ಬೆಂಗಳೂರು: ರಾಜ್ಯದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಜನರು ಮತ ಕೇಂದ್ರಗಳಿಗೆ ಬಂದು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ವಿವಿಧ ಪಕ್ಷಗಳ ಅಭ್ಯರ್ಥಿಗಳು, ಗಣ್ಯರು ಮತಗಟ್ಟೆಗಳಲ್ಲಿ ವೋಟ್ ಮಾಡುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರಜಾಪ್ರಭುತ್ವ ಹಬ್ಬದಲ್ಲಿ ಭಾಗಿಯಾಗಬೇಕು ಎಂದು ಕೋರಿದರು.
ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ಅವರು ಮೈಸೂರು ನಗರದ ಶಂಕರಮಠ ರಸ್ತೆಯಲ್ಲಿರುವ ಶ್ರೀಕಾಂತ ಶಾಲೆಯಲ್ಲಿ ಕುಟುಂಬ ಸಮೇತರಾಗಿ ಆಗಮಿಸಿ ಮತದಾನ ಮಾಡಿದರು. ಇದಕ್ಕೂ ಮುಂಚೆ ಕುಲದೇವತೆ ಹಾಗೂ ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಬೆಂಗಳೂರಿನ ಜಾಲಹಳ್ಳಿಯಲ್ಲಿಯ ಸೆಂಟ್ ಕ್ಲಾರೆಟ್ ಶಾಲೆಯಲ್ಲಿ ಮತದಾನ ಮಾಡಿದರು. ಜನರ ಸಾಲಿನಲ್ಲಿ ನಿಂತು ಅವರು ಪತ್ನಿ ಪ್ರಮೀಳಾ ಜೊತೆಗೂಡಿ ತಮ್ಮ ಹಕ್ಕು ಚಲಾಯಿಸಿದರು. ಇತ್ತ ವಸತಿ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಮತದಾನ ಮಾಡಿದರು.
ಸುಧಾಕರ್, ಸೋಮಣ್ಣ ಮತದಾನ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರು ಪೇರೇಸಂದ್ರ ಸರ್ಕಾರಿ ಶಾಲೆಯಲ್ಲಿ ಮತದಾನ ಮಾಡಿದರು. ಪತ್ನಿ ಪ್ರೀತಿ ಸುಧಾಕರ್ ಅವರ ಜೊತೆಗೂಡಿ ಮತ ಚಲಾವಣೆ ಮಾಡಿದರು. ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿ.ಸೋಮಣ್ಣ ಅವರು ಬೆಂಗಳೂರಿನ ಗೋವಿಂದರಾಜನಗರದ ಆರೋಗ್ಯ ಕೇಂದ್ರದ ಮತಗಟ್ಟೆಯಲ್ಲಿ ಮತದಾನ ಮಾಡಿದರು.
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರು ಕೊರ್ಗಿಯಲ್ಲಿನ ಗಿರಿಜಾ ಚಂದ್ರಶೇಖರ ಹೆಗ್ಡೆ ಸರ್ಕಾರ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಕುಟುಂಬ ಸಹಿತರಾಗಿ ಬಂದು ಮತದಾನ ಮಾಡಿದರು.
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರು ಕೋಟತಟ್ಟು ಗ್ರಾಮ ಪಂಚಾಯತ್ನಲ್ಲಿ ಮತಕೇಂದ್ರದಲ್ಲಿ ಕುಟುಂಬ ಸಹಿತರಾಗಿ ಮತ ಹಕ್ಕು ಚಲಾವಣೆ ಮಾಡಿದರು.
ಕರಂದ್ಲಾಜೆ, ಮೋಹನ್, ರಾಜೀವ್ ಗೌಡ ಮತ: ಬೆಂಗಳೂರಿನ ಬನಶಂಕರಿ ಎರಡನೇ ಹಂತದ ಬಿಎನ್ಎಸ್ ಕಾಲೇಜಿನಲ್ಲಿ ಕುಟುಂಬ ಸಮೇತರಾಗಿ ಆಗಮಿಸಿದ ಬೆಂಗಳೂರು ಕೇಂದ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ. ಮೋಹನ್ ಅವರು ಮತದಾನ ಮಾಡಿದರು. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಮತದಾನ ಮಾಡಿದರು
ದಕ್ಷಿಣ ಕನ್ನಡ ಲೋಕಸಭಾ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಅವರು ನಗರದ ಕಾರ್ ಸ್ಟ್ರೀಟ್ನಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜು ಮತಕೇಂದ್ರದಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ತಮ್ಮ ನೆಚ್ಚಿನ ಅಭ್ಯರ್ಥಿಯನ್ನು ಕಂಡು ಮತದಾರರು ಸೆಲ್ಫಿ ಕ್ಲಿಕ್ಕಿಸಿಕೊಂಡರು.
ಜ್ಯೋತಿಷಿಗಳು ಸೂಚಿಸಿದ ಸಮಯದ ಪ್ರಕಾರ ಬೆಳಗ್ಗೆ 10 ರಿಂದ 10.15ರ ಒಳಗೆ ಕೋಲಾರ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ಅವರು ಮತದಾನ ಮಾಡಿದರು. ಕೋಲಾರ ಹೊರಹೊಲಯದ ಕುಂಬಾರಹಳ್ಳಿ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು.
ಬೆಂಗಳೂರು ಉತ್ತರ ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡ ಅವರು ಸಾರಕ್ಕಿ ಪ್ರೌಢಶಾಲೆ ಮತಗಟ್ಟೆ 186ರಲ್ಲಿ ಮತದಾನ ಮಾಡಿದರು. ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಅವರು ಇಲ್ಲಿನ ಮೇರಿ ಇಮ್ಮಾಕ್ಯುಲೇಟ್ ಶಾಲೆಯಲ್ಲಿ ಮತದಾನ ಮಾಡಿದರು. ಸಚಿವ ಮತ್ತು ತಂದೆ ರಾಮಲಿಂಗಾರೆಡ್ಡಿ, ತಾಯಿ ಜೊತೆಗಿದ್ದರು.
ಬೆಂಗಳೂರು ಕೇಂದ್ರ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಅವರು ಜಯನಗರದ ಎನ್ಎಂಕೆಆರ್ವಿ ಕಾಲೇಜಿನಲ್ಲಿ ಮತದಾನ ಮಾಡಿದರು. ಕುಟುಂಬ ಸಮೇತರಾಗಿ ಬಂದು ಸರತಿ ಸಾಲಿನಲ್ಲಿ ನಿಂತು ಅವರು ಮತ ಹಕ್ಕು ಚಲಾಯಿಸಿದರು.
ಮಂಡ್ಯ ಲೋಕಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾದ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಕುಟುಂಬ ಸಮೇತರಾಗಿ ಬಿಡದಿ ಸಮೀಪದ ಕೇತಿಗಾನಹಳ್ಳಿ ಗ್ರಾಮದ ಮತಗಟ್ಟೆಯಲ್ಲಿ ಮತದಾನ ಮಾಡಿದರು.