ಹೊಸಕೋಟೆ (ಬೆಂಗಳೂರು ಗ್ರಾಮಾಂತರ): ತೋಟದಲ್ಲಿ ಕಟ್ಟಿಹಾಕಿದ್ದ ಪಿಟ್ಬುಲ್ ತಳಿಯ ನಾಯಿ ಮೇಲೆ ಚಿರತೆ ದಾಳಿ ನಡೆಸಿ ತಿಂದು ಹಾಕಿರುವ ಘಟನೆ ಇಲ್ಲಿಯ ಹಲಸಿನಕಾಯಿಪುರ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.
ರಾಮಾಂಜಿ ಅನ್ನೋ ರೈತ ತಮ್ಮ ತೋಟದಲ್ಲಿ 50 ಸಾವಿರ ಬೆಲೆಯ ಪಿಟ್ಬುಲ್ ನಾಯಿಯನ್ನು ಕಟ್ಟಿಹಾಕಿದ್ದರು. ರಾತ್ರಿ ವೇಳೆ ತೋಟಕ್ಕೆ ನುಗ್ಗಿದ ಚಿರತೆ ಶ್ವಾನವನ್ನು ಬೇಟೆಯಾಡಿದೆ. ರೈತ ರಾಮಾಂಜಿ ತಮ್ಮ ತೋಟದಲ್ಲಿ ಬೀನ್ಸ್, ಟೊಮೆಟೊ ಬೆಳೆದಿದ್ದರು. ಆದರೆ ಜಿಂಕೆಗಳು ಬೆಳೆಗಳನ್ನು ತಿಂದು ಹಾಕುತ್ತಿವೆ ಎಂದು ಬೆಳೆ ರಕ್ಷಣೆಗಾಗಿ ತೋಟದಲ್ಲಿ ನಾಯಿ ಕಟ್ಟಿದ್ದರು. ನಿನ್ನೆ ರಾತ್ರಿ ಪಕ್ಕದ ಅರಣ್ಯ ವಲಯದಿಂದ ಆಗಮಿಸಿದ ಚಿರತೆ ಬಲಿ ಪಡೆದಿದೆ.
ಕಳೆದ ಕೆಲವು ದಿನಗಳಿಂದ ಚಿರತೆ ಉಪಟಳ ಹೆಚ್ಚಾಗಿದ್ದು, ರೈತರ ಆತಂಕಕ್ಕೆ ಕಾರಣವಾಗಿದೆ. ಮಧ್ಯರಾತ್ರಿ ವಿದ್ಯುತ್ ಕೊಡುವುದರಿಂದ ಬೆಳೆಗಳಿಗೆ ನೀರು ಹರಿಸಲು ರಾತ್ರಿ ವೇಳೆ ರೈತರು ತೋಟಕ್ಕೆ ಬರಬೇಕಾದ ಅನಿವಾರ್ಯತೆ ಇದೆ. ಆದರೆ ಚಿರತೆ ದಾಳಿಯಿಂದ ತೋಟಗಳಿಗೆ ಬರುವುದಕ್ಕೂ ಹೆದರುವಂತಾಗಿದೆ ಎಂದು ಸ್ಥಳೀಯ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಕುರಿಗಾಹಿಗಳ ಮೇಲೆ ಹುಲಿ ದಾಳಿ: ಇಬ್ಬರಿಗೆ ಗಾಯ
ಚಾಮರಾಜನಗರ: ಕುರಿಗಾಹಿಗಳ ಮೇಲೆ ಹುಲಿಯೊಂದು ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಶಿವಪುರ ಗ್ರಾಮದ ಹೊರವಲಯದಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಗ್ರಾಮದ ಜವರಶೆಟ್ಟಿ ಹಾಗೂ ಶಿವಶೆಟ್ಟಿ ಎಂಬವರ ಮೇಲೆ ದಾಳಿ ನಡೆಸಿದ ಹುಲಿ ಎದೆ, ಮೊಣಕಾಲು, ತೊಡೆ, ಬೆನ್ನಿಗೆ ಪರಚಿ ಗಾಯಗೊಳಿಸಿದೆ. ಸದ್ಯ ಗಾಯಾಳುಗಳು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ರಾಮದ ಹೊರವಲಯದಲ್ಲಿ ಮೇಕೆ ಮೇಯಿಸುವ ವೇಳೆ ಹುಲಿ ಮೇಕೆಯೊಂದನ್ನು ಹಿಡಿದಿದೆ. ಅದನ್ನು ರಕ್ಷಿಸಲು ಈ ಇಬ್ಬರು ಕುರಿಗಾಯಿಗಳು ಜೋರಾಗಿ ಕೂಗುತ್ತ ಹುಲಿ ಹತ್ತಿರ ಹೋಗಿದ್ದಾರೆ. ಮೇಕೆಯನ್ನು ಬಿಟ್ಟು ಇಬ್ಬರ ಮೇಲೆರಗಿ ಗಾಯಗೊಳಿಸಿದೆ. ಕಿರುಚಾಟ ಕೇಳಿ ಹತ್ತಿರದಲ್ಲಿದ್ದ ಪುಟ್ಟಸಿದ್ದಯ್ಯ ಹಾಗೂ ಇನ್ನಿತರರು ದೌಡಾಯಿಸಿ ಬೆದರಿಸಿದ ಬಳಿಕ ಹುಲಿ ಕಾಡಿನತ್ತ ಓಡಿದೆ ಎಂದು ತಿಳಿದುಬಂದಿದೆ. ಮನುಷ್ಯರ ಮೇಲೆ ದಾಳಿ ಮಾಡಲು ಮುಂದಾಗಿರುವುದರಿಂದ ಸ್ಥಳೀಯರಲ್ಲಿ ಆತಂಕ ಉಂಟಾಗಿದೆ. ಕೂಡಲೇ ಹುಲಿ ಸೆರೆ ಹಿಡಿಯಬೇಕೆಂದು ರೈತರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.
ಕೆಲ ದಿನಗಳ ಹಿಂದೆ ಮೈಸೂರಿನ ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದಲ್ಲೂ ಇಂತಹದ್ದೇ ಘಟನೆ ನಡೆದಿತ್ತು. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೆ ಹುಲಿ ದಾಳಿ ಮಾಡಿ ಗಾಯಗೊಳಿಸಿತ್ತು. ಅಲ್ಲೇ ಇದ್ದ ಪತಿ ಹುಲಿಯನ್ನು ಬೆದರಿಸಿ ಪತ್ನಿಯನ್ನು ರಕ್ಷಣೆ ಮಾಡಿದ್ದ.
ಇದನ್ನೂ ಓದಿ: ಮೈಸೂರು: ಇಬ್ಬರ ಮೇಲೆ ದಾಳಿ ನಡೆಸಿದ ಹುಲಿ ಕೆಲವೇ ಗಂಟೆಗಳಲ್ಲಿ ಸೆರೆ