ಶಿವಮೊಗ್ಗ: ವಿಜಯೇಂದ್ರ ನನ್ನ ಬಗ್ಗೆ ಸೂಕ್ಕಿನ ಮಾತನ್ನು ಆಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ಶಿವಮೊಗ್ಗ ಲೋಕಸಭಾ ಪಕ್ಷೇತರ ಅಭ್ಯರ್ಥಿ ಕೆ ಎಸ್ ಈಶ್ವರಪ್ಪ ಕಿಡಿಕಾರಿದ್ದಾರೆ.
ತಮ್ಮ ಚುನಾವಣಾ ಕಚೇರಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರ ಇಬ್ಬರು ಮಕ್ಕಳು ನನ್ನ ಬಗ್ಗೆ ಹೇಳಿಕೆ ನೀಡಿದ್ದು ಗೊತ್ತಾಗಿದೆ. ರಾಘವೇಂದ್ರ ಅವರು ಈಶ್ವರಪ್ಪ ಏನೇ ಹೇಳಿದ್ರು ಆಶೀರ್ವಾದ ಅಂದಿದ್ದಾರೆ. ಆದ್ರೆ ನಾವು ಬಿಜೆಪಿಯನ್ನು ತಪಸ್ಸಿನಂತೆ ಕಟ್ಟಿದ್ದೇವೆ ಎಂದರು.
ಯಾವಾಗಲೂ ಸತ್ಯ ಹೇಳಿದ್ರೆ ಸಿಟ್ಟು ಬರುತ್ತದೆ. ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿಲ್ವ. ನಾನು ಈಗಲೂ ಬಿಜೆಪಿಯಲ್ಲೇ ಇದ್ದೇನೆ. ಪಕ್ಷೇತರ ಸ್ಪರ್ಧೆ ಮಾಡಿ ಪ್ರಶ್ನೆ ಕೇಳುತ್ತಿದ್ದೇನೆ ಅಷ್ಟೇ. ಶಿಸ್ತು, ಹಿರಿಯರ ಮಾತು ಅಂತ ಸುಮ್ಮನೆ ಕೂತರೆ ಪಕ್ಷ ಹಾಳಾಗಿ ಹೋಗುತ್ತಿದೆ. ಹೀಗಾಗಿ ಪಕ್ಷೇತರನಾಗಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು.
1 ಲಕ್ಷ ಮತಗಳಿಂದ ಗೆದ್ದೇ ಗೆಲ್ಲುತ್ತೇನೆ: ಸಾಕಷ್ಟು ಜನ ನನ್ನ ಸ್ಪರ್ಧೆಗೆ ಸಹಕಾರ ನೀಡುವುದಾಗಿ ಹೇಳುತ್ತಿದ್ದಾರೆ. ನನ್ನ ಮಗನ ಜೊತೆ ಚರ್ಚೆ ನಡೆಸಿ, ಅವನ ಭವಿಷ್ಯ, ನನ್ನ ಭವಿಷ್ಯ ನೋಡಿಕೊಂಡೇ ಸ್ಪರ್ಧೆ ಮಾಡುತ್ತಿದ್ದೇನೆ. ಕಾಂಗ್ರೆಸ್ ನಾಯಕರೇ ನನಗೆ ಬೆಂಬಲ ನೀಡುವುದಾಗಿ ಹೇಳುತ್ತಿದ್ದಾರೆ. ನಾನು ಇಂದೇ ಚುನಾವಣೆ ನಡೆದರೂ ಸಹ 1 ಲಕ್ಷ ಮತಗಳಿಂದ ಗೆದ್ದೇ ಗೆಲ್ಲುತ್ತೇನೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಯಡಿಯೂರಪ್ಪನವರು ಜೆಡಿಎಸ್ ಅಂತ ಪ್ರಸ್ತಾಪ ಮಾಡದೆ ಮುಂದಿನ ಚುನಾವಣೆಗೆ ಮೈತ್ರಿ ಮುಂದುವರಿಯುತ್ತದೆ ಎಂದಿದ್ದಾರೆ. ಹಾಗಾದ್ರೆ ನಿಮ್ಮ ಮೈತ್ರಿ ಯಾರ ಜೊತೆಗೆ ವಿಧಾನಸಭೆ ಚುನಾವಣೆಯಲ್ಲಿ ಒಳ ಒಪ್ಪಂದ ಮಾಡಿಕೊಂಡು ಪ್ರಯಾಸದಿಂದ ಗೆದ್ದಿದ್ದೀರಿ. ಲೋಕಸಭಾ ಚುನಾವಣೆಯಲ್ಲಿ ಶಕ್ತಿಹೀನ ಕಾಂಗ್ರೆಸ್ ಅಭ್ಯರ್ಥಿ ಹಾಕಿಸಿಕೊಂಡಿದ್ದೀರಿ. ಈ ಒಳ ಒಪ್ಪಂದದ ಬಿಜೆಪಿಯಲ್ಲಿ ಇರಲಿಲ್ಲ. ನಾವು 108 ಸ್ಥಾನ ಗಳಿಸಿದ್ವಿ. ಈಗ ಹಿಂದುತ್ವ ವಿಚಾರ ಪಕ್ಕಕ್ಕೆ ಸರಿಸಿ, ಹೊಂದಾಣಿಕೆ ನಡೆಸಿದ್ದರಿಂದ 108 ರಿಂದ 67 ಕ್ಕೆ ಬಂದು ನಿಂತಿದೆ ಎಂದು ಈಶ್ವರಪ್ಪ ಆರೋಪಿಸಿದರು.
ಯಡಿಯೂರಪ್ಪನವರು ಈಶ್ವರಪ್ಪ ಹೇಳಿಕೆಗೆ ಉತ್ತರ ಕೊಡಲ್ಲ ಎಂದಿದ್ದಾರೆ. ಇದಕ್ಕೆ ನನಗೆ ಉತ್ತರ ಬೇಕು. ಅನೇಕ ಕಡೆ ಹಿಂದುತ್ವವನ್ನು ಕಡೆಗಣಿಸಿ, ಜಾತಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಬಿಜೆಪಿ ಈ ಸ್ಥಿತಿಗೆ ಬರಲು ಯಡಿಯೂರಪ್ಪ ಸಹ ಒಂದು ರೀತಿಯಲ್ಲಿ ಕಾರಣೀಕರ್ತರು ಎಂದು ಈಶ್ವರಪ್ಪ ದೂರಿದರು.
ಲಾಲ್ ಕೃಷ್ಣ ಅಡ್ವಾಣಿ, ನರೇಂದ್ರ ಮೋದಿ ನನಗೆ ಆದರ್ಶ: ಕಾಂಗ್ರೆಸ್ನ ಡಮ್ಮಿ ಅಭ್ಯರ್ಥಿ ಆದ ಕಾರಣ ನನಗೆ ಅನುಕೂಲವಾಗಿದೆ. ನನಗೆ ಅಡ್ವಾಣಿ, ಮೋದಿ ಆದರ್ಶವೇ ಹೊರತು ಯಡಿಯೂರಪ್ಪ ಅಲ್ಲ. ನಿನ್ನೆ ಅಗರವಾಲ್ವರು ಬಾಗಲಕೋಟೆಯಲ್ಲಿ ಈಶ್ವರಪ್ಪ ಯಾರೆಂದು ತಿಳಿದಿಲ್ಲ ಎಂದು ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮೋಹನ ದಾಸ್ ಅವರು ನಾನು ಯಾರೆಂದು ತಿಳಿಯದೆ ಸಂಧಾನ ಮಾಡಲು ನಮ್ಮ ಮನೆಗೆ ಬಂದಿದ್ರಾ ಎಂದು ಕೆ ಎಸ್ ಈಶ್ವರಪ್ಪ ಅಗರವಾಲ್ಗೆ ಪ್ರಶ್ನಿಸಿದರು.
ಚಿಹ್ನೆ ಕುರಿತು ಚುನಾವಣಾ ಆಯೋಗಕ್ಕೆ ಪತ್ರ: ಪಕ್ಷೇತರ ಅಭ್ಯರ್ಥಿ ಚುನಾವಣೆ ಚಿಹ್ನೆ ನೋಡಿದೆ. ಅದು ನನಗೆ ತೃಪ್ತಿ ಇಲ್ಲ. ಈ ಕುರಿತು ನಾನು ಚುನಾವಣಾ ಆಯೋಗಕ್ಕೆ ಪತ್ರ ಬರೆಯುತ್ತೇನೆ. ಯಾರು ರೀ ವಿಜಯೇಂದ್ರ. ಪಕ್ಷಕ್ಕೆ ಅವರ ಕೊಡುಗೆ ಏನು, ನಿಮ್ಮಪ್ಪ ಪಕ್ಷಕ್ಕೆ ದುಡಿದಿದ್ದಾರೆ. ನೀನು ಪಕ್ಷಕ್ಕೆ ಏನ್ ಕೆಲಸ ಮಾಡಿದ್ದೀರಿ, ಮೊದಲು ಹಿರಿಯರಿಗೆ ಗೌರವ ಕೊಡಲು ಹೇಳಿ ಎಂದು ಈಶ್ವರಪ್ಪ ಗರಂ ಆದರು.
ಕುಟುಂಬ ರಾಜಕಾರಣ ವಿರುದ್ದ ನನ್ನ ಸ್ಪರ್ಧೆ: ಪಕ್ಷಕ್ಕಾಗಿ ನಾನು ರಾಜಕೀಯ ಬಲಿದಾನ ಆಗಲು ನಾನು ಸಿದ್ಧ. ಕುಟುಂಬ ರಾಜಕಾರಣದ ವಿರುದ್ಧ ಕೇಂದ್ರದ ಗಮನ ಸೆಳೆಯುಲು ನಾನು ಸ್ಪರ್ಧೆ ಮಾಡುತ್ತಿದ್ದೇನೆ. ನಾನು ಅಭಿವೃದ್ಧಿಗೆ ಎಷ್ಟು ಒತ್ತು ನೀಡುತ್ತೇನೆ. ನಾನು ಏನು ಅನ್ನೋದು ಜಿಲ್ಲೆಯ ಜನತೆಗೆ ಗೂತ್ತಿದೆ. ಜಿಲ್ಲೆಯ ಶೇ 70 ರಷ್ಟು ಬಿಜೆಪಿ ಕಾರ್ಯಕರ್ತರು ನನ್ನ ಜೊತೆ ಇದ್ದಾರೆ. ಇದರಿಂದ ಸಂಸದರು ಅವರ ಮನೆಗೆ ಹುಡುಕಿಕೊಂಡು ಹೋಗುತ್ತಿದ್ದಾರೆ. ಕಾರ್ಯಕರ್ತರಿಗೆ ಬೆಲೆ ಬಂದಂತೆ ಆಗಿದೆ ಎಂದು ವಿವರಿಸಿದರು.
ಮೋದಿ ಫೋಟೊ ಬಳಕೆ ಕೋರ್ಟ್ ಆದೇಶಕ್ಕೆ ಬದ್ಧ: ಪ್ರಧಾನ ಮಂತ್ರಿ ನರೇಂದ್ರ ಮೋದಿ ನನ್ನ ಎದೆಯಲ್ಲಿ ಇದ್ದಾರೆ. ಒಂದು ವೇಳೆ ಚುನಾವಣೆಯಲ್ಲಿ ಫೋಟೊ ಬಳಕೆ ಮಾಡಬೇಡಿ ಎಂದಾದರೆ ನನ್ನ ಹೃದಯದಲ್ಲಿ ಇರುವುದನ್ನು ತೆಗೆದು ಹಾಕಲಾಗದು. ನನ್ನ ಲೆಕ್ಕದಲ್ಲಿ ಮೋದಿನೇ ರಾಮ ಎಂದು ಈಶ್ವರಪ್ಪ ತಿಳಿಸಿದರು.