ಬೆಂಗಳೂರು: ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತದೆ. ಕಾನೂನು ಎಲ್ಲರಿಗೂ ಒಂದೇ ಅಲ್ವಾ ಎಂದು ಕಾಂಗ್ರೆಸ್ ಮುಖಂಡ ಬಿ. ಕೆ. ಹರಿಪ್ರಸಾದ್ ಸಿಸಿಬಿ ವಿಚಾರಣೆ ಕುರಿತಂತೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವರು, ಅಧಿಕಾರಿಗಳು ಅವರ ಕೆಲಸ ಮಾಡಿದ್ದಾರೆ. ನಾವು ಆ ಬಗ್ಗೆ ಹೆಚ್ಚು ಮಾತನಾಡುವುದು ಸರಿಯಲ್ಲ. ಪೊಲೀಸರು ಕಾನೂನು ರೀತಿಯ ಕ್ರಮ ಕೈಗೊಳ್ಳುತ್ತಾರೆ. ಸಂಸದ ಅನಂತ ಕುಮಾರ್ ಹೆಗಡೆ ಹೇಳಿಕೆ ವಿರುದ್ಧ ಎಫ್ಐಆರ್ ಆಗಿದೆ. ಆರ್ಎಸ್ಎಸ್ ಮುಖಂಡ ಪ್ರಭಾಕರ್ ಭಟ್ ವಿರುದ್ಧವೂ ಎಫ್ಐಆರ್ ದಾಖಲಾಗಿದೆ. ಕಾನೂನು ಎಲ್ಲರಿಗೂ ಒಂದೇ ಅಲ್ವಾ?. ನನಗೊಂದು ಬೇರೆ ಇರುತ್ತಾ? ಎಂದು ಸಮರ್ಥಿಸಿಕೊಂಡರು.
ಹರಿಪ್ರಸಾದ್ ವಿರುದ್ಧ ಯಾವ ಒಳಸಂಚೂ ಇಲ್ಲ. ಅವರಿಗೆ ತೊಂದರೆ ಮಾಡಬೇಕು ಅಥವಾ ರಾಜಕೀಯವಾಗಿ ಅವರ ವಿರುದ್ಧ ಪಿತೂರಿ ಮಾಡಬೇಕು ಎಂಬುದು ಯಾವುದೂ ನನಗೆ ಕಾಣಿಸುತ್ತಿಲ್ಲ ಎಂದು ಪರಮೇಶ್ವರ್ ತಿಳಿಸಿದರು.
ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ತನಿಖೆ: ಪಿಎಸ್ಐ, ಸಿಟಿಐ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಪ್ರಕರಣದ ತನಿಖೆಯನ್ನು ಸಿಸಿಬಿ ನಡೆಸುತ್ತಿದೆ. ನಾವು ಎಲ್ಲ ರೀತಿಯ ಎಚ್ಚರಿಕೆ ವಹಿಸಬೇಕು. ಹಿಂದಿನಂತೆ ಘಟನೆ ಮರುಕಳಿಸಬಾರದು ಎಂಬ ಕಾರಣಕ್ಕೆ ಪಿಎಸ್ಐ ನೇಮಕಾತಿ ಪರೀಕ್ಷೆಗಳೆಲ್ಲವನ್ನೂ ಬೆಂಗಳೂರಿನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಈ ಮಧ್ಯೆ ಗುಪ್ತಚರ ಮಾಹಿತಿ ಸಂಗ್ರಹಿಸಲು ಈ ರೀತಿ ನಕಲಿ ಆಡಿಯೋ ಮಾಡಿದ್ದೇವೆ ಎಂದು ಆರೋಪಿತರು ಹೇಳಿಕೆ ಕೊಟ್ಟಿದ್ದಾರೆ. ಅದರ ಬಗ್ಗೆ ಸಿಸಿಬಿ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ತನಿಖೆ ಬಳಿಕ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಿಸಿಬಿ ಪೊಲೀಸರು ಅದರ ವಾಸ್ತವತೆಯನ್ನು ತನಿಖೆ ಮಾಡುತ್ತಿದ್ದಾರೆ. ಮಾಹಿತಿ ಪಡೆಯುವಾಗ ಆಡಿಯೋ ಬೆಳಕಿಗೆ ಬಂದಿದೆ. ಮಾಹಿತಿ ಕಲೆ ಹಾಕಲು ಫೇಕ್ ಆಡಿಯೋ ಮಾಡಿದ್ದೆ ಅಂತ ಪಿಎಸ್ಐ ಹೇಳಿದ್ದಾರೆ. ಆಡಿಯೋ ಸತ್ಯವಾ, ಅಲ್ವಾ ಅನ್ನೋದರ ಬಗ್ಗೆ ಸಿಸಿಬಿ ತನಿಖೆ ಮಾಡುತ್ತಿದೆ. ಸತ್ಯಾಂಶ ಹೊರ ಬರಲಿದೆ. ತಪ್ಪಿದ್ದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.
ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ತೆಗೆದುಕೊಂಡು ನಾವು ಯಶಸ್ವಿಯಾಗಿ ನೇಮಕಾತಿ ಪರೀಕ್ಷೆ ನಡೆಸಲು ಮುಂದಾಗಿದ್ದೇವೆ. ನೇಮಕಾತಿ ಪರೀಕ್ಷೆಯಾಗದೆ ಮೂರು ವರ್ಷವಾಗಿದೆ. ಇಷ್ಟು ದಿನ ನೇಮಕಾತಿ ಆಗಿಲ್ಲ ಎಂದರೆ ಹೇಗೆ ಎಂದು ಗೃಹ ಸಚಿವರು ಹೇಳಿದರು.
ಇದನ್ನೂ ಓದಿ: ಪಿಎಸ್ಐ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ : ಸಿಸಿಬಿಯಿಂದ ಆರೋಪಿ ಸಬ್ ಇನ್ಸ್‌ಪೆಕ್ಟರ್ ವಿಚಾರಣೆ