ಬೆಂಗಳೂರು: ಆದಾಯಕ್ಕಿಂತ ಅಧಿಕ ಆಸ್ತಿಗಳಿಕೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸರ್ಕಾರಿ ಅಧಿಕಾರಿಗಳ ನಿವಾಸಗಳ ಮೇಲೆ ಇಂದು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಬೆಂಗಳೂರು ನಗರದ ಎರಡು ಹಾಗೂ ಮಂಡ್ಯ, ಚಿಕ್ಕಬಳ್ಳಾಪುರದ ತಲಾ ಒಂದೊಂದು ಕಡೆಗಳಲ್ಲಿ ಬೆಳಗ್ಗೆ ತನಿಖಾಧಿಕಾರಿಗಳ ತಂಡ ದಾಖಲೆಗಳ ಶೋಧ ಕಾರ್ಯ ಕೈಗೊಂಡಿದೆ.
ಬೆಂಗಳೂರು ನಗರ ಯೋಜನಾ ಇಲಾಖೆಯ ನಿರ್ದೇಶಕ ಎನ್.ಕೆ.ತಿಪ್ಪೇಸ್ವಾಮಿ ಅವರ ಬನಶಂಕರಿಯ 1ನೇ ಹಂತದಲ್ಲಿರುವ ನಿವಾಸ, ಅಬಕಾರಿ ಇಲಾಖೆಯ ಅಧೀಕ್ಷಕ ಮೋಹನ್.ಕೆ. ಅವರ ಕನಕಪುರ ರಸ್ತೆಯಲ್ಲಿರುವ ನಿವಾಸ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಅವರ ಮಂಡ್ಯದ ನಿವಾಸ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಎಂ.ಸಿ.ಕೃಷ್ಣವೇಣಿ ಅವರ ಚಿಕ್ಕಬಳ್ಳಾಪುರದ ನಿವಾಸಗಳಲ್ಲಿ ಶೋಧ ನಡೆಯುತ್ತಿದೆ.
ಮಂಡ್ಯ: ಮಂಡ್ಯದಲ್ಲಿ ಕಾವೇರಿ ನೀರಾವರಿ ನಿಗಮದ ಎಂಡಿ ಮಹೇಶ್ ಮನೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಮಹೇಶ್ ಬೆಂಗಳೂರಿನ ಕಾವೇರಿ ನೀರಾವರಿ ನಿಗಮದ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಂಡ್ಯದ ಕೆಆರ್‌ಎಸ್ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್, ಮಳವಳ್ಳಿಯ ದಳವಾಯಿ ಕೋಡಿಹಳ್ಳಿ ನಿವಾಸದಲ್ಲೂ ಶೋಧ ನಡೆಯುತ್ತಿದೆ. ಮಂಡ್ಯ ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ನೇತೃತ್ವದಲ್ಲಿ ದಾಳಿ ನಡೆದಿದ್ದು, ಬೆಳಗ್ಗಿನಿಂದಲೇ ಕಡತಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಮಂಗಳೂರು: ನಗರದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಹಾಗೂ ಕಚೇರಿಗಳ ಮೇಲೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಮಂಗಳೂರು ಲೋಕಾಯುಕ್ತ ಎಸ್ಪಿ ನಟರಾಜ್ ನೇತೃತ್ವದ ತಂಡ, ವೆಲೆನ್ಸಿಯಾದಲ್ಲಿರುವ ಮನೆ, ಮಲ್ಲಿಕಟ್ಟೆಯಲ್ಲಿರುವ ಕಚೇರಿಯಲ್ಲಿ ಪರಿಶೀಲನೆ ನಡೆಸುತ್ತಿದೆ. ಮಂಗಳೂರು ಹಾಗೂ ಚಿಕ್ಕಬಳ್ಳಾಪುರ ಲೋಕಾಯುಕ್ತ ಅಧಿಕಾರಿಗಳ ತಂಡ ಮೂರು ವಾಹನಗಳಲ್ಲಿ ಆಗಮಿಸಿತ್ತು.
ಕೃಷ್ಣವೇಣಿ ಎರಡು ತಿಂಗಳ ಹಿಂದಷ್ಟೇ ಗಣಿ ಹಾಗೂ ಭೂವಿಜ್ಞಾನ ಇಲಾಖೆಯ ಅಧಿಕಾರಿಯಾಗಿ ಮಂಗಳೂರಿಗೆ ವರ್ಗಾವಣೆಯಾಗಿ ಬಂದಿದ್ದರು.
ಮೈಸೂರು: ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಬಿ. ಅವರ ವಿಜಯನಗರ ಒಂದನೇ ಹಂತದಲ್ಲಿರುವ 'ನಮ್ಮನೆ' ಮೇಲೆ ಲೋಕಾ ದಾಳಿ ನಡೆದಿದ್ದು, ದಾಖಲಾತಿಗಳ ಪರಿಶೀಲನೆ ನಡೆಯುತ್ತಿದೆ.
ದಾವಣಗೆರೆ: ಬೆಂಗಳೂರು ಯೋಜನಾ ಘಟಕದ ನಿರ್ದೇಶಕ ತಿಪ್ಪೇಸ್ವಾಮಿ ಅವರ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಕುದುರೆ ಗ್ರಾಮದಲ್ಲಿರುವ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ಭಾವ ಮೈದುನನಿಗೆ ಜಮೀನು ಮಾರಿದ್ದ ದೇವರಾಜು ಅವರಿಂದ ಹೈಕೋರ್ಟ್‌ಗೆ ಮೇಲ್ಮನವಿ