ಬಾಗಲಕೋಟೆ: ಲೋಕಸಭಾ ಚುನಾವಣೆಗೆ ದಿನಾಂಕ ಸಮೀಪಿಸುತ್ತಿದ್ದಂತೆ, ಬಾಗಲಕೋಟೆ ಲೋಕಸಭಾ ಅಖಾಡ ದಿನೇ ದಿನೇ ರಂಗೇರುತ್ತಿದೆ. ಸಿಎಂ ಸಿದ್ದರಾಮಯ್ಯ ಇಂದು ಬಾಗಲಕೋಟೆ ಲೋಕಸಭೆ ಕ್ಷೇತ್ರದ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದು, ಬಾಗಲಕೋಟೆ ಕಾಂಗ್ರೆಸ್ ಪಾಳೆಯದಲ್ಲಿ ಮಿಂಚಿನ ಸಂಚಾರವಾಗಿದೆ. ಕಾಂಗ್ರೆಸ್ ನಾಯಕರು ಒಗ್ಗಟ್ಟಿನ ಮಂತ್ರ ಜಪಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಪರ ಭರ್ಜರಿ ಪ್ರಚಾರ ಕೈಗೊಂಡರು.
ಜಿಲ್ಲೆಯ ಬನಹಟ್ಟಿ ನಗರದ ಎಸ್.ಆರ್.ಎ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಕಾರ್ಯಕ್ರಮ ಜರುಗಿತು. ಬಾಗಲಕೋಟೆ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ಪರ ಸಿಎಂ ಸಿದ್ದರಾಮಯ್ಯ ಭರ್ಜರಿ ಪ್ರಚಾರ ನಡೆಸಿದರು. ಸಸಿಗೆ ನೀರು ಹಾಕುವ ಮೂಲಕ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಮಯದಲ್ಲಿ ಸಚಿವರಾದ ಶಿವಾನಂದ ಪಾಟೀಲರ ನೇತೃತ್ವದಲ್ಲಿ ಸಿಎಂ ಸಮ್ಮುಖದಲ್ಲಿ ಸ್ಥಳೀಯ ಮುಖಂಡರನ್ನ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಾವು ಮಾತು ಕೊಟ್ಟಂತೆ ನಡೆದಿದ್ದೇವೆ. ಬಿಜೆಪಿಗರು ನಡೆದುಕೊಂಡಿದ್ದಾರಾ? ಎಂದು ಪ್ರಶ್ನಿಸಿದರು. ನೀವು ನಮಗೆ ಆಶೀರ್ವಾದ ಮಾಡಬೇಕಲ್ವ.. ಯುಪಿಎ ಒಕಕ್ಕೂಟದಿಂದ 25 ಗ್ಯಾರಂಟಿ ಘೋಷಣೆ ಮಾಡಿದ್ದಾರೆ. ಅದರಲ್ಲಿ ಐದು ಗ್ಯಾರಂಟಿಗಳನ್ನು ಕೂಡಲೇ ಜಾರಿ ಮಾಡ್ತೀವಿ ಅಂದಿದ್ದಾರೆ. ನಮ್ಮಮೇಲೆ ವಿಶ್ವಾಸ ಬಂದಿದೆಯಲ್ಲ. ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬಂದರೆ ‘ಒಂದು ಮನೆಗೆ ಒಂದು ವರ್ಷಕ್ಕೆ ಒಂದು ಲಕ್ಷ ರೂಪಾಯಿ’ ಸಿಗುತ್ತೆ. ಜೊತೆಗೆ ರೈತರ ಸಾಲ ಸಂಪೂರ್ಣ ಮನ್ನಾ ಮಾಡುತ್ತೇನೆ. ಹತ್ತು ವರ್ಷ ಮೋದಿ ಪಿಎಂ ಆಗಿದ್ದಾರೆ ಎಂದಾದ್ರೂ ಸಾಲಮನ್ನಾ ಮಾಡಿದ್ರಾ ಎಂದು ಪ್ರಶ್ನೆ ಮಾಡಿದರು.
ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ್ರೆ ರೈತರ ಬೆಲೆಗೆ ಬೆಂಬಲ ಕೊಡುವ ಕಾನೂನು ತರುತ್ತೇವೆ. ಜೊತೆಗೆ ಜಾತಿ ಜನಗಣತಿ ಜಾರಿ ಮಾಡುತ್ತೇವೆ ಅಂದಿದ್ದೀವಿ. ಆದರೆ ಬಿಜೆಪಿಗರು ಸುಳ್ಳು, ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸಿಎಂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ, ಬಿಜೆಪಿಯ ಹಾಲಿ ಸಂಸದ ಗದ್ದಿಗೌಡರ್ ವಿರುದ್ಧ ವ್ಯಂಗ್ಯವಾಡಿದರು.
ಇನ್ನು ಕಾರ್ಯಕ್ರಮದಲ್ಲಿ ಸಿದ್ಧರಾಮಯ್ಯನವರ ಭಾಷಣಕ್ಕೂ ಮೊದಲು ಮಾತನಾಡಿದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಸಚಿವ ಆರ್.ಬಿ. ತಿಮ್ಮಾಪೂರ್ ಅವರು ಬಿಜೆಪಿಗರ ವಿರುದ್ಧ ವಾಗ್ದಾಳಿ ನಡೆಸಿದರು. ಅಭ್ಯರ್ಥಿ ಸಂಯುಕ್ತಾ ಪಾಟೀಲ್ ಮತದಾರರು ತಮ್ಮನ್ನ ಆಶೀರ್ವದಿಸುವಂತೆ ಮನವಿ ಮಾಡಿದರು. ವೇದಿಕೆಯ ಮೇಲೆ ಸಚಿವ ಶಿವಾನಂದ ಪಾಟೀಲ್, ಸಚಿವ ಆರ್.ಬಿ. ತಿಮ್ಮಾಪೂರ್, ವಿನಯ ಕುಲಕರ್ಣಿ, ವಿಜಯಾನಂದ ಕಾಶಪ್ಪನವರ್, ಉಮಾಶ್ರೀ, ಆನಂದ ನ್ಯಾಮಗೌಡ ಸೇರಿ ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರು ಉಪಸ್ಥಿತರಿದ್ದರು.
ಒಟ್ಟಾರೆ ಬಾಗಲಕೋಟೆ ಲೋಕಸಭೆ ಅಖಾಡಕ್ಕೆ ಸಿದ್ದರಾಮಯ್ಯನವರ ಎಂಟ್ರಿಯಾಗಿದ್ದರಿಂದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹುಮ್ಮಸ್ಸು ಇಮ್ಮಡಿಯಾಗಿದ್ದು, ಬಿಜೆಪಿ ಭದ್ರಕೋಟೆಯನ್ನ ಛಿದ್ರ ಮಾಡಲು ಕಾಂಗ್ರೆಸ್ಸಿಗರು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.
ಓದಿ: ರಾಯ್ಬರೇಲಿಗೆ ಪ್ರಿಯಾಂಕಾ, ಅಮೇಠಿಯಿಂದ ರಾಹುಲ್ ಗಾಂಧಿ ಸ್ಪರ್ಧೆ: ಸಿಇಸಿ ಸಭೆಯಲ್ಲಿ ಇಂದು ಚರ್ಚೆ - CEC meeting