯಾಚರಣೆ ನಡೆಸಿದರು. ಈ ಮೂಲಕ ಕಳೆದ 8 ದಿನಗಳಿಂದ ನದಿಯಲ್ಲಿದ್ದ ತಮಿಳುನಾಡು ಮೂಲದ ಸೆಂಥಿಲ್‌ಕುಮಾರ್ ಮಾಲಿಕತ್ವದ ಲಾರಿಯನ್ನು ಮೇಲೆತ್ತಲಾಗಿದೆ.
ವೀಕ್ಷಣೆಗೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, "ಕೇಂದ್ರ ಸರ್ಕಾರ ಹೊಸ ಸೇತುವೆ ನಿರ್ಮಾಣ ಮಾಡಬೇಕು. ಅವರು ಮಾಡಿಲ್ಲ ಎಂದು ನಾವು ಬಿಡುವುದಿಲ್ಲ. ರಾಜ್ಯ ಸರ್ಕಾರದಿಂದಲಾದರೂ ನಿರ್ಮಾಣ ಆಗಲೇಬೇಕಾಗಿದೆ. ಐಆರ್‌ಬಿ ಹೊಸ ಸೇತುವೆ ನಿರ್ಮಿಸುವಾಗ ಹಳೆ ಸೇತುವೆಯನ್ನು ಬಳಸುವುದರಿಂದ ಸೇತುವೆ ಸಾಮರ್ಥ್ಯ ಕುಸಿಯುತ್ತದೆ. ಜಿಲ್ಲೆಯಲ್ಲಿರುವ ಇಂತಹ ಅಪಾಯಕಾರಿ ಹಳೆಯ ಸೇತುವೆಗಳ ಮೇಲಿನ ಸಂಚಾರವನ್ನು ಬಂದ್ ಮಾಡಿಸಿ ಕೂಡಲೇ ಹೊಸ ಸೇತುವೆ ನಿರ್ಮಾಣ ಮಾಡಬೇಕು" ಎಂದರು.
ನೀರಿನಾಳದಲ್ಲಿ ಸಣ್ಯಾ ಸಿದ್ದಿ ಸೆಣಸಾಟ: ಲಾರಿ ಮೇಲೆತ್ತುವ ಕಾರ್ಯಾಚರಣೆಯಲ್ಲಿ ಮುಳುಗು ತಜ್ಞ ಈಶ್ವರ್ ಮಲ್ಪೆ ಜೊತೆಗೆ ಕಾರ್ಮಿಕ ಸಣ್ಯಾ ಸಿದ್ದಿ ಯಾವುದೇ ಜೀವರಕ್ಷಕ ಸಾಧನಗಳಿಲ್ಲದೆ ನೀರಿನಲ್ಲಿ ಮುಳುಗಿ ರೋಪ್ ಬಿಗಿದು, ಲಾರಿಗೆ ಸಿಲುಕಿದ್ದ ಸರಳುಗಳನ್ನು ಕಟ್ ಮಾಡಿದ್ದರು. ತಲೆಗೆ ಗಾಯವಾಗಿತ್ತಾದರೂ ನೋವು ತಡೆದುಕೊಂಡು ನಿರಂತರವಾಗಿ ಲಾರಿ ಆಪರೇಷನ್ನಲ್ಲಿ ತೊಡಗಿಕೊಂಡಿದ್ದ ಅವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಯಲ್ಲಾಪುರದ ಇಮ್ರಾನ್ ಕ್ರೇನ್ ಸರ್ವಿಸ್ನ ಕಾರ್ಮಿಕನಾಗಿ ಆಗಮಿಸಿದ್ದ ಸಣ್ಯಾ ಸಿದ್ದಿ ಬುಧವಾರ ನದಿಯಲ್ಲಿ ಮೊದಲ ಬಾರಿಗೆ ಯಾವುದೇ ಆಕ್ಸಿಜನ್ ಸಲಕರಣೆ ಇಲ್ಲದೆ ಮುಳುಗಿ ರೋಪ್ ಬಿಗಿದಿದ್ದರು. ಗುರುವಾರ ಕೂಡ 3ರಿಂದ 4 ನಿಮಿಷಗಟ್ಟಲೆ ನೀರಿನಲ್ಲೇ ಮುಳುಗಿ ಎರಡು ರೋಪ್ ಬಿಗಿದಿದ್ದರು. ಅಲ್ಲದೆ, ಲಾರಿಗೆ ಸುತ್ತಿದ್ದ ಸೇತುವೆ ಸರಳು, ವೈರ್‌ಗಳನ್ನು ಕತ್ತರಿಸಿ ಲಾರಿ ಎಳೆಯಲು ಸುಲಭ ಮಾಡಿಕೊಟ್ಟರು.
ಪರಿಹಾರಕ್ಕೆ ಲಾರಿ ಮಾಲೀಕನ ಮನವಿ: ತಮಿಳುನಾಡು ಮೂಲದ ಲಾರಿ ಚಾಲಕ ಸೆಂಥಿಲ್ ಕುಮಾರ್, ಸೇತುವೆಯಿಂದ ನಮ್ಮ ಲಾರಿ ಬಿದ್ದು ಹಾನಿಯಾಗಿದೆ. ಇದಕ್ಕೆ ಸರ್ಕಾರದಿಂದ ತಮಗೂ ಪರಿಹಾರ ಕಲ್ಪಿಸುವಂತೆ ಸಚಿವ ಮಂಕಾಳ್ ವೈದ್ಯರ ಬಳಿ ಮನವಿ ಮಾಡಿದರು. 'ಇನ್ಸೂರೆನ್ಸ್ ಇದೆಯೇ' ಎಂದು ಪ್ರಶ್ನಿಸಿದ ಸಚಿವರು, 'ಇನ್ಸೂರೆನ್ಸ್ ಇದ್ದಲ್ಲಿ ಪೂರ್ಣ ಪ್ರಮಾಣದಲ್ಲಿ ಸಿಗಲಿದೆ'. ಇದು ಕೇಂದ್ರ ಸರ್ಕಾರದ ರಸ್ತೆ, ನಿಮ್ಮ ರಾಜ್ಯದ ಸರ್ಕಾರದ ಮೂಲಕ ಪರಿಹಾರಕ್ಕೆ ಒತ್ತಡ ಹಾಕಿ. ನಮ್ಮಿಂದ ನಿಮಗೆ ಏನು ಸಹಾಯ ಮಾಡಲು ಸಾಧ್ಯವೋ ಎಲ್ಲವನ್ನೂ ಮಾಡುತ್ತೇವೆ. ಯಾಕೆಂದರೆ ನಾನು ಇದೇ ವೃತ್ತಿಯಿಂದ ಬಂದವನು, ನನ್ನದೂ ಲಾರಿ ಇದೆ" ಎಂದು ತಿಳಿಸಿದರು.
ಲಾರಿ ಮೇಲೆತ್ತುವುದನ್ನು ನೋಡುವುದಕ್ಕೆ ಗುರುವಾರ ಬೆಳಗ್ಗೆಯಿಂದಲೇ ಜನರು ನೆರೆದಿದ್ದರು. ಜನರನ್ನು ನಿಯಂತ್ರಿಸುವುದೇ ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು.
ಇದನ್ನೂ ಓದಿ: ತುಂಗಭದ್ರಾ ಜಲಾಶಯದ ಕ್ರೆಸ್ಟ್ ಗೇಟ್ ಅಳವಡಿಕೆ ಕಾರ್ಯ ಸ್ಥಗಿತ! - TB Dam Crest Gate