ಚನ್ನರಾಯಪಟ್ಟಣ (ಹಾಸನ): ಮಾಸ್ತಿಗೌಡ ಕೊಂದಿದ್ದ ರೌಡಿಶೀಟರ್ ಯಾಚೇನಹಳ್ಳಿ ಚೇತು ಸೇರಿ 9 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಚನ್ನರಾಯಪಟ್ಟಣದ 4ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ. ಮತ್ತಿಬ್ಬರು ಅಪರಾಧಿಗಳಿಗೆ ತಲಾ 2.5 ವರ್ಷ ಶಿಕ್ಷೆ ವಿಧಿಸಿದೆ. ಯಾಚೇನಹಳ್ಳಿ ಚೇತು, ಮಂಡ್ಯ ಶಿವಕುಮಾರ್, ಹುಲಿವಾಲ ಚೇತು ಅಲಿಯಾಸ್ ಚೇತನ್, ಹಾಸನದ ಆಲ್ದಳ್ಳಿ ರಾಕೇಶ್, ಸುಮಂತ್, ಮಲ್ಲೇನಹಳ್ಳಿ ಭರತ್, ಮಂಚಿಗನಹಳ್ಳಿ ಹರೀಶ್, ಮೊಟ್ಟೆ ಅಲಿಯಾಸ್ ರಾಹುಲ್ ಮತ್ತು ಸ್ಥಳೀಯ ನಿವಾಸಿ ರಾಘು ಅಲಿಯಾಸ್ ರಾಘವೇಂದ್ರ ಎಂಬುವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಇನ್ನು, 10ನೇ ಆರೋಪಿ ಮಂಡ್ಯದ ಸಂದೇಶ ಗೌಡ ಹಾಗೂ 11ನೇ ಆರೋಪಿ ಬೆಂಗಳೂರಿನ ಗೋಪಿ ತಲಾ ಎರಡೂವರೆ ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದಾರೆ. ಇವರಲ್ಲಿ ಹರೀಶ್ ಮತ್ತು ಭರತ್ ಕೊಲೆಗೆ ಸಹಕಾರ ನೀಡಿದ್ದರೆ, ರಾಘು ಹಣಕಾಸು ನೆರವು ನೀಡಿದ್ದ. ಎಲ್ಲಾ ಆರೋಪಿಗಳಿಗೆ ತಲಾ 25 ಸಾವಿರ ರೂ. ದಂಡ ವಿಧಿಸಲಾಗಿದೆ. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಶ್ರೀನಿವಾಸ್ ವಾದ ಮಂಡಿಸಿದ್ದರು.
ಘಟನೆಯ ಹಿನ್ನೆಲೆ ಏನು?: 2023ರ ಜು.4 ರಂದು ನಡು ರಸ್ತೆಯಲ್ಲೇ ಕಿಡಿಗೇಡಿಗಳ ತಂಡ ಮಾಸ್ತಿಗೌಡನನ್ನ ಅಟ್ಟಾಡಿಸಿ ಕೊಲೆ ಮಾಡಿತ್ತು. ಹಳೇ ವೈಷಮ್ಯ ಹಿನ್ನೆಲೆಯಲ್ಲಿ ಗಡಿಪಾರಾಗಿ ಕಲಬುರಗಿ ಜೈಲಿನಲ್ಲಿರುವ ಯಾಚೇನಹಳ್ಳಿ ಚೇತು ಅಲ್ಲಿದ್ದುಕೊಂಡೇ ಸ್ಕೆಚ್ ಹಾಕಿ ತನ್ನ ಸಹಚರರ ಮೂಲಕ ಮಾಸ್ತಿಗೌಡನನ್ನು ಕೊಲೆ ಮಾಡಿಸಿದ್ದ. ಮನೆ ಕಟ್ಟಲು ಅಂದು ಟೈಲ್ಸ್ ಖರೀದಿ ಮಾಡಲು ಬಂದಿದ್ದ ಮಾಸ್ತಿಯನ್ನು ಹೊಂಚು ಹಾಕಿ ಕಾದು ಕುಳಿತಿದ್ದ ಹುಲಿವಾಲ ಚೇತು, ಮಂಡ್ಯ ಶಿವು, ರಾಕಿ ಮೊದಲಾದವರು ಅಟ್ಟಾಡಿಸಿ ಕೊಚ್ಚಿ ಕೊಲೆಗೈದಿದ್ದರು. ಬಳಿಕ ಇನ್ನೋವಾ ಕಾರಿನಲ್ಲಿ ಪರಾರಿಯಾಗಿದ್ದರು.
ಅಂದಿನ ಎಸ್ಪಿ ಹರಿರಾಮ್ ಶಂಕರ್ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ ಮಾಡಿದ್ದರು. ಚನ್ನರಾಯಪಟ್ಟಣ ಟೌನ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕೆ.ಎಂ. ವಸಂತ್ ಪ್ರಕರಣದ ತನಿಖಾಧಿಕಾರಿಯಾಗಿದ್ದರು. ಇವರು ಆರೋಪಿಗಳನ್ನು ಬಂಧಿಸಿ, ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಅಂದಿನ ಎಸ್ಪಿ ಹರಿರಾಮ್ ಶಂಕರ್, ಈಗಿನ ಎಸ್ಪಿ ಮೊಹಮ್ಮದ್ ಸುಜೀತಾ, ಎಎಸ್ಪಿ ತಮ್ಮಯ್ಯ, ಡಿವೈಎಸ್ಪಿ ಪಿ.ರವಿಪ್ರಸಾದ್, ತನಿಖೆ ನಡೆಸಿದ ಪಿಐ ಕೆ.ಎಂ.ವಸಂತ್, ಹಾಲಿ ಇನ್ಸ್ಪೆಕ್ಟರ್ ರಘುಪತಿ ಅವರ ಪರಿಶ್ರಮದಿಂದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಿದೆ. ಕೊಲೆ ನಡೆದ 10 ತಿಂಗಳಲ್ಲೇ ವಿಚಾರಣೆ ಮುಗಿಸಿ ಅಪರಾಧಿಗಳಿಗೆ ಶಿಕ್ಷೆ ಪ್ರಕಟವಾಗಿದ್ದು, ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.
ಇದನ್ನೂ ಓದಿ: ಮಂಗಳೂರು: ಮತೀಯ ದ್ವೇಷದಿಂದ ವ್ಯಕ್ತಿ ಕೊಲೆ; ನಾಲ್ವರಿಗೆ ಜೀವಾವಧಿ ಶಿಕ್ಷೆ - Life Imprisonment