ಬೆಂಗಳೂರು: ಮುಡಾ ಹಗರಣ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿಯ ಮೈಸೂರು ಚಲೋಗೆ ಪೊಲೀಸರ ತಡೆವೊಡ್ಡಿದ್ದಾರೆ. ಸಿದ್ದರಾಮಯ್ಯನವರೇ ನೀವು ನಮ್ಮನ್ನು ಅರೆಸ್ಟ್ ಮಾಡುತ್ತೀರಾ.. ಮುಡಾ ಪ್ರಕರಣದಲ್ಲಿ ನೀವೇ ಅರೆಸ್ಟ್ ಆಗಬಹುದು. ಅಗತ್ಯ ಬಿದ್ದರೆ ಈ ಪ್ರಕರಣದಲ್ಲಿ ನಾವು ಕಾನೂನು ಹೋರಾಟಕ್ಕೂ ಮುಂದಾಗುತ್ತೇವೆ ಎಂದು ಮುಖ್ಯಮಂತ್ರಿಗಳಿಗೆ ಕೇಂದ್ರ ಸಚಿವ ಪಲ್ಹಾದ್ ಜೋಶಿ ಎಚ್ಚರಿಕೆ ನೀಡಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಕೇವಲ ಒಂದು ಕಾಲು ವರ್ಷದಲ್ಲಿ ಹಗರಣಗಳ ಸರಮಾಲೆ ಮಾಡಿದ್ದಾರೆ. ಬಿಜೆಪಿ ಮೇಲೆ ಸುಳ್ಳು ಆರೋಪ ಮಾಡಿದರು. ಸುಳ್ಳು ಆರೋಪದ ಮೇಲೆ ಜಾಮೀನು ಪಡೆದು ಕ್ಷಮೆ ಕೇಳುವ ಹಂತಕ್ಕೆ ಬಂದಿದ್ದಾರೆ. ಸತತವಾಗಿ ಭ್ರಷ್ಟಾಚಾರ, ಭ್ರಷ್ಟಾಚಾರ, ಭ್ರಷ್ಟಾಚಾರ. ಒಂದು ಕಾಲದಲ್ಲಿ ಭ್ರಷ್ಟಾಚಾರ ಅಂತಿತ್ತು, ನಂತರ ಹಗರಣ ಅಂತಾಯಿತು. ಕಾಂಗ್ರೆಸ್ ಡಿಎನ್ಎ ಹೇಗೆ ಬಿಡೋಕೆ ಆಗುತ್ತದೆ. ಅದಕ್ಕೆ ಪರಮ ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇವರ ಸರ್ಕಾರದಲ್ಲಿ ಈ ಹಿಂದೆಯೂ ಕೂಡ ಕಾಂಟ್ರಾಕ್ಟರ್ ಮನೆಯಲ್ಲಿ ನೂರಾರು ಕೋಟಿ ಸಿಕ್ಕಿತ್ತು. ಅದು ಕೂಡ ತೆಲಂಗಾಣದಲ್ಲಿ ಸಿಕ್ಕಿತ್ತು. ಈಗ 187 ಕೋಟಿ ಹಣ ಕೂಡ ಅಕೌಂಟಲ್ಲಿದ್ದ ಹಣ. ಅತ್ಯಂತ ಐಶಾರಾಮಿ ಕಾರು, ಗೋಣಿ ಚೀಲಗಳಲ್ಲಿ ದುಡ್ಡು ಮಾಡಿದ್ದಾರೆ. ಅವರನ್ನ ಈವರೆಗೂ ಎಸ್ಐಟಿ ನೋಟೀಸ್ ಕೊಟ್ಟು ಕರೆಸುವ ಕೆಲಸ ಮಾಡಿಲ್ಲ. ಅವರನ್ನ ಎಸ್ಐಟಿ ಹೋಟೆಲ್‌ಗೆ ಕರೆದು ಚಹ ಕುಡಿಸಿ ಕಳಿಸಿದೆ. ಯಾವಾಗ ED ನಾಗೇಂದ್ರ ವಶಕ್ಕೆ ಪಡೆಯಿತೋ ಆಗ ಮತ್ತೊಬ್ಬ ಶಾಸಕ ದದ್ದಲ್ ಎಸ್ಐಟಿಗೆ ಹೋಗಿ ಕುಳಿತಿದ್ದಾರೆ. ಸಿದ್ದರಾಮಯ್ಯ ಅವರನ್ನ ರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಎಲ್ಲಿ ಇಡಿ ಅವರು ಬಂಧನ ಮಾಡ್ತಾರೆ ಅಂತ ಹೋಗಿ ಎಸ್ಐಟಿನಲ್ಲಿ ಕುಳಿತಿದ್ದಾರೆ ಎಂದು ದೂರಿದರು.
ಮುಡಾ ಹಗರಣದ ಬಗ್ಗೆ ಪ್ರಸ್ತಾಪಿಸಿದ ಅವರು, ನೀವು ಅಧಿಕಾರಕ್ಕೆ ಬಂದ ಕೂಡಲೇ ಇದನ್ನು ಗಮನಿಸಿ ವಾಪಸ್ ಕೊಡಬೇಕಿತ್ತು. ಈಗ 50:50 ಅನುಪಾತವೇ ಇಲ್ಲ, ಕೂಡಲೇ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ರಾಹುಲ್ ಗಾಂಧಿ ಅವರು ಸಂವಿಧಾನ ಅಡಿಯಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದೀರಿ. ಕರ್ನಾಟಕದಲ್ಲಿ ನಡೆಯುತ್ತಿರೋ ಹಗರಣಕ್ಕೆ ನೀವೇನು ಹೇಳ್ತೀರಿ. ನೂರಾರು ಕೋಟಿ ಭ್ರಷ್ಟಾಚಾರ ನಡೆದಿದೆ. ನಮಗೆ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಲು ಹಕ್ಕಿಲ್ವಾ.?. ಕಾಂಗ್ರೆಸ್ ಹೈಕಮಾಂಡ್‌ಗೆ ಮರ್ಯಾದೆ ಇದ್ದರೆ ಕೂಡಲೇ ಸಿದ್ದರಾಮಯ್ಯ ಅವರನ್ನ ಅಧಿಕಾರದಿಂದ ಕೆಳಗೆ ಇಳಿಸಿ. ಬಂಧನ ಮಾಡಿದರೆ ವಿಪಕ್ಷ ನಾಯಕನನ್ನ ಅಲ್ಲ, ನಿಮ್ಮ ಸಿಎಂ ಬಂಧನ ಆಗಲಿದೆ. ಸರ್ವಾಧಿಕಾರಿ ಧೋರಣೆ ಸರಿಯಲ್ಲ. ಇಂದಿರಾಗಾಂಧಿ ಸ್ವತಃ ನನ್ನನ್ನ ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂದು ಓಡಾಡಿಕೊಂಡಿದ್ದರು. ಈಗ ರಾಹುಲ್ ಗಾಂಧಿ ಸಂವಿಧಾನ ಇಟ್ಟುಕೊಂಡು ಓಡಾಡ್ತಿದ್ದಾರೆ. ಅಗತ್ಯ ಬಿದ್ದರೆ ಕಾನೂನು ಮೂಲಕ ಹೋರಾಟ ಮಾಡುತ್ತೇವೆ. ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಮುಡಾ ಹಗರಣ ಪ್ರಕರಣದಲ್ಲಿ 50:50 ಅನುಪಾತದಲ್ಲಿ ನಿವೇಶನ ಹಂಚಿಕೆ ಆಗಿದೆ. ಕೆಸರೆ ಗ್ರಾಮದಲ್ಲಿ ಜಾಗ ಇದ್ದರೂ ವಿಜಯನಗರದಲ್ಲಿ ಸೈಟ್ ಪಡೆದಿದ್ದಾರೆ. ಸಿದ್ದರಾಮಯ್ಯ ಅವರು ಅಫಿಡವಿಟ್‌ನಲ್ಲಿ 8 ಕೋಟಿ ಅಂತ ಘೋಷಣೆ ಮಾಡಿದ್ದಾರೆ. 2023ರ ಅಫಿಡವಿಟ್‌ನಲ್ಲಿ ಉಲ್ಲೇಖ ಮಾಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ಹೇಳ್ತೀನಿ, ದೇಶದ ಯಾವುದೇ ಮೂಲೆಯಲ್ಲಿ ಮುಂಬೈ ಸೇರಿದಂತೆ ಎಲ್ಲಿ ಇಷ್ಟು ಜಾಗಕ್ಕೆ 62 ಕೋಟಿ ಆಗುತ್ತದೆ?. ಇದನ್ನ ಖಂಡಿಸಿ ಪ್ರತಿಭಟನೆ ಮಾಡಿದರೆ ನಮ್ಮ ಕಾರ್ಯಕರ್ತರ ಬಂಧನ ಮಾಡಿದ್ದೀರಿ. ಭ್ರಷ್ಟಾಚಾರ ಹಗರಣ ತಾಂಡವ ಆಡ್ತಿದೆ. ಒಂದು ತಿಂಗಳು, ಎರಡು ತಿಂಗಳ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಸ್ವತಃ ನಿಮ್ಮ ಆರ್ಥಿಕ ಸಲಹೆಗಾರ ರಾಯರೆಡ್ಡಿ ವರ್ಗಾವಣೆಯಲ್ಲಿ ಭ್ರಷ್ಟಾಚಾರ ಅಂತ ಹೇಳಿದ್ದಾರೆ ಎಂದು ವಾಗ್ದಾಳಿ ನಡೆಸಿದರು.