ಬೆಂಗಳೂರು: ಸಿದ್ದರಾಮಯ್ಯನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಪಾರದರ್ಶಕ ತನಿಖೆಗೆ ಅವಕಾಶ ಕೊಡಲಿ ಎಂದು ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಆಗ್ರಹಿಸಿದ್ದಾರೆ. ಇಂದು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಬಿಜೆಪಿ-ಜೆಡಿಎಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಅಧಿಕಾರದ ದಾಹ, ಕುರ್ಚಿ ಆಸೆ ಬಿಡುತ್ತಿಲ್ಲ ಎಂದರು.
ರಾಜ್ಯಪಾಲರ ಮೇಲೆ ಗೂಬೆ ಕೂರಿಸಬೇಡಿ. ರಾಜ್ಯಪಾಲರಿಗೆ ದಾಖಲೆ ಸಿಕ್ಕಿದರೆ ನೋಟಿಸ್ ಕೂಡ ಕೊಡುವ ಅಗತ್ಯವಿಲ್ಲ. ತಕ್ಷಣ ಪ್ರಾಸಿಕ್ಯೂಷನ್ಗೆ ಅನುಮತಿ ಕೊಡಬಹುದು. ಆದರೂ ರಾಜ್ಯಪಾಲರು ಸಿದ್ದರಾಮಯ್ಯರಿಗೆ ಅವಕಾಶ ನೀಡಿದ್ರು. ಆದರೆ, ಸರ್ಕಾರ ಕ್ಯಾಬಿನೆಟ್ನಲ್ಲಿ ಖಂಡನಾನಿರ್ಣಯ ಮಾಡಿದ್ರು. ರಾಜ್ಯಪಾಲರು ಅತ್ಯಂತ ಕಾನೂನಾತ್ಮಕವಾಗಿ ನಡೆದುಕೊಂಡಿದ್ದಾರೆ. ಸಿಎಂ ತನ್ನ ಕೈಕೆಳಗಿನವರಿಂದ ತನಿಖೆ ಮಾಡಿಸಲು ಹೊರಟಿದ್ದಾರೆ. ವಿವರಣೆ ಕೇಳಿ ರಾಜ್ಯಪಾಲರು ನೋಟಿಸ್ ಕೊಟ್ಟಿದ್ದರು. ಎಂದಾದರೂ ಹಿಂದೆ ಈ ರೀತಿ ಮಾಡಿದ್ದು ನೋಡಿದ್ದೀರಾ?, ಗೌರವದಿಂದ ಸಿದ್ದರಾಮಯ್ಯ ತಮ್ಮ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಒತ್ತಾಯಿಸಿದರು.
ಸಿದ್ದರಾಮಯ್ಯ ಸಾರ್ವಜನಿಕರನ್ನು ಹಾದಿ ತಪ್ಪಿಸ್ತಿದ್ದಾರೆ. ರಾಜ್ಯಪಾಲರು ಯಾರಿಗೆ ಬೇಕಾದರೂ ತನಿಖೆಗೆ ಆದೇಶ ಮಾಡಬಹುದು. ರಾಜ್ಯಪಾಲರು ಕೊಟ್ಟ ಶೋಕಾಸ್ ನೊಟೀಸ್ ಅನ್ನು ಸಿದ್ದರಾಮಯ್ಯ ಅವರು ತಿರಸ್ಕರಿಸಿದ್ರು. ರಾಜ್ಯಪಾಲರ ಕಾನೂನಾತ್ಮಕ ನಡೆಗೆ ಸರ್ಕಾರ ಸಂಪುಟ ಸಭೆ ಮೂಲಕ ತಿರಸ್ಕರಿಸಿತು. ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಅನುಮತಿ ಕೊಟ್ಟಿದ್ದಾರೆ. ತನ್ನ ಕೈಕೆಳಗಿನ ಅಧಿಕಾರಿಗಳೇ ತನಿಖೆ ಮಾಡಿದ್ರೆ ಸತ್ಯ ಬರುತ್ತಾ ಎಂದು ಪ್ರಶ್ನೆ ಮಾಡಿದ್ದಾರೆ.
ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ರಾಜ್ಯಪಾಲರು ಕೊಟ್ಟಿರೋದು ಹಗರಣದ ತನಿಖೆಗೆ. ಆದರೆ, ಕಾಂಗ್ರೆಸ್‌ನವರು ಸಂವಿಧಾನದತ್ತ ತನಿಖೆಗೆ ನೀಡಿರೋದನ್ನು ಖಂಡಿಸಿ ಪ್ರತಿಭಟನೆ ಮಾಡ್ತಿದ್ದಾರೆ. ಕೊತ್ವಾಲ್ ಚೋರ್ ಗ್ಯಾಂಗ್ ರಾಜ್ಯಪಾಲರು ಕೊಟ್ಟಿರೋದೇ ತಪ್ಪು ಅಂತ ಹೇಳಿದ್ದಾರೆ. ದಲಿತ ರಾಜ್ಯಪಾಲರನ್ನು ಬೀದೀಲಿ ನಿಲ್ಲಿಸಿ ಅಪಮಾನ ಮಾಡ್ತಿದ್ದಾರೆ. ಇವರ ಮೇಲೆ ಅಟ್ರಾಸಿಟಿ ಕೇಸ್ ದಾಖಲಿಸಬೇಕು ಎಂದು ಕಿಡಿಕಾರಿದರು.
ಹಿಂದೆ ಯಡಿಯೂರಪ್ಪ ಅವರ ಮೇಲೆ ಪ್ರಾಸಿಕ್ಯೂಷನ್ ಕೊಟ್ಟಾಗ ಆಗ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರು, ಅಂದು ರಾಜ್ಯಪಾಲರು ಸಂವಿಧಾನದತ್ತವಾಗಿ ಅಧಿಕಾರ ಚಲಾಯಿಸಿದ್ದಾರೆ ಎಂದಿದ್ದರು. ಯಡಿಯೂರಪ್ಪ ರಾಜೀನಾಮೆ ಕೊಡಬೇಕು ಅಂತ ಸಿದ್ದರಾಮಯ್ಯ ಹೇಳಿದ್ರು. ನೀವು ಅದೇ ಉಪದೇಶವನ್ನು ಪಾಲಿಸಿ. ಸಿದ್ದರಾಮಯ್ಯ ಅವರೇ ನಿಮಗೆ ಮರೆವಿನ ಖಾಯಿಲೆ ಇದೆ. ಅದನ್ನು ನೆನಪಿಸೋ ಕೆಲಸ ಮಾಡ್ತಿದ್ದೇವೆ ಎಂದು ಅಂದು ಮಾತನಾಡಿದ್ದ ವಿಡಿಯೋವನ್ನು ಕೇಳಿಸಿದರು.
ನಿಮ್ಮ ಮೇಲೆ ಆರೋಪ ಬಂದಿದೆ. ನಿಮಗೆ ಸಂವಿಧಾನದ ಮೇಲೆ, ಕಾನೂನಿನ ಮೇಲೆ, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇದ್ದರೆ ರಾಜೀನಾಮೆ ನೀಡಿ ಎಂದು ಒತ್ತಾಯಿಸಿದರು. ನಿಮ್ಮ ಅಧಿಕಾರ ನಾವು ಕಿತ್ತುಕೊಳ್ಳುತ್ತಿಲ್ಲ. ನಿಮಗೆ ಯಾರನ್ನು ಬೇಕೋ ಅವರನ್ನು ಕೈಗೊಂಬೆ ಮಾಡಿಕೊಂಡು ಸಿಎಂ ಮಾಡಿ ಅಧಿಕಾರ ಮಾಡಿಸಿಕೊಳ್ಳಿ. ನಿಮ್ಮದು 136 ಸೀಟುಗಳಿವೆ. ಸಂವಿಧಾನ ಪ್ರಕಾರ ನಡೆದುಕೊಂಡರೆ, ನೀವು ಬೀದಿಗಿಳಿದು ಪ್ರತಿಭಟನೆ ಮಾಡ್ತೀರಿ. ಯಾರು ಭ್ರಷ್ಟಾಚಾರ ಮಾಡಿದ್ರೂ ಶಿಕ್ಷೆಯಾಗಲಿ ಅನ್ನೋದು ನಮ್ಮಹೋರಾಟ. ಅದು ಬಿಟ್ಟು ನಮ್ಮ ಮೇಲೆ ಬ್ಲಾಕ್ ಮೇಲ್ ಮಾಡುವ ಕೆಲಸ ಮಾಡಬೇಡಿ ಎಂದು ಹೇಳಿದರು.
ಜೆಡಿಎಸ್ನ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಮಾತನಾಡಿ, ನೀವು ಕಾನೂನು ಅರಿತವರು, ಕಾನೂನು ಪಂಡಿತರಿದ್ದೀರಿ. ನೀವೇ ಕಾನೂನು ಮುರೀತಿದ್ದೀರಿ. ನಾನು ತಪ್ಪು ಮಾಡಿದ್ರೆ ಸೈಟ್ ವಾಪಸ್ ಕೊಡ್ತೀನಿ ಅಂತೀರಿ. ಸೈಟ್ ಯಾಕೆ ವಾಪಸ್ ಕೊಡ್ತೀರಿ ಸ್ವಾಮಿ. ನಿಮಗೆ ನೈತಿಕತೆ ಇದ್ರೆ ತಕ್ಷಣ ರಾಜೀನಾಮೆ ಕೊಡಿ ಎಂದು ಆಗ್ರಹಿಸಿದರು.
ಇದನ್ನೂ ಓದಿ: ಈಗ ಯಾವ ನಾಲಿಗೆಯಲ್ಲಿ ನನ್ನ ರಾಜೀನಾಮೆ ಕೇಳುತ್ತಿದ್ದೀರಿ: ಸಿಎಂ ಸಿದ್ದರಾಮಯ್ಯ - Muda Scam