ರಾಯಚೂರು: ದರೋಡೆಕೋರರನ್ನು ಬಂಧಿಸಲು ಮುಂದಾದಾಗ ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಲಿಂಗಸುಗೂರು ಪಟ್ಟಣದಲ್ಲಿ ನಿನ್ನೆ ತಡರಾತ್ರಿ ಘಟನೆ ನಡೆದಿದ್ದು, ಘಟನೆಯಲ್ಲಿ ಮೂವರು ಪೊಲೀಸರು, ಇಬ್ಬರು ಸಾರ್ವಜನಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಗಾಯಾಳುಗಳನ್ನು ಪೊಲೀಸ್ ಕಾನ್ಸ್ಟೇಬಲ್ಗಳಾದ ರಂಗನಾಥ, ಸಿದ್ದಪ್ಪ, ಶರಣಬಸವ ಹಾಗೂ ಸ್ಥಳೀಯರಾದ ವೀರೇಶ, ನಾರಾಯಣ ಎಂದು ಗುರುತಿಸಲಾಗಿದೆ.
ಆರೋಪಿಗಳನ್ನು ಯಾದಗಿರಿ ಜಿಲ್ಲೆಯ ಹೊಸಳ್ಳಿ ಗ್ರಾಮದ ಗುರುರಾಜ ಚವ್ಹಾಣ, ಕನ್ಯಾಕೊಳ್ಳುರು ಗ್ರಾಮದವ ಕುಮಾರ ಚವ್ಹಾಣ, ತಿಪ್ಪಾಣ ರಾಠೋಡ್, ಮಾನಪ್ಪ ಅಲಿಯಾಸ್ ಮಾನೆ ರಾಠೋಡ್, ಜಿನಕೇರಿ ತಂಡದ ಸುರೇಶ ರಾಠೋಡ್ ಎಂದು ಗುರುತಿಸಲಾಗಿದೆ.
ಎಫ್ಐಆರ್ ಪ್ರಕಾರ : ರಾತ್ರಿಯ ಹೊತ್ತು ಪೆಟ್ರೋಲಿಂಗ್ ಕರ್ತವ್ಯದಲ್ಲಿ ಪೊಲೀಸರಿಗೆ ದರೋಡೆಕೋರರು ತಿಥಿಂಣಿ ಬ್ರಿಡ್ಜ್ ಕಡೆಯಿಂದ ಲಿಂಗಸುಗೂರು ಕಡೆಗೆ ಸ್ಕಾರ್ಪಿಯೋ ಮೂಲಕ ಬರುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ಮಾಹಿತಿ ಮೇರೆಗೆ ಪಟ್ಟಣದ ಬಸವಸಾಗರ ಕ್ರಾಸ್ ಬಳಿ ಮತ್ತು ಮಾತಾ ಮಾಣಿಕೇಶ್ವರಿ ಗುಡಿ ಹತ್ತಿರ ಪೊಲೀಸರು ಬ್ಯಾರಿಕೇಡ್ ಹಾಕಿ ಕಾಯುತ್ತಿದ್ದರು.
ಮಾತಾ ಮಾಣಿಕೇಶ್ವರಿ ದೇವಾಲಯದ ಹತ್ತಿರ ಪೊಲೀಸರನ್ನು ನೋಡಿದ ಆರೋಪಿತರು ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿ ಮೇಲೆ ಕಾರ್ ಹಾಯಿಸಲು ಪ್ರಯತ್ನಿಸಿದ್ದಾರೆ. ಆಗ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿ ಬಚಾವ್ ಆಗಿದ್ದು, ಮುಂದೆ ಬಸವಸಾಗರ ಕ್ರಾಸ್ ಬಳಿ ನಿಂತಿದ್ದ ತಮ್ಮ ಸಿಬ್ಬಂದಿಗೆ ಮಾಹಿತಿ ರವಾನಿಸಿದ್ದಾರೆ. ಮಾಹಿತಿ ಮೇರೆಗೆ ಪೊಲೀಸರು ಆರೋಪಿಗಳನ್ನು ಹಿಡಿಯಲು ಮುಂದಾದಾಗ, ಆರೋಪಿತರು ಇದನ್ನ ಕಂಡು ವೇಗವಾಗಿ ರಿವರ್ಸ್ ತೆಗೆದುಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸ್ ವಾಹನ ಡಿಕ್ಕಿ ಹೊಡೆದಿದ್ದು, ವಾಹನ ಜಖಂಗೊಳಿಸಿದ್ದಾರೆ. ಆಗ ಆರೋಪಿಗಳ ಟೈರ್ ಬ್ಲಾಸ್ಟ್ ಆಗಿ ನಿಂತುಕೊಂಡಿದೆ.
ಪೊಲೀಸರು ಆರೋಪಿಗಳನ್ನು ಸೆರೆ ಹಿಡಿಯಲು ಮುಂದಾದಾಗ ಖಾರಪುಡಿ ಎರಚಿ, ಕಬ್ಬಿಣದ ರಾಡ್, ಮಚ್ಚುಗಳು, ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ಪೊಲೀಸ್ ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದರೆ. ಇದನ್ನು ಕಂಡ ಜನ ಪೊಲೀಸರ ಸಹಾಯಕ್ಕೆ ಮುಂದಾಗಿದ್ದಾರೆ. ಆಗ ಆರೋಪಿಗಳು ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಮುಂದಾಗಿದ್ದಾರೆ. ಆದರೆ ಆರೋಪಿಗಳ ವಾಹನ ಚರಂಡಿಯಲ್ಲಿ ಸಿಲುಕಿ ಬಿದ್ದಿರುವುವದರಿಂದ ಆರೋಪಿತರಲ್ಲಿ ಇಬ್ಬರು ತಪ್ಪಿಸಿಕೊಂಡು ಪರಾರಿಯಾದ್ರೆ, ಮೂವರು ಆರೋಪಿಗಳು ಪೊಲೀಸರಿಗೆ ಸೆರೆ ಸಿಕ್ಕಿ ಬಿದ್ದಿದ್ದಾರೆ. ಆರೋಪಿಗಳು ಬಿದ್ದು ಗಾಯಗೊಂಡಿರುವುದರಿಂದ ಲಿಂಗಸುಗೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಸದ್ಯ ಲಿಂಗಸುಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.