ಬೆಂಗಳೂರು: ರಾಜ್ಯದಲ್ಲಿ ಲೋಕಸಭೆ ಮಹಾಸಮರದ ಎರಡನೇ ಚರಣದ ಮತದಾನ ಮಂಗಳವಾರ (ಮೇ 7) ನಡೆಯಲಿದೆ. 28 ಕ್ಷೇತ್ರಗಳ ಪೈಕಿ ಮೊದಲ ಹಂತದಲ್ಲಿ 14 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಇದೀಗ ಉಳಿದ 14 ಕ್ಷೇತ್ರಗಳಲ್ಲಿ ಮತದಾರ ಪ್ರಭುಗಳು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಕಣದಲ್ಲಿ ಒಟ್ಟು 227 ಅಭ್ಯರ್ಥಿಗಳು ಇದ್ದು, ಅದರಲ್ಲಿ 206 ಪುರುಷ, 21 ಮಹಿಳಾ ಹುರಿಯಾಳುಗಳಿದ್ದಾರೆ. ಇಂದು ಅವರ ಭವಿಷ್ಯವನ್ನು ಮತದಾರ ನಿರ್ಧರಿಸಲಿದ್ದಾನೆ.
ಮತದಾರರ ಮಾಹಿತಿ: ರಾಜ್ಯದ 14 ಕ್ಷೇತ್ರಗಳಲ್ಲಿ 2,59,52,958 ಅರ್ಹ ಮತದಾರರು ಇದ್ದಾರೆ. ಇದರಲ್ಲಿ 1,29,83,406 ಪುರುಷರು, 1,29,67,607 ಮಹಿಳೆಯರು, 1,945 ಇತರೆ ಮತದಾರರು ಇದ್ದಾರೆ. 85 ವರ್ಷ ಮೇಲ್ಪಟ್ಟವರು 2,29,263, ಯುವ ಮತದಾರರು 6,90,929, ಸೇವಾ ಮತದಾರರು 35,465 ರಷ್ಟಿದ್ದಾರೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ತಲಾ 14 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಪಕ್ಷೇತರರು ಸೇರಿದಂತೆ 227 ಅಭ್ಯರ್ಥಿಗಳು ಹುರಿಯಾಳುಗಳಾಗಿದ್ದಾರೆ.
ಈ ಪೈಕಿ ಇಬ್ಬರು ಹಾಲಿ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಭಗವಂತ್ ಖೂಬಾ, ಮಾಜಿ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಅಖಾಡದಲ್ಲಿದ್ದಾರೆ. ಮಾಜಿ ಸಚಿವರಾದ ರಾಮುಲು, ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಿಎಂಗಳಾದ ಬಸವರಾಜ್ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಸ್ಪರ್ಧೆಯಲ್ಲಿದ್ದಾರೆ.
ಬಿಜೆಪಿಯಲ್ಲಿ ಬಂಡೆದ್ದು, ಪಕ್ಷೇತರ ಅಭ್ಯರ್ಥಿಯಾಗಿರುವ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ (77) ಅತಿ ಹಿರಿಯರಾಗಿದ್ದರೆ, ಕಾಂಗ್ರೆಸ್ನ ಸಾಗರ್ ಖಂಡ್ರೆ (26) ಅತಿ ಕಿರಿಯ ಅಭ್ಯರ್ಥಿಯಾಗಿದ್ದಾರೆ. ದಾವಣಗೆರೆಯಲ್ಲಿ ಅತಿ ಹೆಚ್ಚು ಅಂದರೆ 30 ಜನರು ಕಣದಲ್ಲಿದ್ದರೆ, ರಾಯಚೂರು, ವಿಜಯಪುರದಲ್ಲಿ 8 ಮಂದಿ ಮಾತ್ರ ಸ್ಪರ್ಧೆಯಲ್ಲಿದ್ದಾರೆ.
ಎಲ್ಲೆಲ್ಲಿ ಮತದಾನ?: ದಾವಣಗೆರೆ, ಶಿವಮೊಗ್ಗ, ಹಾವೇರಿ, ಧಾರವಾಡ, ಬಳ್ಳಾರಿ, ರಾಯಚೂರು, ಕೊಪ್ಪಳ, ಬಾಗಲಕೋಟೆ, ಬೀದರ್, ವಿಜಯಪುರ, ಕಲಬುರಗಿ, ಬೆಳಗಾವಿ, ಚಿಕ್ಕೋಡಿ ಹಾಗೂ ಉತ್ತರಕನ್ನಡ ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮಂಗಳವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನಕ್ಕೆ ಅವಕಾಶವಿದೆ.
14 ಕ್ಷೇತ್ರಗಳಲ್ಲಿ ಒಟ್ಟು 28,269 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಸುಮಾರು 1.45 ಲಕ್ಷ ಚುನಾವಣಾಧಿಕಾರಿಗಳನ್ನು ನಿಯೋಜಿಸಲಾಗಿದೆ. 35,000 ಸಿವಿಲ್ ಪೊಲೀಸ್ ಸಿಬ್ಬಂದಿ, ಕೇಂದ್ರ ಅರೆಸೇನಾ ಪಡೆಗಳು ಮತ್ತು ಇತರ ರಾಜ್ಯಗಳ ಸಶಸ್ತ್ರ ಪೊಲೀಸರು ಇರಲಿದ್ದಾರೆ. ಜೊತೆಗೆ 4,000 ಮೈಕ್ರೋ ಅಬ್ಸರ್ವರ್‌ಗಳು ಸಹ ಕರ್ತವ್ಯದಲ್ಲಿರಲಿದ್ದಾರೆ. 17,000 ಮತಗಟ್ಟೆಗಳನ್ನು ವೆಬ್‌ಕಾಸ್ಟಿಂಗ್ ಮೂಲಕ ವ್ಯಾಪ್ತಿಗೆ ಒಳಪಡಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.