ಹುಬ್ಬಳ್ಳಿ: ಜಾತಿ ಗಣತಿ ಬಗ್ಗೆ ಸರ್ಕಾರಕ್ಕೆ ಸ್ಪಷ್ಟತೆ ಇರಬೇಕು. ರಾಜ್ಯದ ಆರ್ಥಿಕ ವ್ಯವಸ್ಥೆಯನ್ನು ಅರಿಯುವುದಕ್ಕಾಗಿ ಇಂಥ ಗಣತಿ ಮಾಡಲಾಗುತ್ತಿದೆಯೇ, ಯಾವ ಜಾತಿಯವರು ಎಷ್ಟಿದ್ದಾರೆ ಎಂಬುದನ್ನು ತಿಳಿಯಲೋ ಅಥವಾ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಮಾಡುತ್ತಿದ್ದಾರೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು. ಜಾತಿ ಜನಗಣತಿಯನ್ನು ಕೂಡಲೇ ರಾಜ್ಯ ಸರ್ಕಾರ ಕೈಬಿಡಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಗುರುರಾಜ್ ಹುಣಸಿಮರದ ಆಗ್ರಹಿಸಿದ್ದಾರೆ.
ನಗರದಲ್ಲಿಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದು ಜಾತಿ ಜನಗಣತಿ ಆಗಿದ್ದರೆ, 1,361 ಜಾತಿಗಳ ಮನೆ ಮನೆಗೆ ಹೋಗಿ ಮಾಹಿತಿ ಸಂಗ್ರಹಿಸಿರುವುದಾಗಿ ವರದಿ ಕೊಟ್ಟಿದ್ದಾರೆ. ಆ ಜಾತಿಗಳು ಯಾವುವು ಎಂಬ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಬೇಕು ಎಂದರು.
ಚಿನ್ನಪ್ಪ ರೆಡ್ಡಿ ವರದಿಯಲ್ಲಿ 80 ಲಕ್ಷ ವೀರಶೈವ ಲಿಂಗಾಯತರು: ರಾಜ್ಯದಲ್ಲಿ ವೀರಶೈವ ಲಿಂಗಾಯತರು 65-70 ಲಕ್ಷ ಇದ್ದಾರೆ ಎಂಬ ವಿಚಾರ ವರದಿ ಬರುವ ಮುನ್ನ ಸೋರಿಕೆಯಾಗಿದೆ. ಚಿನ್ನಪ್ಪ ರೆಡ್ಡಿ ವರದಿಯಲ್ಲಿಯೇ 80 ಲಕ್ಷ ಜನ ವೀರಶೈವ ಲಿಂಗಾಯತರಿದ್ದರು. ಆದರೆ ಜನಸಂಖ್ಯೆ ಹೆಚ್ಚಳ ಇದ್ದಾಗಲೂ ಜಾತಿಗಣತಿಯಲ್ಲಿ ಕಡಿಮೆ ಆಗಲು ಹೇಗೆ ಸಾಧ್ಯ ಎಂದರು.
ಲಿಂಗಾಯತ ಸಮುದಾಯದ ಹಲವು ಪಂಗಡಗಳನ್ನು ಹಿಂದುಳಿದ ಪಟ್ಟಿಗೆ ತೆಗೆದುಕೊಳ್ಳಲಾಗಿದೆ. ಈ ಮೂಲಕ ರಾಜ್ಯದಲ್ಲಿ ವೀರಶೈವ ಲಿಂಗಾಯತರೇ ಇಲ್ಲ ಎಂಬುದನ್ನು ಬಿಂಬಿಸಲು ಯತ್ನಿಸಲಾಗುತ್ತದೆ. ಈಗಾಗಲೇ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಹೀಗಿದ್ದರೂ ಜಾತಿ ಜನಗಣತಿ ಮಾಡಲು ಸರ್ಕಾರ ನಿರ್ಧಾರ ಮಾಡಿರುವುದು ಸರಿಯಲ್ಲ ಎಂದು ಹೇಳಿದರು.
ಮರುಪರಿಶೀಲನೆಗೆ ಆಗ್ರಹ: ಕಾಂಗ್ರೆಸ್ ನೇತೃತ್ವದ ಸರ್ಕಾರವು ಲೋಕಸಭೆ ಚುನಾವಣೆ ಸನಿಹದಲ್ಲಿರುವಾಗಲೇ ವರದಿ ಸ್ವೀಕರಿಸಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಈ ಬೆನ್ನಲ್ಲೇ ಸಿದ್ದರಾಮಯ್ಯ ನೇತೃತ್ವದ ಸಂಪುಟದ ಕೆಲವು ಸಚಿವರು ಹಾಗೂ ಕಾಂಗ್ರೆಸ್ ಶಾಸಕರು ವರದಿ ಬಗ್ಗೆ ತಕರಾರು ತೆಗೆದಿದ್ದಾರೆ. ಸಮೀಕ್ಷೆ ವೈಜ್ಞಾನಿಕವೇ ಎಂದು ಬಿಜೆಪಿ ಪ್ರಶ್ನಿಸಿದೆ. ಸರ್ಕಾರ ಕೂಡಲೇ ಮರು ಪರಿಶೀಲನೆ ನಡೆಸಬೇಕು. ಇಲ್ಲವಾದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ಅವರು ನೀಡಿದರು.
ಇದನ್ನೂಓದಿ: ಜಾತಿ ಗಣತಿ ವರದಿಯಲ್ಲಿ ಏನಿದೆ ಎಂಬುದು ಗೊತ್ತಿಲ್ಲ, ಸಂಪುಟ ಸಭೆ ನಿರ್ಧಾರ ತೆಗೆದುಕೊಳ್ಳುತ್ತದೆ: ಗೃಹ ಸಚಿವ