ಬೆಂಗಳೂರು: ದೇಶದ ಗದ್ದುಗೆ ನಿರ್ಧರಿಸುವ ಪ್ರಜಾ ಪ್ರಭುವಿನ ಮಹಾತೀರ್ಪಿಗಾಗಿ ಜನರು ಅತ್ಯಂತ ಕುತೂಹಲದಿಂದ ಕಾಯುತ್ತಿದ್ದಾರೆ. ಜೂನ್ 4ರಂದು ಈ ತೀರ್ಪು ಹೊರಬರಲಿದೆ. ರಾಜ್ಯದ 28 ಕ್ಷೇತ್ರಗಳಲ್ಲೂ ಭಾರೀ ಪೈಪೋಟಿ ಇದ್ದು, ಯಾರಿಗೆ ವಿಜಯಮಾಲೆ ಎಂಬುದನ್ನು ತಿಳಿಯಲು ಇನ್ನು ಹೆಚ್ಚು ಸಮಯ ಕಾಯಬೇಕಿಲ್ಲ.
ರಾಜ್ಯದ 28 ಕ್ಷೇತ್ರಗಳ ಸಂಕ್ಷಿಪ್ತ ಮಾಹಿತಿ ಹೀಗಿದೆ:
ಬೆಂಗಳೂರು ದಕ್ಷಿಣ: ಈ ಕ್ಷೇತ್ರದಲ್ಲಿ 1991ರಿಂದ ಸತತವಾಗಿ 8 ಬಾರಿ ಬಿಜೆಪಿ ಗೆದ್ದಿದೆ. ಬಿಜೆಪಿಯಿಂದ ಅನಂತ್ ಕುಮಾರ್ ಆರು ಬಾರಿ ಕ್ಷೇತ್ರ ಪ್ರತಿನಿಧಿಸಿದ್ದರು. 2019ರಲ್ಲಿ ಮೊದಲ ಬಾರಿಗೆ ಆಯ್ಕೆಯಾಗಿದ್ದ ತೇಜಸ್ವಿ ಸೂರ್ಯ ಈ ಬಾರಿ ಎರಡನೇ ಬಾರಿಗೆ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಹಾಗೂ ಮಾಜಿ ಶಾಸಕಿ ಸೌಮ್ಯರೆಡ್ಡಿ ಮೊದಲ ಬಾರಿ ಲೋಕಸಭಾ ಅಖಾಡದಲ್ಲಿದ್ದಾರೆ. ಇಲ್ಲಿ ಕಾಂಗ್ರೆಸ್, ಬಿಜೆಪಿ ಮಧ್ಯೆ ನೇರ ಹಣಾಹಣಿ ಇದ್ದು, ಮೂರು ದಶಕಗಳ ಬಳಿಕ ಕೈ ಖಾತೆ ತೆರೆಯುವುದೇ ನೋಡಬೇಕು.
ಬೆಂಗಳೂರು ಉತ್ತರ: 1952ರಿಂದ ಇಲ್ಲಿಯವರೆಗೂ 17 ಚುನಾವಣೆಗಳನ್ನು ಕ್ಷೇತ್ರ ಕಂಡಿದೆ. ಈ ಹಿಂದೆ 12 ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. 2004ರಿಂದ ಬಿಜೆಪಿ ಅಭ್ಯರ್ಥಿಗಳಾದ ಹೆಚ್.ಟಿ.ಸಾಂಗ್ಲಿಯಾನ, ಡಿ.ಬಿ.ಚಂದ್ರೇಗೌಡ ಒಂದು ಬಾರಿ ಹಾಗೂ ಡಿ.ವಿ.ಸದಾನಂದ ಗೌಡ ಎರಡು ಬಾರಿ ಗೆದ್ದಿದ್ದಾರೆ. ಈ ಸಲ ಸದಾನಂದ ಗೌಡಗೆ ಟಿಕೆಟ್ ತಪ್ಪಿದ್ದು, ಶೋಭಾ ಕರಂದ್ಲಾಜೆಗೆ ಪಕ್ಷ ಮಣೆ ಹಾಕಿದೆ. ಕಾಂಗ್ರೆಸ್ನಿಂದ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಸ್ಥರ ಹಾಗೂ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಉಪನ್ಯಾಸಕರಾಗಿದ್ದ ಪ್ರೊ.ರಾಜೀವ್ ಗೌಡ ಕಣದಲ್ಲಿದ್ದಾರೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಬೆಂಗಳೂರು ಉತ್ತರಕ್ಕೆ ಬಂದಿರುವುದರಿಂದ ಸ್ವಪಕ್ಷದರ ಅಸಮಾಧಾನ ಕರಂದ್ಲಾಜೆ ಅವರ ಫಲಿತಾಂಶದ ಮೇಲೆ ಪರಿಣಾಮ ಬೀಳುತ್ತಾ? ಎಂಬುದೊಂದು ಜಿಜ್ಞಾಸೆ.
ಬೆಂಗಳೂರು ಕೇಂದ್ರ: ಹಾಲಿ ಸಂಸದ ಬಿಜೆಪಿ ಪಿ.ಸಿ.ಮೋಹನ್ ನಾಲ್ಕನೇ ಬಾರಿ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಕಾಂಗ್ರೆಸ್ ಈ ಬಾರಿ ಹೊಸ ಮುಖ ಮನ್ಸೂರ್ ಅಲಿ ಖಾನ್‌ರನ್ನು ಕಣಕ್ಕಿಳಿಸಿದೆ. 2008ರಲ್ಲಿ ಕ್ಷೇತ್ರ ರಚನೆಯಾದ ಬಳಿಕ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಅವರೇ ಈಗಾಗಲೇ ಮೂರು ಬಾರಿ ಜಯಿಸಿದ್ದಾರೆ. ಆದ್ದರಿಂದ ಇದು ಬಿಜೆಪಿಯ ಭದ್ರಕೋಟೆಯಾಗಿ ಮಾರ್ಪಟ್ಟಿದೆ. ಮನ್ಸೂರ್ ಅಲಿ ಖಾನ್ ಕೂಡ ಭರ್ಜರಿ ಪ್ರಚಾರ ನಡೆಸಿದ್ದರಿಂದ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.
ಬೆಂಗಳೂರು ಗ್ರಾಮೀಣ: ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ.ಸುರೇಶ್ ಮತ್ತು ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಹೃದಯರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಸ್ಪರ್ಧಿಸಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಅಳಿಯನಾಗಿರುವ ಮಂಜುನಾಥ್ ಸ್ಪರ್ಧೆಯಿಂದ ಬೆಂಗಳೂರು ಗ್ರಾಮೀಣ ಹೈವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಟ್ಟಿದೆ. ಇಬ್ಬರ ಮಧ್ಯೆ ನೇರಾನೇರ ಫೈಟ್ ಇದೆ. 2008ರಲ್ಲಿ ರಚನೆಯಾದ ಈ ಕ್ಷೇತ್ರದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಮೊದಲ ಸಂಸದರಾಗಿದ್ದರು. 2013ರಲ್ಲಿ ಹೆಚ್ಡಿಕೆ ರಾಜೀನಾಮೆ ನೀಡಿದ ಬಳಿಕ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಡಿ.ಕೆ.ಸುರೇಶ್ ಆಯ್ಕೆಯಾಗಿದ್ದರು. ಬಳಿಕ 2014, 2019ರಲ್ಲೂ ಡಿ.ಕೆ.ಸುರೇಶ್ ಗೆದ್ದಿದ್ದಾರೆ. ಈ ಬಾರಿ ನಾಲ್ಕನೇ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.
ಕೋಲಾರ: ಇದು ಮೀಸಲು ಕ್ಷೇತ್ರ. ಕಾಂಗ್ರೆಸ್ನಿಂದ ಕೆ.ವಿ.ಗೌತಮ್, ಜೆಡಿಎಸ್ನಿಂದ ಎಂ.ಮಲ್ಲೇಶ್ ಸ್ಪರ್ಧಿಸಿದ್ದಾರೆ. ಇಬ್ಬರೂ ಮೊದಲ ಬಾರಿ ಲೋಕಸಮರದಲ್ಲಿದ್ದಾರೆ. ಬಿಜೆಪಿ ಮೈತ್ರಿ ಪಕ್ಷವಾದ್ದರಿಂದ ಮಲ್ಲೇಶ್ ಅವರಿಗೆ ಕಮಲ ಪಾಳಯದ ಬೆಂಬಲ ಕೂಡಾ ಇದೆ. ಕಾಂಗ್ರೆಸ್ನ ಭದ್ರಕೋಟೆಯಲ್ಲಿ ಕೆ.ಹೆಚ್.ಮುನಿಯಪ್ಪ ಸತತ 7 ಬಾರಿ ಗೆದ್ದಿದ್ದರು. ಆದರೆ 2019ರಲ್ಲಿ ಸ್ವಪಕ್ಷದಲ್ಲಿನ ಅಸಮಾಧಾನದಿಂದ ಮುನಿಯಪ್ಪ ಸೋತಿದ್ದರು. ಮುನಿಸ್ವಾಮಿ ಗೆಲ್ಲುವ ಮೂಲಕ ಮೊದಲ ಬಾರಿ ಬಿಜೆಪಿ ಖಾತೆ ತೆರೆದಿತ್ತು.
ಚಿಕ್ಕಬಳ್ಳಾಪುರ: ಬಿಜೆಪಿಯಿಂದ ಡಾ.ಕೆ.ಸುಧಾಕರ್ ಮತ್ತು ಕಾಂಗ್ರೆಸ್ನಿಂದ ರಕ್ಷಾ ರಾಮಯ್ಯ ಸ್ಪರ್ಧಿಸಿದ್ದಾರೆ. ಲೋಕ ಸಮರದಲ್ಲಿ ಇಬ್ಬರೂ ಮೊದಲ ಬಾರಿಗೆ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ನ ಭದ್ರಕೋಟೆಯಲ್ಲಿ 2019ರಲ್ಲಿ ಮೊದಲ ಬಾರಿಗೆ ಬಿಜೆಪಿಯಿಂದ ಬಿ.ಎನ್.ಬಚ್ಚೇಗೌಡ ಜಯ ಸಾಧಿಸಿದ್ದರು. ಈ ಬಾರಿ ಕ್ಷೇತ್ರವನ್ನು ಮತ್ತೆ ವಶಕ್ಕೆ ಪಡೆಯಲು ಕಾಂಗ್ರೆಸ್ ಮುಂದಾಗಿದೆ. 2009 ಮತ್ತು 2014ರಲ್ಲಿ ಗೆದ್ದಿದ್ದ ವೀರಪ್ಪ ಮೊಯ್ಲಿ ಈ ಸಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಹೈಕಮಾಂಡ್ ಯುವ ನಾಯಕ ರಕ್ಷಾ ರಾಮಯ್ಯಗೆ ಅವಕಾಶ ನೀಡಿದೆ.
ಚಾಮರಾಜನಗರ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರ ಒಳಗೊಂಡಿರುವ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಮಧ್ಯೆ ಜಿದ್ದಾಜಿದ್ದಿ ಇದೆ. ಮೀಸಲು (ಎಸ್ಸಿ) ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಶಾಸಕ ಎಸ್.ಬಾಲರಾಜು ಮತ್ತು ಕಾಂಗ್ರೆಸ್ನಿಂದ ಸಚಿವ ಹೆಚ್.ಸಿ.ಮಹಾದೇವಪ್ಪ ಪುತ್ರ ಸುನಿಲ್ ಬೋಸ್ ಕಣದಲ್ಲಿದ್ದಾರೆ. 2019ರಲ್ಲಿ ಮೊದಲ ಬಾರಿಗೆ ಗಡಿ ಜಿಲ್ಲೆಯಲ್ಲಿ ಶ್ರೀನಿವಾಸ್ ಪ್ರಸಾದ್ ಕಮಲ ಅರಳಿಸಿದ್ದರು. ಈ ಬಾರಿ ಎರಡೂ ಪಕ್ಷಗಳ ಮಧ್ಯೆ ನೇರ ಫೈಟ್ ಇದೆ.
ಮೈಸೂರು-ಕೊಡಗು: ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಬಿಜೆಪಿಯಿಂದ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಕಾಂಗ್ರೆಸ್ನಿಂದ ಎಂ.ಲಕ್ಷ್ಮಣ್ ಸ್ಪರ್ಧಿಸಿದ್ದಾರೆ. 2014, 2019ರಲ್ಲಿ ಬಿಜೆಪಿಯಿಂದ ಪ್ರತಾಪ್ ಸಿಂಹ ಗೆದ್ದಿದ್ದರು. ಈ ಬಾರಿ ಬಿಜೆಪಿ ಹಾಲಿ ಸಂಸದರ ಬದಲಿಗೆ ರಾಜವಂಶಸ್ಥ ಯದುವೀರ್ಗೆ ಟಿಕೆಟ್ ನೀಡಿದೆ. ಎರಡೂ ಪಕ್ಷಗಳ ಅಭ್ಯರ್ಥಿಗಳು ಮೊದಲ ಬಾರಿ ಲೋಕಸಮರದಲ್ಲಿದ್ದಾರೆ. ಯದುವೀರ್ ಮತ್ತು ಎಂ.ಲಕ್ಷ್ಮಣ್ ಮಧ್ಯೆ ನೇರ ಪೈಪೋಟಿ ಇದೆ ಎಂದು ಹೇಳಲಾಗುತ್ತಿದೆ.
ಮಂಡ್ಯ: ಒಕ್ಕಲಿಗ ಮತಗಳ ಪ್ರಾಬಲ್ಯವಿರುವ ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಕಾಂಗ್ರೆಸ್ನಿಂದ ವೆಂಕಟರಾಮೇಗೌಡ (ಸ್ಟಾರ್ ಚಂದ್ರು) ಮಧ್ಯೆ ಹಣಾಹಣಿ ಮೂಡಿದೆ. ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿದ್ದ ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸಿದ್ದು, ಸುಮಲತಾ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಸ್ಟಾರ್ ಚಂದ್ರು ಮೊದಲ ಬಾರಿ ಪರೀಕ್ಷೆಗಿಳಿದಿದ್ದಾರೆ.
ತುಮಕೂರು: ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಮಾಜಿ ಸಚಿವ ವಿ.ಸೋಮಣ್ಣ ಮತ್ತು ಕಾಂಗ್ರೆಸ್ನಿಂದ ಎಸ್.ಪಿ.ಮುದ್ದಹನುಮೇಗೌಡ ಕಣಕ್ಕಿಳಿದಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಬಿಜೆಪಿ ಅಭ್ಯರ್ಥಿ ಜೆ.ಎಸ್.ಬಸವರಾಜು ವಿರುದ್ಧ ಸೋತಿದ್ದರು. ಕಳೆದ ಬಾರಿ ಬಿಜೆಪಿಯಲ್ಲಿದ್ದ ಮುದ್ದಹನುಮೇಗೌಡರು ಈ ಬಾರಿ ಕಾಂಗ್ರೆಸ್ ಸೇರಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಇನ್ನು ವಿ.ಸೋಮಣ್ಣ ಮೊದಲ ಬಾರಿಗೆ ತುಮಕೂರಿನಿಂದ ಸ್ಪರ್ಧೆಗೆ ಇಳಿದಿದ್ದಾರೆ.
ಹಾಸನ: ಜೆಡಿಎಸ್ ಭದ್ರಕೋಟೆಯಾಗಿರುವ ಹಾಸನದಲ್ಲಿ ಎರಡನೇ ಬಾರಿಗೆ ಪ್ರಜ್ವಲ್ ರೇವಣ್ಣ ಸ್ಪರ್ಧಿಸಿದ್ರೆ, ಮೊದಲ ಬಾರಿಗೆ ಶ್ರೇಯಸ್ ಪಟೇಲ್ ಅಖಾಡದಲ್ಲಿದ್ದಾರೆ. ಈ ಕ್ಷೇತ್ರದಲ್ಲಿ 1991ರ ನಂತರ ಜೆಡಿಎಸ್ 7 ಬಾರಿ ಗೆದ್ದಿದ್ದು, ಇದರಲ್ಲಿ ದೇವೇಗೌಡರು 5 ಬಾರಿ ಜಯಿಸಿದ್ದರು. 2019ರಲ್ಲಿ ಮೊಮ್ಮಗ ಪ್ರಜ್ವಲ್ಗಾಗಿ ಕ್ಷೇತ್ರ ತ್ಯಾಗ ಮಾಡಿದ್ದರು. ಈ ಬಾರಿ ಪ್ರಜ್ವಲ್ ಮತ್ತೊಮ್ಮೆ ಆಯ್ಕೆ ಬಯಸಿದ್ದಾರೆ. ಈ ಬಾರಿ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಪೆನ್‌ಡ್ರೈವ್ ಪ್ರಕರಣ ಸದ್ದು ಮಾಡಿದ್ದರಿಂದ ಫಲಿತಾಂಶದ ಮೇಲೆ ಇಡೀ ದೇಶದ ಕಣ್ಣಿದೆ.
ಉಡುಪಿ-ಚಿಕ್ಕಮಗಳೂರು: ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಮತ್ತು ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಮಧ್ಯೆ ನೇರ ಹಣಾಹಣಿ ಇದೆ. 2014, 2019ರಲ್ಲಿ ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದಿದ್ದ ಶೋಭಾ ಕರಂದ್ಲಾಜೆಗೆ ಈ ಬಾರಿ ಬೆಂಗಳೂರು ಉತ್ತರದಿಂದ ಟಿಕೆಟ್ ನೀಡಲಾಗಿದೆ. ಇದರಿಂದಾಗಿ ಮೊದಲ ಬಾರಿಗೆ ಕೋಟಾ ಶ್ರೀನಿವಾಸ ಪೂಜಾರಿ ಕಣಕ್ಕಿಳಿದಿದ್ದಾರೆ. 10 ವರ್ಷಗಳ ಹಿಂದೆ ಸಂಸದರಾಗಿದ್ದ ಜಯಪ್ರಕಾಶ್ ಹೆಗ್ಡೆ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
ದಕ್ಷಿಣ ಕನ್ನಡ: ಕಳೆದ ಮೂರು ದಶಕಗಳಿಂದ ಬಿಜೆಪಿಯ ಭದ್ರಕೋಟೆಯಾಗಿರುವ ಕ್ಷೇತ್ರದಲ್ಲಿ ಈ ಬಾರಿ ಹೊಸಬರು ಅಖಾಡದಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಮತ್ತು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಮಧ್ಯೆ ಸಮಬಲದ ಹೋರಾಟ ಕಂಡುಬಂದಿದೆ. ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ 1991ರಲ್ಲಿ ಸೋಲನುಭವಿಸಿದ ಬಳಿಕ ಕಾಂಗ್ರೆಸ್ ಇಲ್ಲಿ ಸತತ ಸೋಲು ಕಂಡಿದೆ. ಧನಂಜಯ ಕುಮಾರ್, ಸದಾನಂದ ಗೌಡ, ನಳಿನ್ ಕುಮಾರ್ ಕಟೀಲ್ ಇಲ್ಲಿ ಸತತವಾಗಿ ಬಿಜೆಪಿಯಿಂದ ಆಯ್ಕೆಯಾಗಿದ್ದರು. ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಬಿಜೆಪಿ ಟಿಕೆಟ್ ನೀಡದೇ ಈ ಬಾರಿ ಹೊಸಬರಿಗೆ ಅವಕಾಶ ನೀಡಲಾಗಿದೆ.
ಶಿವಮೊಗ್ಗ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತವರು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಪುತ್ರ ಕಾಂತೇಶ್ಗೆ ಬಿಜೆಪಿ ಟಿಕೆಟ್ ಕೈ ತಪ್ಪಿದ್ದರಿಂದ ಬಂಡಾಯ ಎದ್ದು ಪಕ್ಷೇತರ ಅಭ್ಯರ್ಥಿಯಾಗಿ ಕೆ.ಎಸ್.ಈಶ್ವರಪ್ಪ ಸ್ಪರ್ಧಿಸಿರುವುದು ಬಿಜೆಪಿಗೆ ಆರಂಭಿಕ ಆಘಾತ ಉಂಟುಮಾಡಿದೆ. ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ನಾಲ್ಕನೇ ಬಾರಿ ಜಯದ ನಿರೀಕ್ಷೆಯಲ್ಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಾಜಿ ಸಿಎಂ ಎಸ್.ಬಂಗಾರಪ್ಪ ಅವರ ಪುತ್ರಿ, ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. 2014ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗೀತಾ ಸೋತಿದ್ದರು.
ಚಿತ್ರದುರ್ಗ: ಬಿಜೆಪಿಯಿಂದ ಗೋವಿಂದ ಕಾರಜೋಳ, ಕಾಂಗ್ರೆಸ್ನಿಂದ ಬಿ.ಎನ್.ಚಂದ್ರಪ್ಪ ಮಧ್ಯೆ ಹಣಾಹಣೆ ಇದೆ. ಕಳೆದ ಬಾರಿ ಎ.ನಾರಾಯಣಸ್ವಾಮಿ ಬಿಜೆಪಿಯಿಂದ ಗೆದ್ದು ಕೇಂದ್ರ ಸಚಿವರಾಗಿದ್ದರು. ಆದರೆ ಈ ಸಲ ಅವರ ಬದಲಾಗಿ ಬಾಗಲಕೋಟೆ ಜಿಲ್ಲೆಯ ಗೋವಿಂದ ಕಾರಜೋಳ ಅವರಿಗೆ ಮಣೆ ಹಾಕಲಾಗಿದೆ. 2014ರಲ್ಲಿ ಗೆದ್ದಿದ್ದ ಬಿ.ಎನ್.ಚಂದ್ರಪ್ಪ ಈ ಬಾರಿ ಮತ್ತೊಮ್ಮೆ ಗೆಲುವು ಬಯಸಿ ಅಖಾಡದಲ್ಲಿದ್ದಾರೆ. ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಈ ಇಬ್ಬರೂ ಚಿತ್ರದುರ್ಗ ಜಿಲ್ಲೆಯವರಲ್ಲ. ಆದರೆ ಮಾಜಿ ಸಂಸದ ಚಂದ್ರಪ್ಪ ಜಿಲ್ಲೆಯ ಜನರಿಗೆ ಚಿರಪರಿಚಿತರು.
ದಾವಣಗೆರೆ: ರಾಜಕೀಯವಾಗಿ ಜಿ.ಎಂ.ಸಿದ್ದೇಶ್ವರ್ ಹಾಗೂ ಶಾಮನೂರು ಶಿವಶಂಕರಪ್ಪ ಕುಟುಂಬಗಳ ಮಧ್ಯೆ ಜಿದ್ದಾಜಿದ್ದಿ ಮುಂದುವರಿದಿದೆ. ಈ ಬಾರಿ ಎರಡೂ ಕುಟುಂಬಗಳು ಮಹಿಳೆಯರನ್ನು ಕಣಕ್ಕಿಳಿಸಿವೆ. ಕಾಂಗ್ರೆಸ್ನಿಂದ ಶಾಮನೂರು ಕುಟುಂಬದ ಸೊಸೆ ಪ್ರಭಾ ಮಲ್ಲಿಕಾರ್ಜುನ್ ಮತ್ತು ಬಿಜೆಪಿಯಿಂದ ಜಿ.ಎಂ.ಸಿದ್ದೇಶ್ವರ್ ಅವರ ಪತ್ನಿ ಗಾಯಿತ್ರಿ ಸಿದ್ದೇಶ್ವರ್ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಂಡಾಯ ಎದ್ದು ವಿನಯ್ ಕುಮಾರ್ ಪಕ್ಷೇತರ ಹುರಿಯಾಳಾಗಿ ಅಖಾಡಕ್ಕೆ ಧುಮುಕಿದ್ದರಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಹಾಲಿ ಸಂಸದ ಸಿದ್ದೇಶ್ವರ್ ಪತ್ನಿಗೆ ಟಿಕೆಟ್ ನೀಡಿರುವುದಕ್ಕೆ ಕೆಲ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದರು. 1977ರಿಂದ 2019ರವರೆಗೆ ಒಟ್ಟು 12 ಲೋಕಸಭಾ ಚುನಾವಣೆಗಳನ್ನು ದಾವಣಗೆರೆ ಕ್ಷೇತ್ರ ಕಂಡಿದೆ. ಇದರಲ್ಲಿ ಕಾಂಗ್ರೆಸ್ 6 ಬಾರಿ ಗೆಲುವು ಸಾಧಿಸಿದ್ದರೆ, ಬಿಜೆಪಿ 6 ಬಾರಿ ಜಯ ದಾಖಲಿಸಿ ಸಮಬಲ ಸಾಧಿಸಿವೆ. ಅದರಲ್ಲೂ, ಬಿಜೆಪಿಯಿಂದ ಸಿದ್ದೇಶ್ವರ್ ಕುಟುಂಬವೇ 6 ಸಲವೂ ಆಯ್ಕೆಯಾಗಿದೆ. ಇದರಲ್ಲಿ ಎರಡು ಬಾರಿ ಸಿದ್ದೇಶ್ವರ್ ತಂದೆ ಜಿ.ಮಲ್ಲಿಕಾರ್ಜುನಪ್ಪ ಗೆದ್ದಿದ್ದರೆ, ನಾಲ್ಕು ಬಾರಿ ಸಿದ್ದೇಶ್ವರ್ ಗೆಲುವು ಕಂಡಿದ್ದರು. ಈ ಬಾರಿ ಏನಾಗುತ್ತೆ ಕಾದು ನೋಡಬೇಕು.
ಹಾವೇರಿ: ಬಿಜೆಪಿಯಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಕಾಂಗ್ರೆಸ್ನಿಂದ ಆನಂದಸ್ವಾಮಿ ಗಡ್ಡದೇವರಮಠ ಹುರಿಯಾಳುಗಳು. 2008ರಲ್ಲಿ ಕ್ಷೇತ್ರ ರಚನೆಯಾದ ಬಳಿಕ ಬಿಜೆಪಿ ಹ್ಯಾಟ್ರಿಕ್ ಜಯ ಸಾಧಿಸಿದೆ. ಮೂರು ಬಾರಿ ಶಿವಕುಮಾರ ಉದಾಸಿ ಗೆದ್ದಿದ್ದರು. ಆದರೆ ಈ ಬಾರಿ ಅವರು ರಾಜಕೀಯ ನಿವೃತ್ತಿ ಪಡೆದಿದ್ದರು. ಮಾಜಿ ಡಿಸಿಎಂ ಈಶ್ವರಪ್ಪ ಅವರು ಪುತ್ರ ಕಾಂತೇಶ್ಗೆ ಬಿಜೆಪಿ ಟಿಕೆಟ್ ಕೊಡಿಸುವ ಪ್ರಯತ್ನ ನಡೆಸಿದ್ದರು. ಆದರೆ ಬಸವರಾಜ ಬೊಮ್ಮಾಯಿಗೆ ಟಿಕೆಟ್ ಒಲಿದಿತ್ತು. ಬೊಮ್ಮಾಯಿ ಮತ್ತು ಗಡ್ಡದೇವರ ಮಠ ಅವರು ಇದೇ ಮೊದಲ ಬಾರಿಗೆ ಲೋಕಸಭೆ ಚುನಾವಣೆ ಅಖಾಡದಲ್ಲಿದ್ದಾರೆ. ಈ ಬಾರಿ ಶೇ.77.60ರಷ್ಟು ಮತದಾನವಾಗಿದೆ. ಕಳೆದ ಬಾರಿ ಶೇ.74.01ರಷ್ಟು ದಾಖಲಾಗಿತ್ತು.
ಉತ್ತರ ಕನ್ನಡ: 2004ರಿಂದ ಕ್ಷೇತ್ರ ಬಿಜೆಪಿ ವಶದಲ್ಲಿದೆ. ಸತತವಾಗಿ 4 ಬಾರಿ ಸಂಸದರಾಗಿದ್ದ ಅನಂತ ಕುಮಾರ್ ಹೆಗಡೆಗೆ ಈ ಸಲ ಬಿಜೆಪಿ ಟಿಕೆಟ್ ತಪ್ಪಿದ್ದು, ವಿಶ್ವೇಶ್ವರ ಹೆಗಡೆ ಕಾಗೇರಿ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ನಿಂದ ಡಾ.ಅಂಜಲಿ ನಿಂಬಾಳ್ಕರ್ ಸ್ಪರ್ಧಿಸಿದ್ದಾರೆ. ಟಿಕೆಟ್ ತಪ್ಪಿದ್ದಕ್ಕೆ ಪ್ರಚಾರಕ್ಕೆ ಬಾರದೇ ಹೆಗಡೆ ಅಸಮಾಧಾನ ತೋರಿಸಿರುವುದು ಕಮಲ ಪಾಳಯದ ಮೇಲೆ ಪರಿಣಾಮ ಬೀರುತ್ತಾ ನೋಡಬೇಕಿದೆ. ಇನ್ನು ನಿಂಬಾಳ್ಕರ್ ಅವರು ಮರಾಠಾ ಸಮುದಾಯ, ಗ್ಯಾರಂಟಿ ಬಲದಿಂದ ಕೇಸರಿ ಕೋಟೆ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.
ಧಾರವಾಡ: ಸತತ ನಾಲ್ಕು ಸಲ ಸಂಸದರಾಗಿ ಗೆದ್ದು ಐದನೇ ಬಾರಿಗೆ ಬಿಜೆಪಿಯಿಂದ ಪ್ರಹ್ಲಾದ್ ಜೋಶಿ ಮತ್ತು ಇದೇ ಮೊದಲ ಬಾರಿಗೆ ಕಾಂಗ್ರೆಸ್ನಿಂದ ವಿನೋದ್ ಅಸೂಟಿ ಹುರಿಯಾಳಾಗಿದ್ದಾರೆ. ಜೋಶಿ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಕೊನೆ ಗಳಿಗೆಯಲ್ಲಿ ನಾಮಪತ್ರ ಹಿಂಪಡೆದು, ಕಾಂಗ್ರೆಸ್ ಬೆಂಬಲಿಸಿದ್ದಾರೆ. 1996ರಿಂದ ಸತತವಾಗಿ ಗೆಲ್ಲುತ್ತಿರುವ ಬಿಜೆಪಿಗೆ ಈ ಬಾರಿ ಕಾಂಗ್ರೆಸ್ನ ಹೊಸ ಅಭ್ಯರ್ಥಿ ಠಕ್ಕರ್ ಕೊಡ್ತಾರಾ ನೋಡಬೇಕಿದೆ.
ಬೆಳಗಾವಿ: 2004ರಿಂದ ಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿದೆ. ಸತತ ನಾಲ್ಕು ಬಾರಿ ಸಂಸದರಾಗಿದ್ದ ಸುರೇಶ್ ಅಂಗಡಿ ಅಕಾಲಿಕ ನಿಧನದಿಂದಾಗಿ 2021ರಲ್ಲಿ ಉಪ ಚುನಾವಣೆ ನಡೆಯಿತು. ಸುರೇಶ್ ಅಂಗಡಿ ಅವರ ಪತ್ನಿ ಮಂಗಳಾ ಅಂಗಡಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು. ಆದರೆ ಈ ಬಾರಿ ಅವರ ಬದಲಾಗಿ ಧಾರವಾಡ ಜಿಲ್ಲೆಯವರಾದ ಜಗದೀಶ್ ಶೆಟ್ಟರ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಕಾಂಗ್ರೆಸ್ನಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಸ್ಪರ್ಧಿಸಿದ್ದಾರೆ. ಶೆಟ್ಟರ್ ಹೊರಗಿನವರು ಎನ್ನುವ ಕಾರಣಕ್ಕೆ ಬಿಜೆಪಿ ಸ್ಥಳೀಯ ನಾಯಕರಲ್ಲಿ ಅಸಮಾಧಾನವಿತ್ತು. 20 ವರ್ಷದ ಬಳಿಕ ಕ್ಷೇತ್ರ ಗೆಲ್ಲುವ ಭರವಸೆಯಲ್ಲಿ ಕಾಂಗ್ರೆಸ್ ಇದ್ದು, ನೇರಾನೇರ ಪೈಪೋಟಿ ನೀಡಿದೆ.
ಚಿಕ್ಕೋಡಿ: ಎರಡನೇ ಬಾರಿ ಗೆಲುವು ಬಯಸಿ ಬಿಜೆಪಿ ಅಭ್ಯರ್ಥಿ ಅಣ್ಣಸಾಬ್ ಜೊಲ್ಲೆ ಸ್ಪರ್ಧಿಸಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಇದೇ ಮೊದಲ ಬಾರಿಗೆ ಕಣಕ್ಕೆ ಇಳಿದಿದ್ದಾರೆ. ಸತೀಶ್ ಜಾರಕಿಹೊಳಿ ವರ್ಚಸ್ಸಿನಿಂದಾಗಿ ಈ ಬಾರಿ ಹಾಲಿ ಸಂಸದ ಅಣ್ಣಾಸಾಬ್ ಜೊಲ್ಲೆ ಮತ್ತು ಪ್ರಿಯಾಂಕಾ ಜಾರಕಿಹೊಳಿ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ನಿವೃತ್ತ ಐಎಎಸ್ ಅಧಿಕಾರಿ ಶಂಭು ಕಲ್ಲೋಳ್ಕರ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. 2019ರಲ್ಲಿ ಶೇ.75.52ರಷ್ಟು ಮತದಾನವಾಗಿತ್ತು. ಈ ಬಾರಿ ಶೇ.78.63 ರಷ್ಟು ಮತದಾರರು ಹಕ್ಕು ಚಲಾಯಿಸಿದ್ದಾರೆ.
ಬಾಗಲಕೋಟೆ: ಐದನೇ ಬಾರಿ ವಿಜಯ ಪತಾಕೆ ಹಾರಿಸಲು ಸಜ್ಜಾಗಿರುವ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಅವರಿಗೆ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತಾ ಪಾಟೀಲ ಪ್ರತಿಸ್ಪರ್ಧಿ. ಕಳೆದ ಬಾರಿ ಸೋತಿದ್ದ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಅವರ ಪತ್ನಿ ವೀಣಾ ಕಾಶಪ್ಪನವರ ಈ ಬಾರಿಯೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಪಕ್ಕದ ವಿಜಯಪುರ ಜಿಲ್ಲೆಯ ಸಂಯುಕ್ತಾ ಪಾಟೀಲ್ಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಇದು ಸ್ಥಳೀಯ ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನ ಮೂಡಿಸಿದೆ ಎನ್ನಲಾಗುತ್ತಿದೆ. ಮೊದಲ ಬಾರಿ ಸ್ಪರ್ಧಿಸಿರುವ ಸಂಯುಕ್ತಾ ಪಾಟೀಲ ಹೊರ ಜಿಲ್ಲೆಯವರು ಎಂಬ ಹಣೆಪಟ್ಟಿಯನ್ನು ಮನೆ ಮನೆ ಪ್ರಚಾರದ ಮೂಲಕ ತೆಗೆದುಹಾಕುವ ಪ್ರಯತ್ನ ಮಾಡಿದ್ದಾರೆ.
ವಿಜಯಪುರ: ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಹಾಲಿ ಸಂಸದ ರಮೇಶ್ ಜಿಗಜಿಣಗಿ, ಕಾಂಗ್ರೆಸ್ನ ರಾಜು ಆಲಗೂರು ಮಧ್ಯೆ ನೇರ ಪೈಪೋಟಿ ಇದೆ. ನಾಲ್ಕನೇ ಬಾರಿ ಜಯದ ನಿರೀಕ್ಷೆಯಲ್ಲಿ ಜಿಗಜಿಣಗಿ ಇದ್ದರೆ, ಮೊದಲ ಬಾರಿಗೆ ಸಂಸತ್ ಪ್ರವೇಶಿಸುವ ಭರವಸೆಯನ್ನು ಕಾಂಗ್ರೆಸ್ ಹುರಿಯಾಳು ಹೊಂದಿದ್ದಾರೆ. ಬಸವನಗೌಡ ಪಾಟೀಲ್ ಯತ್ನಾಳ ಜೊತೆಗಿನ ಮನಸ್ತಾಪವನ್ನು ರಮೇಶ್ ಜಿಗಜಿಣಗಿ ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.
ಬಳ್ಳಾರಿ: ಬಿಜೆಪಿಯಿಂದ ಬಿ.ಶ್ರೀರಾಮುಲು ಮತ್ತು ಕಾಂಗ್ರೆಸ್ನಿಂದ ಇ.ತುಕಾರಾಂ ಮಧ್ಯೆ ನೇರ ಸ್ಪರ್ಧೆ ಇದೆ. 1999ರಲ್ಲಿ ಸೋನಿಯಾ ಗಾಂಧಿ ಗೆಲ್ಲಿಸಿದ ಕ್ಷೇತ್ರದಲ್ಲಿ 2004ರ ನಂತರ ಬಿಜೆಪಿ ಮೇಲುಗೈ ಸಾಧಿಸುತ್ತಾ ಬಂದಿದೆ. 2018ರಲ್ಲಿ ನಡೆದ ಉಪಚುನಾವಣೆಯಲ್ಲಿ ಮಾತ್ರ ಕಾಂಗ್ರೆಸ್ನಿಂದ ಉಗ್ರಪ್ಪ ಗೆಲುವು ಸಾಧಿಸಿದ್ದರು. 2019ರಲ್ಲಿ ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಗೆಲುವು ಸಾಧಿಸಿದ್ದರು. ಕಳೆದ ವಿಧಾನಸಭೆಯಲ್ಲಿ ಸೋತಿದ್ದರಿಂದ ಈ ಬಾರಿ ಶ್ರೀರಾಮುಲು ಲೋಕಸಭೆಗೆ ಧುಮುಕಿದ್ದಾರೆ. 2014ರಲ್ಲಿ ಬಿಜೆಪಿಯಿಂದಲೇ ಶ್ರೀರಾಮುಲು ಲೋಕಸಭೆಗೆ ಪ್ರವೇಶಿಸಿದ್ದರು. ಜನಾರ್ದನ ರೆಡ್ಡಿ ಅವರ ಕೆಆರ್ಪಿಪಿ ಪಕ್ಷ ಬಿಜೆಪಿ ಜೊತೆ ವಿಲೀನವಾಗಿರುವುದು ಶ್ರೀರಾಮುಲು ಗೆಲುವಿಗೆ ಪೂರಕವಾಗುವ ಸಾಧ್ಯತೆ ಇದೆ.
ಕೊಪ್ಪಳ: ಸತತವಾಗಿ ಎರಡು ಬಾರಿ ಗೆದ್ದಿದ್ದ ಸಂಗಣ್ಣ ಕರಡಿಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಿಲ್ಲ. ಬದಲಾಗಿ ಪಕ್ಷ ಹೊಸ ಮುಖ, ಖ್ಯಾತ ವೈದ್ಯ ಡಾ.ಬಸವರಾಜ ಕ್ಯಾವಟರ ಅವರನ್ನು ಕಣಕ್ಕಿಳಿಸಿದೆ. ಹಾಗೆಯೇ ಕಾಂಗ್ರೆಸ್ನಿಂದ 2014 ಮತ್ತು 2018ರಲ್ಲಿ ಸ್ಪರ್ಧಿಸಿ ಸೋತಿದ್ದ ಕೆ.ರಾಜಶೇಖರ ಹಿಟ್ನಾಳ್ ಈ ಬಾರಿ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಟಿಕೆಟ್ ತಪ್ಪಿದ್ದರಿಂದ ಅಸಮಾಧಾನಗೊಂಡು ಹಾಲಿ ಸಂಸದ ಸಂಗಣ್ಣ ಕರಡಿ ಕಾಂಗ್ರೆಸ್ ಸೇರ್ಪಡೆಯಾಗಿರುವುದು ಬಿಜೆಪಿಗೆ ಆತಂಕ ಉಂಟುಮಾಡಿದೆ. 2009ರಿಂದ ಕ್ಷೇತ್ರದಲ್ಲಿ ಕಮಲ ಪಾಳಯ ಮೇಲುಗೈ ಸಾಧಿಸುತ್ತಾ ಬಂದಿದೆ.
ಕಲಬುರಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರು ಕ್ಷೇತ್ರ. ಕಳೆದ ಬಾರಿ 2019ರಲ್ಲಿ ಖರ್ಗೆ ಅವರನ್ನು ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ ಸೋಲಿಸಿದ್ದರು. ಈ ಮೂಲಕ ರಾಜಕೀಯ ಜೀವನದಲ್ಲಿ ಖರ್ಗೆ ಮೊದಲ ಸೋಲುಂಡಿದ್ದರು. ಈ ಬಾರಿ ಖರ್ಗೆ ಅವರು ತಮ್ಮ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರನ್ನು ಕಣಕ್ಕಿಳಿಸಿದ್ದಾರೆ. ಬಿಜೆಪಿಯಿಂದ ಉಮೇಶ್ ಜಾದವ್ ಮತ್ತೆ ಅಖಾಡದಲ್ಲಿರುವುದರಿಂದ ತುರುಸಿನ ಸ್ಪರ್ಧೆ ಏರ್ಪಟ್ಟಿದೆ. 2019ರಲ್ಲಿ ಬಿಜೆಪಿಯಲ್ಲಿದ್ದ ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ, ಬಾಬುರಾವ ಚಿಂಚನಸೂರು ಈಗ ಕಾಂಗ್ರೆಸ್ನಲ್ಲಿರುವುದರಿಂದ ಬಿಜೆಪಿ ಪಾಳೆಯಕ್ಕೆ ಹೊಡೆತ ಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ರಾಯಚೂರು: ಬಿಜೆಪಿ ಅಭ್ಯರ್ಥಿ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ಎರಡನೇ ಬಾರಿಗೆ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ನಿವೃತ್ತ ಐಎಎಸ್ ಅಧಿಕಾರಿ ಜಿ.ಕುಮಾರನಾಯಕ ಪ್ರತಿಸ್ಪರ್ಧಿಯಾಗಿದ್ದಾರೆ. ಮಾಜಿ ಸಂಸದ ಬಿ.ವಿ.ನಾಯಕ್ ಈ ಬಾರಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಟಿಕೆಟ್ ಪಡೆಯಲು ಸಾಕಷ್ಟು ಕಸರತ್ತು ನಡೆಸಿದ್ದರು. ಆದರೂ ಮತ್ತೊಮ್ಮೆ ರಾಜಾ ಅಮರೇಶ್ವರ ನಾಯಕ ಅವರಿಗೆ ಬಿಜೆಪಿ ಮಣೆ ಹಾಕಿದೆ. ಜಿ.ಕುಮಾರನಾಯಕ ಹೊರ ಜಿಲ್ಲೆಯವರಾಗಿದ್ದು, ಇದೇ ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಬೀದರ್: 1952ರಿಂದ ನಡೆದ ಚುನಾವಣೆಗಳಲ್ಲಿ 10ಕ್ಕೂ ಹೆಚ್ಚು ಬಾರಿ ಕಾಂಗ್ರೆಸ್, 7 ಬಾರಿ ಬಿಜೆಪಿ ಗೆಲುವು ಸಾಧಿಸಿದೆ. ಈ ಸಲ ಬಿಜೆಪಿ ಹಾಲಿ ಸಂಸದ ಮತ್ತು ಸಚಿವ ಭಗವಂತ ಖೂಬಾ ಮತ್ತೊಮ್ಮೆ ಅಖಾಡಕ್ಕಿಳಿದಿದ್ದಾರೆ. ಕಾಂಗ್ರೆಸ್ನಿಂದ ಸಚಿವ ಈಶ್ವರ್ ಖಂಡ್ರೆ ಪುತ್ರ ಸಾಗರ್ ಖಂಡ್ರೆ ಇದೇ ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. 2014, 2019ರಲ್ಲಿ ಸತತವಾಗಿ ಗೆದ್ದಿರುವ ಖೂಬಾ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದರೆ, ಕಾಂಗ್ರೆಸ್ನ ಯುವಕ ಅಭ್ಯರ್ಥಿ ತೀವ್ರ ಪೈಪೋಟಿ ನೀಡಿದ್ದಾರೆ.