ಬೆಂಗಳೂರು : ಅಬಕಾರಿ ಇಲಾಖೆಯಲ್ಲಿನ ಲಂಚದ ಹಗರಣ ಆರೋಪದ ಮಧ್ಯೆ ಕರ್ನಾಟಕ ರಾಜ್ಯ ಲಿಕ್ಕರ್ ಮರ್ಚೆಂಟ್ಸ್ ಡೆವಲಪ್ಮೆಂಟ್ ಕೋ-ಆಪರೇಟಿವ್ ಸೊಸೈಟಿ ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದೆ.
ಕಾವೇರಿ ನಿವಾಸದಲ್ಲಿ ಸಿಎಂ ಅವರನ್ನು ಭೇಟಿಯಾದ ಒಕ್ಕೂಟ, ಮದ್ಯ ಮಾರಾಟಗಾರರಿಗೆ ಹಾಲಿ ಇರುವಂತಹ ಶೇ. 10 ಲಾಭಾಂಶದಲ್ಲಿ ಖರ್ಚು ವೆಚ್ಚವನ್ನೆಲ್ಲ ಕಳೆದರೆ ವ್ಯವಹಾರ ನಿರ್ವಹಿಸುವುದು ತುಂಬಾ ಕಷ್ಟಕರವಾಗಿದೆ. ಸನ್ನದು ಶುಲ್ಕ, ವಿದ್ಯುತ್ಚ್ಛಕ್ತಿ ಬಿಲ್ಗಳು, ಅಂಗಡಿಯಲ್ಲಿ ಕೆಲಸ ನಿರ್ವಹಿಸುವ ನೌಕರರುಗಳ ಸಂಬಳ, ಅಂಗಡಿ ಬಾಡಿಗೆ ಮತ್ತು ಸಾಗಾಣಿಕಾ ವೆಚ್ಚ, ಇವೆಲ್ಲವನ್ನೂ ಕಳೆದರೆ ಸಿಗುವಂತಹ ಲಾಭಾಂಶ ಕನಿಷ್ಠ ಶೇ. 4 ರಿಂದ 5 ಆಗಿರುತ್ತದೆ. ಹಾಗಾಗಿ, ಹಾಲಿ ಇರುವಂತಹ ಶೇ.10 ರ ಬದಲಾಗಿ ಲಾಭಾಂಶವನ್ನು ಶೇ.15ಕ್ಕೆ ನಿಗದಿಪಡಿಸುವಂತೆ ಮನವಿ ಮಾಡಿದ್ದಾರೆ.
ಒಂದು ಪರವಾನಗಿಗೆ ಮೂರು ಮೊಕದ್ದಮೆಗಳು ದಾಖಲಾದರೆ ಅಂತಹ ಸಂದರ್ಭಗಳಲ್ಲಿ ಸನ್ನದುಗಳನ್ನು ಅಮಾನತ್ತು ಪಡಿಸುವುದರ ಬಗೆಗಿನ ಹಾಲಿ ಸುತ್ತೋಲೆಯನ್ನು ಮಾರ್ಪಡಿಸಿ, ಪ್ರಕರಣದ ಸ್ವರೂಪ ಮತ್ತು ನ್ಯೂನ್ಯತೆಗಳನ್ನು ಪರಿಶೀಲಿಸಿ, ಅಬಕಾರಿ ನಿಯಮಗಳಡಿಯಲ್ಲಿ ಜಿಲ್ಲೆಯ ಅಬಕಾರಿ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸುತ್ತೋಲೆ ಹೊರಡಿಸಬೇಕು ಎಂದು ಕೋರಿದ್ದಾರೆ.
ರಾಜ್ಯದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಕಟ್ಟುನಿಟ್ಟಿನ ಅಬಕಾರಿ ನಿಯಮಗಳು, ಇತರ ರಾಜ್ಯದಲ್ಲಿನ ಅಬಕಾರಿ ನೀತಿ ನಿಯಮಗಳಲ್ಲಿಯೂ ಸಹ ಕರ್ನಾಟಕ ರಾಜ್ಯದ ಮಾದರಿಯನ್ನೇ ಅನುಸರಿಸುವ ಬಗ್ಗೆ ಹೊರ ರಾಜ್ಯದ ಅಬಕಾರಿ ಅಧಿಕಾರಿಗಳು ಸಾಕಷ್ಟು ಬಾರಿ ನಮ್ಮ ರಾಜ್ಯ ಅಬಕಾರಿ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿವೆ. ಈ ಬಗ್ಗೆ ಇಲಾಖೆಯಿಂದ ಮಾಹಿತಿಯನ್ನು ಪಡೆಯಬಹುದಾಗಿರುತ್ತದೆ. ಹೀಗಾಗಿ, ಚಾಲ್ತಿಯಲ್ಲಿರುವ ಅಬಕಾರಿ ನಿಯಮಗಳು ಪ್ರಶಸ್ತವಾಗಿದ್ದು, ಮುಂದುವರೆಸಬೇಕು ಎಂದು ಕೋರಿದ್ದಾರೆ.
ಈ ಹಿಂದೆ ಸಿ.ಎಲ್ 7 ಸನ್ನದು ಮಂಜೂರಾತಿಗೆ ಇದ್ದಂತಹ ನಿಯಮಗಳನ್ನು ಪರಿಷ್ಕರಿಸಿ, ನಗರ ಪ್ರದೇಶದ 15 ಜೋಡಿ ಕೊಠಡಿಗಳು, ಇತರ ಪ್ರದೇಶಗಳಿಗೆ 10 ಜೋಡಿ ಕೊಠಡಿಗಳು, ಪ್ರತ್ಯೇಕ ಶೌಚಾಲಯಗಳೊಂದಿಗೆ ಅಗತ್ಯ ಮೂಲ ಸೌಲಭ್ಯ ಎಂಬ ನಿಯಮ ಸಮಂಜಸವಾಗಿದೆ. ಅಬಕಾರಿ ಇಲಾಖೆಯಲ್ಲಿನ ಸನ್ನದುದಾರುಗಳಿಗೆ ಅನಾವಶ್ಯಕವಾಗಿ ತೊಂದರೆಗಳನ್ನು ನೀಡುವ ಅಧಿಕಾರಿ/ ನೌಕರರುಗಳ ವಿರುದ್ಧ ಸನ್ನದುದಾರರುಗಳು ಇಲಾಖೆಗೆ ದೂರು ಸಲ್ಲಿಸಿದಲ್ಲಿ ಕೂಡಲೇ ಕಾನೂನು ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಆದೇಶ ನೀಡುವಂತೆ ಒತ್ತಾಯಿಸಿದರು.
ಇದನ್ನೂ ಓದಿ : ಭ್ರಷ್ಟಾಚಾರ ಆರೋಪ; ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಮದ್ಯ ಮಾರಾಟಗಾರರ ಸಂಘದ ಸಭೆ