ದಾವಣಗೆರೆ: ಪತಿ - ಪತ್ನಿ ನಡುವಿನ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತಿದೆ. ಆದರೆ, 7 ಜೋಡಿಗಳು ಚಿಕ್ಕಪುಟ್ಟ ವಿಚಾರಕ್ಕೆ ಜಗಳವಾಡಿ ವಿಚ್ಛೇದನಕ್ಕಾಗಿ ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲ್ಲು ಹತ್ತಿದ್ದರು. ಸದ್ಯ ಜಿಲ್ಲಾ ಕೌಟುಂಬಿಕ ನ್ಯಾಯಾಲಯ ಅವರಿಗೆ ವಿಚ್ಛೇದನ ಕೊಡಿಸದೇ ಮತ್ತೆ ಒಂದಾಗುವಂತೆ ಮಾಡಿದೆ.
ದಾವಣಗೆರೆ ಜಿಲ್ಲಾ ಮುಖ್ಯ ನ್ಯಾಯಾಧೀಶೆ ರಾಜೇಶ್ವರಿ ಎನ್ ಹೆಗಡೆ ಅವರ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ 7 ಜೋಡಿಗಳು ನ್ಯಾಯಧೀಶರ ಸಮ್ಮುಖದಲ್ಲಿ ಒಂದಾಗಿದ್ದಾರೆ. ಈ ಮೂಲಕ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ 7 ಜೋಡಿಗಳಿಗೆ ಕಾನೂನು ಸೇವಾ ಪ್ರಾಧಿಕಾರದಡಿ ರಾಜಿ ಮಾಡಿಸಿ ಹೊಸ ಜೀವನಕ್ಕೆ ದಾರಿ ಮಾಡಿಕೊಡಲಾಯಿತು. ಸಣ್ಣಪುಟ್ಟ ಕಾರಣಗಳಿಗೆ ಮನಸ್ತಾಪವಾಗಿ ಹಲವು ವರ್ಷಗಳಿಂದ ದೂರವಿದ್ದ ಸತಿ - ಪತಿಗಳು ವಿಚ್ಛೇದನ ಪಡೆಯದೇ ಮತ್ತೆ ಒಂದಾಗಿ ಜೀವನ ನಡೆಸಲು ಒಪ್ಪಿಕೊಂಡಿದ್ದಾರೆ. ಈ ಸುಸಂದರ್ಭಕ್ಕೆ ದಾವಣಗೆರೆ ಜಿಲ್ಲಾ ನ್ಯಾಯಾಧೀಶರು, ವಕೀಲರ ಸಂಘ, ಕಾನೂನು ಸೇವಾ ಪ್ರಾಧಿಕಾರ ಸಾಕ್ಷಿಯಾಗಿದೆ.
ಈ ವೇಳೆ, ಜಿಲ್ಲಾ ಮುಖ್ಯ ನ್ಯಾಯಾಧೀಶರಾದ ರಾಜೇಶ್ವರಿ ಎನ್ ಹೆಗಡೆ ಅವರು ಮಾತನಾಡಿ, ಕೌಟುಂಬಿಕ ನ್ಯಾಯಾಲಯ ಲೋಕ್ ಅದಾಲತ್ ಮೂಲಕ 7 ವಿಚ್ಛೇದನ ಪ್ರಕರಣಗಳನ್ನು ಇತ್ಯರ್ಥಪಡಿಸಿದೆ. ಅಂದರೆ 7 ದಂಪತಿಗಳು ಮತ್ತೆ ಒಂದಾಗಿದ್ದಾರೆ. ಚಿಕ್ಕ ಪುಟ್ಟ ವಿಚಾರಕ್ಕೆ ಜಗಳವಾಡಿ ದಂಪತಿ ದೂರವಾಗಿದ್ದರು. ಅಂತಹವರಿಗೆ ಮಕ್ಕಳ ಭವಿಷ್ಯದ ದೃಷ್ಟಿಯಿಂದ ವಿಚ್ಛೇದನ ಕೊಡಿಸದೇ ರಾಜಿ ಮಾಡಿಸಿ ಒಂದಾಗುವಂತೆ ಮಾಡಿದ್ದೇವೆ. ಸಹಬಾಳ್ವೆ, ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವುದೇ ಲೋಕ್ ಅದಾಲತ್ನ ಗುರಿಯಾಗಿದೆ. ಈ ವೇದಿಕೆಯ ಮೂಲಕ ಕಡಿಮೆ ಖರ್ಚಿನಲ್ಲಿ ಶೀಘ್ರ ಪ್ರಕರಣ ಇತ್ಯರ್ಥಪಡಿಸಲಾಗುತ್ತದೆ ಎಂದರು.
ಕೌಟುಂಬಿಕ ನ್ಯಾಯಾಲಯದಲ್ಲಿ ಇಂದು 7 ಪ್ರಕರಣಗಳನ್ನು ರಾಜಿ ಮಾಡಿಸಲಾಗಿದೆ. 4 ಸಾವಿರ ಪ್ರಕರಣಗಳನ್ನು ಈಗಾಗಲೇ ಇತ್ಯರ್ಥಪಡಿಸಲಾಗಿದೆ. ಇನ್ನು 1,500 ಪ್ರಕರಣಗಳನ್ನು ಇತ್ಯರ್ಥಪಡಿಸುವ ಗುರಿ ಇದೆ. ಒಟ್ಟು 5 ಸಾವಿರ ಪೆಂಡಿಂಗ್ ಕೇಸ್ಗಳನ್ನು ಇತ್ಯರ್ಥಪಡಿಸಬಹುದು ಎಂಬ ನಿರೀಕ್ಷೆ ಇದೆ. ಇದರಿಂದ ಸಾರ್ವಜನಿಕರಿಗೆ ಅನುಕೂಲ ಆಗಿದೆ ಎಂದರು.
ಈ ವೇಳೆ, ಒಂದಾದವರಲ್ಲಿ ಒಬ್ಬರಾದ ಪರಶುರಾಮ್ ಮಾತನಾಡಿ, ಇವತ್ತು ಕೌಟುಂಬಿಕ ನ್ಯಾಯಾಲಯದಿಂದ ನಮಗೆ ನ್ಯಾಯ ಸಿಕ್ಕಿದೆ. ದಂಪತಿಗಳ ನಡುವೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೆ ಅದನ್ನು ಮನೆಯಲ್ಲಿಯೇ ಕುಳಿತು ಬಗೆಹರಿಸಿಕೊಳ್ಳಬೇಕು. ಸಿಟ್ಟಿನಿಂದ ನ್ಯಾಯಾಲಯದ ಮೇಟ್ಟಿಲೇರಿದರೆ ನ್ಯಾಯಾಧೀಶರು ಪೋಷಕರ ಸ್ಥಾನದಲ್ಲಿ ನಿಂತು ಮತ್ತೆ ಒಂದಾಗಲು ನಮಗೆ ಅವಕಾಶ ಕೊಡುತ್ತಾರೆ. ಆ ಕಾಲಾವಕಾಶವನ್ನು ನಾವು ದುರುಪಯೋಗ ಪಡಿಸಿಕೊಳ್ಳದೇ ಕೂತು ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ನಾನು ಮತ್ತು ನನ್ನ ಪತ್ನಿ ಕಾರಣಾಂತರಗಳಿಂದ 4 ವರ್ಷ ದೂರ ಇದ್ದೆವು. ನ್ಯಾಯಾಧೀಶರು, ವಕೀಲರು ನಮಗೆ ಸರಿಯಾದ ಮಾರ್ಗದರ್ಶನ ಕೊಟ್ಟಿದ್ದಾರೆ. ಮಕ್ಕಳ ಹಿತದೃಷ್ಟಿಯಿಂದ ಮತ್ತೆ ನಾವು ಒಂದಾಗಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: ದಾವಣಗೆರೆ: ದರೋಡೆ ಮಾಡಲು ರಸ್ತೆಯಲ್ಲಿ ನಿಂತಿದ್ದ ಐವರು ಅಂತರ್ ರಾಜ್ಯ ಕಳ್ಳರ ಬಂಧನ