ಬೆಂಗಳೂರು: ರಾಜ್ಯದಲ್ಲಿ ನಡೆಯಲಿರುವ ಮೊದಲ ಹಂತದ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ 14 ಲೋಕಸಭಾ ಕ್ಷೇತ್ರಗಳ ನಾಮಪತ್ರ ಪರಿಶೀಲನೆ ವೇಳೆ ಬಾಕಿ ಇದ್ದ ಬೆಂಗಳೂರು ದಕ್ಷಿಣ ಕ್ಷೇತ್ರದ ನಾಮಪತ್ರಗಳ ಪರಿಶೀಲನೆಯನ್ನು ಪೂರ್ಣಗಳಿಸಲಾಗಿದ್ದು, 24 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ. ಇದರೊಂದಿಗೆ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳ ಒಟ್ಟಾರೆ 358 ಅಭ್ಯರ್ಥಿಗಳ ಪೈಕಿ 300 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಶುಕ್ರವಾರ ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆದಿತ್ತು. ಈ ವೇಳೆ 13 ಲೋಕಸಭಾ ಕ್ಷೇತ್ರಗಳ ಉಮೇದುವಾರಿಕೆ ಪರಿಶೀಲನೆ ಪ್ರಕ್ರಿಯೆ ಮುಕ್ತಾಯಗೊಂಡಿತ್ತು. ಆದರೆ, ಬೆಂಗಳೂರು ದಕ್ಷಿಣ ಕ್ಷೇತ್ರದ ನಾಮಪತ್ರ ಪರಿಶೀಲನೆ ಕಾರ್ಯ ಶುಕ್ರವಾರ ತಡರಾತ್ರಿಯಾದರೂ ಮುಕ್ತಾಯಗೊಳ್ಳದ ಕಾರಣ ಇಂದು ಪೂರ್ಣಗೊಳಿಸಲಾಯಿತು. 358 ಅಭ್ಯರ್ಥಿಗಳು 492 ಉಮೇದುವಾರಿಕೆ ಸಲ್ಲಿಕೆ ಮಾಡಿದ್ದರು. ಈ ಪೈಕಿ ಶುಕ್ರವಾರ 276 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿದ್ದವು. 384 ನಾಮಪತ್ರಗಳು ಸ್ವೀಕೃತಗೊಂಡಿದ್ದರೆ, 60 ನಾಮಪತ್ರಗಳು ತಿರಸ್ಕೃತಗೊಂಡಿದ್ದವು.
ಶನಿವಾರ ನಾಮಪತ್ರ ಪರಿಶೀಲನೆ ಕಾರ್ಯ ಸಂಪೂರ್ಣವಾಗಿ ಪೂರ್ಣಗೊಂಡಾಗ 300 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ. 419 ನಾಮಪತ್ರಗಳು ಪುರಸ್ಕೃತಗೊಂಡಿದ್ದು, 74 ನಾಮಪತ್ರಗಳು ತಿರಸ್ಕೃತಗೊಂಡಿವೆ ಎಂದು ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ತಿಳಿಸಿದೆ. ಸೋಮವಾರ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಅಂದು ಸಂಜೆಯ ಬಳಿಕ ರಾಜ್ಯದ ಮೊದಲ ಹಂತದಲ್ಲಿ ಕಣದಲ್ಲಿರುವ ಅಭ್ಯರ್ಥಿಗಳ ಸಂಖ್ಯೆ ಮಾಹಿತಿ ನಿಖರವಾಗಿ ತಿಳಿದುಬರಲಿದೆ.
ರಾಜ್ಯದಲ್ಲಿ ಒಟ್ಟು 28 ಲೋಕಸಭೆ ಕ್ಷೇತ್ರಗಳು ಇವೆ. ಇದೇ ತಿಂಗಳು 26ರಂದು 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆಗೆ ಮತದಾನ ನಡೆದರೆ, ಮೇ 7ರಂದು ಎರಡನೇ ಹಂತದಲ್ಲಿ ಉಳಿದ 14 ಕ್ಷೇತ್ರಗಳಿಗೆ ಚುನಾವಣೆ ಜರುಗಲಿದೆ. ಜೂನ್ 4 ರಂದು ಫಲಿತಾಂಶ ಹೊರಬೀಳಲಿದೆ.
ಇದನ್ನೂ ಓದಿ: ರಾಜ್ಯದ 14 ಕ್ಷೇತ್ರಗಳ ಪ್ರಮುಖ ಅಭ್ಯರ್ಥಿಗಳ ಮೇಲಿರುವ ಕ್ರಿಮಿನಲ್ ಮೊಕದ್ದಮೆಗಳೇನು? - Criminal Cases