ಬೆಂಗಳೂರು: ಜನರಲ್ ಪವರ್ ಆಫ್ ಅಟಾರ್ನಿ (ಜಿಪಿಎ) ಮೂಲಕ ಸ್ವಾಧೀನ ಪಡೆದ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ಕೆಲವು ಜಮೀನುಗಳ ಹಸ್ತಾಂತರ ನಿಷೇಧ) ಕಾಯಿದೆಯಡಿ ಮಂಜೂರಾದ ಜಮೀನನ್ನು ಗೃಹ ನಿರ್ಮಾಣ ಸಂಘವು ಬ್ಯಾಂಕ್‌ವೊಂದರಿಂದ ಪಡೆದ ಸಾಲಕ್ಕೆ ಬದಲಾಗಿ ಜಪ್ತಿ ಮಾಡಲು ಅವಕಾಶವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ಪಿಟಿಸಿಎಲ್ ಕಾಯಿದೆಯಡಿ ಮಂಜೂರಾದ ಜಮೀನನ್ನು ಭೂ ಮಾಲೀಕರಿಗೆ ಮರುಸ್ಥಾಪಿಸಿ ಆದೇಶಿಸಿದ್ದ ಜಿಲ್ಲಾಧಿಕಾರಿಗಳ ಕ್ರಮ ಪ್ರಶ್ನಿಸಿ ಜಮೀನನ್ನು ಅಡವಿಟ್ಟುಕೊಂಡು ಸಾಲ ಪಾವತಿಸಿದ್ದ ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೊವಿಂದರಾಜು ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅಲ್ಲದೆ, ಭೂ ಮಾಲೀಕರಿಂದ ಜಮೀನಿನ ಕುರಿತು ಜವಹಾರ್ ಹೌಸ್ ಬಿಲ್ಡಿಂಗ್ ಕೋ ಅಪರೇಟಿವ್ ಸೊಸೈಟಿ ಲಿಮಿಟೆಡ್ (ಹೌಸಿಂಗ್ ಸೊಸೈಟಿ) ಜಿಪಿಎ ಮಾಡಿಕೊಂಡಿದ್ದು, ಆ ಜಮೀನನ್ನು ಅಭಿವೃದ್ಧಿ ಪಡಿಸಲು ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ(ಬ್ಯಾಂಕ್) ಸಾಲ ಪಡೆದುಕೊಂಡಿದೆ. ಆದರೆ, ಬ್ಯಾಂಕ್‌ನಿಂದ ಪಡೆದ ಸಾಲದಿಂದ ಜಮೀನು ಮಾಲೀಕರಿಗೆ ಯಾವುದೇ ಲಾಭವಾಗಿಲ್ಲ. ಬ್ಯಾಂಕ್ ಮತ್ತು ಜಮೀನು ಮಾಲೀಕರ ನಡುವೆ ಒಪ್ಪಂದವೂ ಆಗಿಲ್ಲ. ಹೀಗಾಗಿ, ಜಮೀನಿನ ಹರಾಜು ಪ್ರಕ್ರಿಯೆ ನಡೆಸುವುದಕ್ಕೆ ಕಾನೂನಿನಲ್ಲಿ ಅವಕಾಶವಿರುವುದಿಲ್ಲ ಎಂದು ಪೀಠ ತಿಳಿಸಿದೆ.
ಜೊತೆಗೆ, ಜಮೀನಿನ ಮಾಲೀಕರು ಸೊಸೈಟಿ ನಡುವಿನ ಒಪ್ಪಂದ ಹಾಗೂ ಸೊಸೈಟಿ ಮತ್ತು ಬ್ಯಾಂಕ್ ನಡುವಿನ ಒಪ್ಪಂದಗಳು ಪ್ರತ್ಯೇಕವಾಗಿವೆ. ಹೀಗಾಗಿ, ಭೂ ಮಾಲೀಕರಿಗೂ ಸಾಲ ನೀಡಿದ ಬ್ಯಾಂಕ್ಗೂ ಸಂಬಂಧವೇ ಇಲ್ಲ. ಆದ್ದರಿಂದ ಜಮೀನನ್ನು ಜಿಲ್ಲಾಧಿಕಾರಿಗಳು ಮರುಸ್ಥಾಪನೆ ಮಾಡಿರುವ ಕ್ರಮದಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಪಿಟಿಸಿಎಲ್ ಕಾಯಿದೆಯಡಿ ಜಮೀನನ್ನು ಪರಾಭಾರೆ ಮಾಡುವುದು ಅಥವಾ ಜಮೀನನ್ನು ಹಸ್ತಾಂತರ ಮಾಡುವುದು ನಿಷೇಧವಿದೆ. ಆದರೂ, ಅಂತಹ ಜಮೀನಿನ ಮೇಲೆ ಬ್ಯಾಂಕ್ ಸೇರಿದಂತೆ ಇತರೆ ಸಂಸ್ಥೆಗಳಿಂದ ಸಾಲ ಪಡೆದುಕೊಳ್ಳುವುದನ್ನು ನಿಷೇಧಿಸಲಾಗಿಲ್ಲ. ಅಂತಹ ಸಾಲ ಮಂಜೂರು ಮರು ಪಾವತಿ ಮಾಡದಿದ್ದಲ್ಲಿ, ಜಮೀನಿನ ಮಾರಾಟ ಅಥಾವ ವರ್ಗಾವಣೆ ಮಾಡುವುದಕ್ಕೆ ಕಾಯಿದೆಯಲ್ಲಿ ಅಡ್ಡಿಯಿಲ್ಲ. ಆದರೆ, ಪ್ರಸ್ತುತ ಪ್ರಕರಣದಲ್ಲಿ ಜಮೀನು ಮಾಲೀಕರು (ಮಂಜೂರಾದವರು) ಬ್ಯಾಂಕಿನಿಂದ ಯಾವುದೇ ಸಾಲವನ್ನು ಪಡೆದುಕೊಂಡಿಲ್ಲ. ಗೃಹ ನಿರ್ಮಾಣ ಸೊಸೈಟಿಯಿಂದ ಮಾರಾಟದ ಒಪ್ಪಂದವನ್ನು ಮಾತ್ರ ಮಾಡಿಕೊಂಡಿದ್ದಾರೆ. ಆದರೆ, ಸೊಸೈಟಿ ಬ್ಯಾಂಕ್‌ನಿಂದ ಹಣವನ್ನು ಸಾಲ ಪಡೆಯುವ ಸಂದರ್ಭದಲ್ಲಿ ಆಸ್ತಿಯ ಹೆಸರಿನಲ್ಲಿ ಅಡಮಾನ ಇಡಲಾಗಿದೆ. ಹೀಗಾಗಿ, ಜಮೀನು ಮಾಲೀಕರು ಬ್ಯಾಂಕ್ ಮತ್ತು ಸೊಸೈಟಿಗೆ ಒಪ್ಪಂದಕ್ಕೆ ಜವಾಬ್ದಾರರಾಗುವುದಿಲ್ಲ ಎಂದು ಪೀಠ ಹೇಳಿದೆ.
ಜಮೀನು ಮಾಲೀಕರು ಯಾವುದೇ ಸಾಲವನ್ನು ಪಡೆಯದ ಹಿನ್ನೆಲೆಯಲ್ಲಿ ಪಿಟಿಸಿಎಲ್ ಕಾಯಿದೆ ಸೆಕ್ಷನ್ 5 ಮತ್ತು 5ಎ ಅಡಿಯಲ್ಲಿ ಉಪ ವಿಭಾಗಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ನೀಡಿರುವ ತೀರ್ಪಿನಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ನ್ಯಾಯಪೀಠ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಬಡಾವಣೆಗಳ ನಿರ್ಮಾಣಕ್ಕಾಗಿ ಜವಾಹರ್ ಹೌಸ್ ಬಿಲ್ಡಿಂಗ್ ಕೋ ಅಪರೇಟಿವ್ ಸೊಸೈಟಿ ಲಿಮಿಟೆಡ್ ಹಲವು ಮಂದಿ ಮಾಲೀಕತ್ವದ ಜಮೀನುಗಳನ್ನು ಜಿಪಿಎ ಮಾಡಿಸಿಕೊಂಡಿತ್ತು. ಬಡಾವಣೆ ಅಭಿವೃದ್ಧಿಪಡಿಸಲು ಬ್ಯಾಂಕ್‌ನಿಂದ 2 ಕೋಟಿ ರೂ.ಗಳನ್ನು ಸಾಲ ಪಡೆದಿತ್ತು. ಸಾಲ ಮರುಪಾವತಿಸದಿದ್ದಾಗ ಬ್ಯಾಂಕ್ ಸಹಕಾರ ಸಂಘಗಳ ಜಂಟಿ ರಿಜಿಸ್ಟ್ರಾರ್ ಮುಂದೆ ಅರ್ಜಿ ಸಲ್ಲಿಸಿತ್ತು. ಅರ್ಜಿಗಳ ವಿಚಾರಣೆ ನಡೆಸಿದ್ದ ರಿಜಿಸ್ಟ್ರಾರ್ ಸೊಸೈಟಿ ಬಳಿಯಿದ್ದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಿತ್ತು. ಅದರಂತೆ ಜಮೀನುಗಳ ಹರಾಜು ಪ್ರಕ್ರಿಯೆಗೆ ಬ್ಯಾಂಕ್ ಮುಂದಾಗಿತ್ತು. ಇದರಲ್ಲಿ ಪಿಟಿಸಿಎಲ್ ಕಾಯಿದೆ ಮೂಲಕ ಮಂಜೂರಾಗಿದ್ದ ಜಮೀನುಗಳೂ ಇದ್ದವು. ಆ ಜಮೀನುಗಳ ಮಾಲೀಕರು ಹರಾಜಿಗೆ ಮುಂದಾಗಿದ್ದ ಬ್ಯಾಂಕ್ ಕ್ರಮ ಪ್ರಶ್ನಿಸಿ ಉಪ ವಿಭಾಗಾಧಿಕಾರಿಗಳ ಮುಂದೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಉಪವಿಭಾಗಾಧಿಕಾರಿಗಳು, ಜಮೀನನ್ನು ಮೂಲ ಮಾಲೀಕರಿಗೆ ಪುನರ್‌ಸ್ಥಾಪಿಸಿ ಆದೇಶಿಸಿದ್ದರು. ಈ ಆದೇಶವನ್ನು ಜಿಲ್ಲಾಧಿಕಾರಿಗಳು ಎತ್ತಿ ಹಿಡಿದಿದ್ದರು. ಅದನ್ನು ಪ್ರಶ್ನಿಸಿ ಬ್ಯಾಂಕ್ ಹೈಕೋರ್ಟ್ ಮೆಟ್ಟಿಲೇರಿತ್ತು.
ಇದನ್ನೂ ಓದಿ: ಡಿಕೆಶಿ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣದ ವಿಚಾರಣೆ ಮುಂದೂಡಿಕೆ - Disproportionate Assets Case