ಬೆಂಗಳೂರು: ನಿಗದಿಯಾಗಿರುವ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹಾಗೂ ಕರ್ಮಷಿಯಲ್ ಟ್ಯಾಕ್ಸ್ ಇನ್ಸ್ಪೆಕ್ಟರ್ ಪರೀಕ್ಷೆಯನ್ನು ಮುಂದೂಡಬೇಕು ಎಂದು ಕೋರಿ ಕರ್ನಾಟಕ ಲೋಕಸೇವಾ ಆಯೋಗ ಹಾಗೂ ಗೃಹ ಸಚಿವರಿಗೆ ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘಟನೆ ಪತ್ರ ಬರೆದು ಮನವಿ ಸಲ್ಲಿಸಿದೆ.
ಪಿಎಸ್ಐ ಮತ್ತು ಸಿಟಿಐ ಪರೀಕ್ಷೆ ಪತ್ರಿಕೆ ಲೀಕ್ ಮಾಡಿರುವ ಆರೋಪ ಕೇಳಿಬಂದಿದ್ದು, ಇಂಟೆಲಿಜೆನ್ಸ್ ವಿಭಾಗದ ಸಬ್ ಇನ್ಸ್ಪೆಕ್ಟರ್ ಒಬ್ಬರು ಇದನ್ನು ಮಾಡಿದ್ದಾರೆ ಎಂದು ಆರೋಪಿಸಿ ನಿನ್ನೆ ಚಂದ್ರಾ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದರೂ ಎಫ್ಐಆರ್ ದಾಖಲಿಸಿಕೊಂಡಿಲ್ಲ. ಹೀಗಾಗಿ ಪರೀಕ್ಷೆ ಮುಂದೂಡಬೇಕು ಎಂದು ಕೋರಿ ಸಂಘಟನೆಯ ಅಧ್ಯಕ್ಷ ಕಾಂತಕುಮಾರ್ ಪತ್ರ ಬರೆದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕಾಂತಕುಮಾರ್, " ಪಿಎಸ್ಐ, ಸಿಟಿಐ ಪ್ರಶ್ನೆಪತ್ರಿಕೆಗಳನ್ನು ಸೋರಿಕೆ ಮಾಡಿ ಲಕ್ಷಾಂತರ ರೂಪಾಯಿ ಮಾರಾಟ ಮಾಡಿ ಅಕ್ರಮವೆಸಗಿದ್ದಾರೆ. ಈಗಾಗಲೇ ಅವರು ಎಸಗಿರುವ ಅಕ್ರಮಗಳ ದಾಖಲಾತಿಗಳು ಹೊರಗಡೆ ಬಂದಿವೆ. ಈ ಮೂಲಕ ಹಗಲು-ರಾತ್ರಿ ಎನ್ನದೇ ಓದಿದ ಲಕ್ಷಾಂತರ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಈ ಬಗ್ಗೆ ಚಂದ್ರಾ ಲೇಔಟ್ ಪೊಲೀಸ್ ಠಾಣೆಗೆ ದೂರು ಕೊಟ್ಟರೆ, ಇದುವರೆಗೂ ಎಫ್‌ಐಆರ್ ದಾಖಲಿಸಿಲ್ಲ. ಬದಲಾಗಿ ಚಂದ್ರಾ ಲೇಔಟ್ ಪೊಲೀಸರಿಗೆ ಕಳ್ಳರನ್ನು ಹಿಡಿಯಿರಿ ಎಂದು ದೂರು ಕೊಟ್ಟರೆ, ನಮ್ಮ ಮನೆಗೆ ಐದಾರು ಮಂದಿ ಪೊಲೀಸರು ಬಂದಿದ್ದಾರೆ. ಈ ಬಗ್ಗೆ ಸಂಪೂರ್ಣ ತನಿಖೆಯಾಗಿ ಸತ್ಯಾಂಶ ಹೊರಬರಬೇಕು" ಎಂದು ಆಗ್ರಹಿಸಿದರು.
"ಪವನ್ ಎಂಬ ವ್ಯಕ್ತಿಗೆ 50 ಲಕ್ಷ ಕೊಟ್ಟಿದ್ದಾರೆ. ಬೇರೆ ಯಾರಿಗೆ ಕೊಟ್ಟಿದ್ದಾರೋ ಗೊತ್ತಿಲ್ಲ. ಜನವರಿ 23ರಂದು ಪರೀಕ್ಷೆ ನಡೆಯುತ್ತಿದೆ. ಕೆಪಿಎಸ್ಸಿಗೆ ದೂರು ನೀಡಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಪರೀಕ್ಷೆ ಮುಂದೂಡುವಂತೆ ಮನವಿ ಮಾಡಿದ್ದೇವೆ. ಸಿಬಿಆರ್‌ಟಿ (ಕಂಪ್ಯೂಟರ್ ಬೇಸ್ಡ್ ರಿಕ್ರ್ಯೂಟ್‌ಮೆಂಟ್ ಪರೀಕ್ಷೆ) ಪ್ರಕಾರ ಪರೀಕ್ಷೆ ಆಗಬೇಕು" ಎಂದರು.
ಆರೋಪಿತ ಪಿಎಸ್ಐ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಪರಮೇಶ್ವರ್ ಅವರು, "ಆರೋಪ ಕೇಳಿ ಬಂದ ಹಿನ್ನೆಲೆ ಸಿಸಿಬಿಯವರು ವಿಚಾರಣೆಗೆ ಒಳಪಡಿಸಿದ್ದಾರೆ. ಯಾವುದೇ ರೀತಿಯ ಅಕ್ರಮ ನಡೆದಿಲ್ಲ. ಅಕ್ರಮದ ಬಗ್ಗೆ ಮಾಹಿತಿ ಸಂಗ್ರಹಿಸಲು ನಕಲಿ ಕರೆ ಮಾಡಿರುವುದಾಗಿ ಆರೋಪಿತ ಹೇಳಿಕೆ ನೀಡಿದ್ದಾನೆ. ಸತ್ಯಾಸತ್ಯತೆಯ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಸುರಕ್ಷಿತವಾಗಿ ಪರೀಕ್ಷೆ ನಡೆಯಲಿದ್ದು, ಅಭ್ಯರ್ಥಿಗಳು ಆತಂಕಪಡುವುದು ಬೇಡ" ಎಂದರು.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ: ಪೊಲೀಸ್ ಆಯುಕ್ತ ದಯಾನಂದ್