ಚಿಕ್ಕೋಡಿ: "ಇನ್ನು ಎರಡು ದಿನದಲ್ಲಿ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದಲ್ಲಿ ಇಂದು ನಡೆದ ಅಮ್ಮಜೇಶ್ವರಿ ಏತ ನೀರಾವರಿ ಯೋಜನೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
"ಎರಡು ದಿನದಲ್ಲಿ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ. ಇದರಲ್ಲಿ ಬೆಳಗಾವಿ ಚಿಕ್ಕೋಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ. ನಿಮ್ಮ ಕೆಲಸ ಮಾಡಿದ್ದೇವೆ. ನಮಗೆ ಕೂಲಿ ಕೊಡಿ. ಕೂಲಿ ರೂಪದಲ್ಲಿ ಮತ ನೀಡಿ, ಜಿಲ್ಲೆಯ ಎರಡು ಅಭ್ಯರ್ಥಿಗಳನ್ನು ಗೆಲ್ಲಿಸಿ" ಎಂದು ಸಿಎಂ ಜನರಿಗೆ ಮನವಿ ಸಲ್ಲಿಸಿದರು.
"ಶಕ್ತಿ ಯೋಜನೆಯಿಂದ ದೇವಸ್ಥಾನಕ್ಕೆ ಹೆಚ್ಚು ಜನರು ಭೇಟಿ ನೀಡುತ್ತಿದ್ದಾರೆ. ಎಲ್ಲಾ ಸಮುದಾಯದ ಕುಟುಂಬಗಳಿಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ಕೊಡುತ್ತೇವೆ. ಲಕ್ಷ್ಮಣ್ ಸವದಿ ಒಳ್ಳೆಯ ರಾಜಕಾರಣಿ. ಅವರಿಗೆ ಮುಂದಿನ ದಿನದಲ್ಲಿ ಭವಿಷ್ಯ ಇದೆ. ಸವದಿ ಮಂತ್ರಿಸ್ಥಾನ ಕೇಳಲಿಲ್ಲ. ನೀರಾವರಿ ಯೋಜನೆ ಕೊಡುವಂತೆ ಕೇಳಿದರು. ಅಮ್ಮಜೇಶ್ವರಿ ಏತ ನೀರಾವರಿ ಯೋಜನೆ ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಯಾಗಿತ್ತು. ಈ ಯೋಜನೆಗೆ 1,486 ಕೋಟಿ ರೂಪಾಯಿ ಖರ್ಚಾಗುತ್ತದೆ. ಈ ಭಾಗದಲ್ಲಿ ಸುಮಾರು 20 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಈ ಯೋಜನೆ ಕಲ್ಪಿಸುತ್ತದೆ." ಎಂದು ಹೇಳಿದರು.
"ಈ ಯೋಜನೆಯಿಂದ ಅಥಣಿ ತಾಲೂಕಿಗೆ 95 ಶೇಕಡಾ ನೀರಾವರಿ ಸೌಲಭ್ಯ ಹೊಂದಿದಂತಾಗುತ್ತದೆ. ಈ ಯೋಜನೆಯಿಂದ ಕೆರೆಗಳನ್ನು ತುಂಬಿಸಲಾಗುವದು. ಇದರಿಂದ ಅಂತರ್ಜಲ ಅಭಿವೃದ್ಧಿಯಾಗುತ್ತದೆ. ಕೆರೆಗಳನ್ನು ತುಂಬುವುದಕ್ಕೆ ಸರ್ಕಾರ ನಾಲ್ಕು ಸಾವಿರ ಕೋಟಿ ಖರ್ಚು ಮಾಡಿದೆ. ನೀರಾವರಿಗಾಗಿ ನಾವು ಪಾದಯಾತ್ರೆ ನಡೆಸಿದ್ದೆವು. ನೀರಾವರಿಗೋಸ್ಕರ 56 ಸಾವಿರ ಕೋಟಿ ರೂ. ಖರ್ಚು ಮಾಡುವ ಗುರಿ ಹೊಂದಿದ್ದೇವೆ. ಕೃಷ್ಣಾ ಮೇಲ್ದಂಡೆ ಯೋಜನೆ ಮುಖಾಂತರ ಹಲವು ಭಾಗಗಳಿಗೆ ನೀರು ಕೊಡಬಹುದು. ಆದರೆ ಇದುವರೆಗೂ ಕೇಂದ್ರ ಸರ್ಕಾರ ಅದಕ್ಕೆ ಅನುಮತಿ ಕೊಟ್ಟಿಲ್ಲ." ಎಂದು ಆರೋಪಿಸಿದರು.
"ಮಹಾದಾಯಿ ವಿಚಾರದಲ್ಲಿ ಪ್ರಹ್ಲಾದ್ ಜೋಶಿ ಮಾತನಾಡುತ್ತಿಲ್ಲ. ಜೋಶಿಯವರೇ ಎನ್ಆರ್ ಮೇಟ್ ಕ್ಲಿಯರ್ ಮಾಡ್ಸಿ ಕೊಡಿ. ನಾಳೆ ಕಾಮಗಾರಿ ಪ್ರಾರಂಭಿಸುತ್ತೇವೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಕೊಡುತ್ತೇವೆ ಎಂದು ಬಿಜೆಪಿಯವರು ಹೇಳಿದ್ದರು. ಆದರೆ ಇದುವರೆಗೂ ಒಂದು ರೂಪಾಯಿ ಹಣ ಬಂದಿಲ್ಲ." ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
"ಬೆಳಗಾವಿಯ ಬಿಜೆಪಿ ಸಂಸದರು ಕೃಷ್ಣಾ ಮೇಲ್ದಂಡೆ ಯೋಜನೆ, ಮಹಾದಾಯಿ, ಕಳಸಾಬಂಡೂರಿ ಯೋಜನೆಗಳ ಬಗ್ಗೆ ಮಾತೇ ಆಡ್ತಿಲ್ಲ ಯಾಕೆ? ನರೇಂದ್ರ ಮೋದಿ ಹತ್ತಿರ ಮಾತನಾಡಲು ಸಂಸದರು ಗಡಗಡ ನಡುಗುತ್ತಾರೆ. ನಮಗೆ ಕೇಂದ್ರದಿಂದ ಜಿಎಸ್ಟಿ ವಿಚಾರದಲ್ಲಿ ಅನ್ಯಾಯವಾಗಿದೆ. ಇದರ ಬಗ್ಗೆ ಬಿಜೆಪಿ ಎಂಪಿಗಳು ಮಾತನಾಡುತ್ತಿಲ್ಲ? ನೀರಾವರಿ ಬಗ್ಗೆ ಪ್ರಧಾನಿ ಬಳಿ ಮಾತನಾಡುತ್ತಿಲ್ಲ. ಇವರನ್ನು ಯಾಕೆ ಆಯ್ಕೆ ಮಾಡಬೇಕು? ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ" ಎಂದು ಹೇಳಿದರು.
"ಐದು ವರ್ಷದಲ್ಲಿ ಬಿಜೆಪಿಯವರು ನೀರಾವರಿಗೋಸ್ಕರ ಒಂದು ಲಕ್ಷ ಕೋಟಿ ಖರ್ಚು ಮಾಡುತ್ತೇವೆ ಎಂದು ಹೇಳಿದ್ದರು. ಮೂರು ವರ್ಷಗಳು ಅಧಿಕಾರ ನಡೆಸಿದ ಬಿಜೆಪಿ ರೈತರ ಒಂದೇ ಒಂದು ರೂಪಾಯಿ ಮನ್ನಾ ಮಾಡಲಿಲ್ಲ. ಐದು ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ 158 ಭರವಸೆ ಈಡೇರಿಸಲಾಗಿದೆ. ನಾವು ಐದು ಗ್ಯಾರೆಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಕಳೆದ ಚುನಾವಣೆ ವೇಲೆ ಪುಲ್ವಾಮಾ ವಿಚಾರ ಎತ್ತಿದ್ದರು. ಈ ಬಾರಿ ರಾಮಮಂದಿರ ವಿಚಾರ ಮುಂದೆ ತಂದಿದ್ದಾರೆ. ಇವರು ಬರೇ ರಾಮನನ್ನು ಮುಂದೆ ತಂದಿದ್ದಾರೆ. ರಾಮನ ಜೊತೆಗೆ ಸೀತಾ ಮಾತೆ, ಆಂಜನೇಯನನ್ನು ಮರೆತಿದ್ದಾರೆ. ಇದರಿಂದ ನಾನು ಜೈ ಸೀತಾರಾಮ ಎನ್ನುತ್ತೇನೆ. ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಬಜೆಟ್ನಲ್ಲಿ 100 ಕೋಟಿ ರೂಪಾಯಿ ನೀಡಲಾಗಿದೆ. ಕಂದಾಚಾರ, ಅನಾಚಾರ ತೊಲಗಲು ಬಸವೇಶ್ವರರು ಹೋರಾಟ ನಡೆಸಿದ್ದರು. ನಾವು ಸಾಂಸ್ಕೃತಿಕ ನಾಯಕ ಬಸವೇಶ್ವರ ಎಂದು ಘೋಷಣೆ ಮಾಡಿದೆವು" ಎಂದರು.
ಇದನ್ನೂ ಓದಿ: 'ಎರಡರಿಂದ ಮೂರು ದಿನಗಳಲ್ಲಿ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ'