ಬಳ್ಳಾರಿ: ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವು ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಜಿಲ್ಲಾಸ್ಪತ್ರೆ ಹಾಗೂ ಬಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ಕೈಗೊಂಡಿದ್ದಾರೆ.
ಲೋಕಾಯುಕ್ತ ಎಸ್ಪಿ ಸಿದ್ದರಾಜು ನೇತೃತ್ವದಲ್ಲಿ 25ಕ್ಕೂ ಹೆಚ್ಚು ಲೋಕಾಯುಕ್ತ ಸಿಬ್ಬಂದಿ ಭೇಟಿ ನೀಡಿದ್ದಾರೆ. ಬಳ್ಳಾರಿ, ಹೊಸಪೇಟೆ ಜಿಲ್ಲೆಯ ಲೋಕಾಯುಕ್ತ ಅಧಿಕಾರಿಗಳು ಆಗಮಿಸಿದ್ದಾರೆ.
ಬಾಣಂತಿಯರ ಸರಣಿ ಸಾವಿನ ಬಗ್ಗೆ ಲೋಕಾಯುಕ್ತ ಇಲಾಖೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ಜಿಲ್ಲಾ ಆಸ್ಪತ್ರೆ ಮತ್ತು ಬಿಮ್ಸ್ಗೆ ಪ್ರತ್ಯೇಕ ತಂಡಗಳಲ್ಲಿ ಭೇಟಿ ನೀಡಿದ್ದು, ಬಾಣಂತಿಯರ ಸಾವಿನ ಕುರಿತು ತನಿಖೆ ಕೈಗೊಂಡಿದ್ದಾರೆ. ಹೆರಿಗೆ, ಐಸಿಯು, ಔಷಧಿ ದಾಸ್ತಾನು ಉಗ್ರಾಣಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ.
ಬಿಜೆಪಿ ಮಹಿಳಾ ಮೋರ್ಚಾ ಭೇಟಿ: ಬಾಣಂತಿಯರ ಸಾವು ಹಿನ್ನೆಲೆಯಲ್ಲಿ ಶನಿವಾರ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಸಿ.ಮಂಜುಳಾ ನೇತೃತ್ವದ ನಿಯೋಗವೂ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದೆ. ಎಂಎಲ್ಸಿ ಹೇಮಲತಾ ನಾಯಕ, ಮಾಜಿ ಶಾಸಕಿ ರೂಪಾಲಿ ನಾಯ್ಕ ಸೇರಿ ಮಹಿಳಾ ಮುಖಂಡರು ಆಗಮಿಸಿದ್ದಾರೆ. ಹೆರಿಗೆ ವಾರ್ಡ್, ಐಸಿಯು, ಔಷಧಿ ಉಗ್ರಾಣ ಘಟಕಕ್ಕೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ.
ಬಳಿಕ ಮಾಧ್ಯಮದವರಿಗೆ ಹೇಳಿಕೆ ನೀಡಿದ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ.ಮಂಜುಳಾ, ''ಆರೋಗ್ಯವಾಗಿರುವ ಮಹಿಳೆಯರು ಸಾವನಪ್ಪಿದ್ದಾರೆ. ಇದೊಂದು ಸರ್ಕಾರದ ಪ್ರಾಯೋಜಿತ ಕೊಲೆಯಾಗಿದೆ. ಸರ್ಕಾರಕ್ಕೆ ಸ್ವಲ್ಪವೂ ಕಾಳಜಿ ಇಲ್ಲ, ಅಧಿಕಾರದ ಬಡಿದಾಟದಲ್ಲಿ ಮುಳುಗಿದೆ. ಆರೋಗ್ಯ ಸಚಿವ, ಜಿಲ್ಲಾ ಸಚಿವರು ಇದುವರೆಗೂ ಇಲ್ಲಿಗೆ ಭೇಟಿ ನೀಡುವ ಸೌಜನ್ಯ ತೋರಿಲ್ಲ. ಸಾವನ್ನಪ್ಪಿದವರ ಕುಟುಂಬಕ್ಕೆ ಸಾಂತ್ವನ ಹೇಳುವ ಪ್ರಯತ್ನವನ್ನೂ ಮಾಡಿಲ್ಲ. ರಾಜ್ಯದ ಆರೋಗ್ಯ ಇಲಾಖೆಯಲ್ಲಿ ಏನು ನಡೆಯುತ್ತಿದೆ ಎನ್ನುವ ಪರಿಜ್ಞಾನವೂ ಇಲ್ಲ. ಜಿಲ್ಲಾ, ತಾಲೂಕು, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳುವ ವ್ಯವದಾನವೂ ಈ ಸರ್ಕಾರಕ್ಕೆ ಇಲ್ಲ'' ಎಂದು ಆರೋಪಿಸಿದ ಅವರು, ''ಮೃತ ಬಾಣಂತಿಯರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು. ತಬ್ಬಲಿಯಾದ ನವಜಾತ ಶಿಶುಗಳ ಪೋಷಣೆಗೆ ಸರ್ಕಾರ ನೆರವಾಗಬೇಕು'' ಎಂದು ಆಗ್ರಹಿಸಿದರು.
ಘಟನೆ ಬಗ್ಗೆ ಮಾಹಿತಿ: ಇತ್ತೀಚೆಗೆ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಸಿಸೇರಿಯನ್ಗೆ ಒಳಗಾಗಿ ಐವರು ಬಾಣಂತಿಯರು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದರು. ನವೆಂಬರ್ 9ರಿಂದ 11ರ ವರೆಗೆ ಬಳ್ಳಾರಿಯ ಜಿಲ್ಲಾಸ್ಪತ್ರೆಯಲ್ಲಿ ನಾಲ್ವರು ತಾಯಂದಿರು ಮರಣ ಹೊಂದಿದ್ದರು. ಬಳಿಕ, ಜಿಲ್ಲಾಸ್ಪತ್ರೆಯಿಂದ ರವಾನೆಗೊಂಡು, ಕಳೆದ 22 ದಿನಗಳಿಂದ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೂಡ್ಲಗಿಯ ಬಾಣಂತಿ ಸುಮಯಾ (25) ಕೂಡ ಗುರುವಾರ (ಡಿ.5) ಮೃತಪಟ್ಟಿದ್ದರು.
ನಾಲ್ವರು ಬಾಣಂತಿಯರ ಸಾವಿನ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆದಿದ್ದು, ಕರ್ತವ್ಯಲೋಪ ಹಿನ್ನೆಲೆಯಲ್ಲಿ ಡ್ರಗ್ ಕಂಟ್ರೋಲರ್ ಉಮೇಶ್ ಅವರನ್ನು ಸಸ್ಪೆಂಡ್ ಮಾಡಿದ್ದಾರೆ. ಇನ್ಮುಂದೆ ಇಂತಹ ದುರ್ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದ್ದರು. ಪ್ರಯೋಗಾಲಯದ ವರದಿ ಬಂದ ಬಳಿಕ ಘಟನೆಗೆ ಜವಾಬ್ದಾರರಾದ ಪ್ರತಿಯೊಬ್ಬರನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದರು.
ಆರೋಗ್ಯ ಸಚಿವರು ಹೇಳಿದ್ದೇನು? ಘಟನೆ ಬಗ್ಗೆ ಶುಕ್ರವಾರ (ಡಿ.6) ಹೇಳಿಕೆ ನೀಡಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ''ರಾಜ್ಯದಲ್ಲಿ ಈ ವರ್ಷ ಇದುವರೆಗೆ 327 ಬಾಣಂತಿಯರ ಸಾವಾಗಿದೆ. ಇದನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ತಪ್ಪಿತಸ್ಥರಿಗೆ ಕ್ರಮ ಆಗಲೇಬೇಕು. ನನ್ನ ತಪ್ಪಿದ್ದರೆ ರಾಜೀನಾಮೆ ಕೊಡಲೂ ಸಿದ್ಧ. ಎಲ್ಲವನ್ನೂ ಪರಿಶೀಲಿಸಿ ಎಂದು ಸೂಚನೆ ನೀಡಿದ್ದೇವೆ. ಇಂತಹ ಪ್ರಕರಣಗಳಲ್ಲಿ ಸಹನೆ ಇರಬಾರದು. ಈ ರೀತಿಯ ಘಟನೆಗಳು ಮರುಕಳಿಸಬಾರದು'' ಎಂದು ಹೇಳಿದ್ದರು.
ಇದನ್ನೂ ಓದಿ: ಬಾಣಂತಿಯರ ಸಾವು ಪ್ರಕರಣ: 'ನನ್ನ ತಪ್ಪಿದ್ದರೆ ರಾಜೀನಾಮೆ ಕೊಡಲೂ ಸಿದ್ಧ': ದಿನೇಶ್ ಗುಂಡೂರಾವ್