ಹುಬ್ಬಳ್ಳಿ(ಧಾರವಾಡ): ನಟ ದರ್ಶನ್ ಅವರನ್ನು ಈ ಹಿಂದೆ ರಾಜ್ಯ ಸರ್ಕಾರ ರೈತರ ರಾಯಭಾರಿಯನ್ನಾಗಿ ಮಾಡಿತ್ತು. ಆದರೆ, ಅವರ ಹೆಸರೀಗ ಪ್ರಕರಣವೊಂದರಲ್ಲಿ ಕೇಳಿ ಬಂದಿದೆ. ಸರ್ಕಾರ ರಾಯಭಾರಿಗಳನ್ನು ನೇಮಿಸುವ ಮುನ್ನ ಪರಾಮರ್ಶೆ ನಡೆಸಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದರ್ಶನ್ ಚಲನಚಿತ್ರ ನಟ. ಸಮಾಜದಲ್ಲಿ ಒಂದು ಸ್ಥಾನಕ್ಕೆ ಬಂದ ಮೇಲೆ ಮಾದರಿ ನಡೆ ಅನುಸರಿಸಬೇಕಿತ್ತು. ಇಂತಹ ಪ್ರಕರಣದಲ್ಲಿ ಭಾಗಿಯಾಗಿದ್ದು ಸರಿಯಲ್ಲ ಎಂದರು.
ನಟರು ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕು. ಆದರೆ, ಇತ್ತೀಚಿನ ಬೆಳವಣಿಗೆಗಳು ರಾಜ್ಯವೇ ತಲೆತಗ್ಗಿಸುವಂತಿವೆ. ಯಾರನ್ನು ನಂಬಬೇಕು ಯಾರನ್ನು ಬಿಡಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಮುಂದಾದರೂ ಕೂಡಾ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವವರು ಉತ್ತಮ ದಾರಿಯಲ್ಲಿ ನಡೆದು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಲಿ. ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರೈತರು ಬೆಳೆದ ಆಹಾರ ಧಾನ್ಯಗಳಿಗೆ ಕನಿಷ್ಠ ಬೆಂಬಲ ಬೆಲೆ, ಖರೀದಿ ಕೇಂದ್ರದ ಅನುದಾನವನ್ನು ನೂತನ ಕೇಂದ್ರ ಆಹಾರ ಸಚಿವ ಪ್ರಹ್ಲಾದ್ ಜೋಶಿ ಹೆಚ್ಚಿಸುವಲ್ಲಿ ಕ್ರಮ ಕೈಗೊಳ್ಳಬೇಕು. ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿಗೊಳಿಸಿ ರಾಜ್ಯಕ್ಕಾಗುವ ಅನ್ಯಾಯ ತಪ್ಪಿಸಲಿ ಎಂದರು.
ರೈತರು ಬೆಳೆದ ಆಹಾರ ಧಾನ್ಯಗಳ ಎಂಎಸ್ಪಿ ಖರೀದಿ ಅನುದಾನದಲ್ಲಿ ರಾಜ್ಯಕ್ಕೆ ನೀಡುವ ಪ್ರಮಾಣ ಏರಿಸಬೇಕು. ಪಂಜಾಬ್, ಹರಿಯಾಣ, ತೆಲಂಗಾಣ ರಾಜ್ಯಗಳಲ್ಲಿ ಹೋಬಳಿ ಮಟ್ಟದಲ್ಲಿ ಖರೀದಿ ಕೇಂದ್ರಗಳನ್ನು ತೆರೆದು ಧಾನ್ಯಗಳನ್ನು ರೈತರಿಂದ ಶೇ 45ರಷ್ಟು ಖರೀದಿ ಮಾಡುತ್ತಾರೆ. ಆದರೆ ಕರ್ನಾಟಕದಲ್ಲಿ ಶೇಕಡಾ ಮೂರರಷ್ಟು ಎಂಎಸ್ಪಿ ಕೇಂದ್ರಗಳ ಮೂಲಕ ಖರೀದಿಸುತ್ತಾರೆ. ಕೇಂದ್ರ ಸರ್ಕಾರ ಖರೀದಿ ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ. ಈ ತಾರತಮ್ಯ ನೀತಿಯಿಂದ ರಾಜ್ಯದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ತಿಳಿಸಿದರು.
ಕಬ್ಬು ಹಾಗೂ ಸಕ್ಕರೆ ಉದ್ದಿಮೆಯನ್ನು ಡಿಜಿಟಲೀಕರಣ ಮಾಡಿ ಆ್ಯಪ್ ಮೂಲಕ ವಹಿವಾಟು ನಡೆಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿ. 25,000 ಕೋಟಿ ಹಣಕಾಸು ವಹಿವಾಟು ನಡೆಸುವ ಸಕ್ಕರೆ ಉದ್ದಿಮೆ ಡಿಜಿಟಲೀಕರಣ ಮಾಡಿ ಕಬ್ಬು ಬೆಳೆಗಾರರ, ರೈತರ ಜೊತೆ ದ್ವಿಪಕ್ಷೀಯ ಒಪ್ಪಂದ ಮಾಡಿಕೊಂಡು ಕಬ್ಬಿನ ತೂಕ ಸಂದೇಶ, ಕಬ್ಬಿನ ಹಣ ಪಾವತಿ, ಸಕ್ಕರೆ ಇಳುವರಿ ಸಂದೇಶ ನೀಡುವ ಆ್ಯಪನ್ನು ಈಗಾಗಲೇ ಸಿದ್ದಗೊಳಿಸಲಾಗಿದೆ. ಹೀಗಿದ್ದರೂ ರಾಜ್ಯ ಸರ್ಕಾರ ಏಕೆ ಜಾರಿ ಮಾಡಿಲ್ಲ?. ಸಕ್ಕರೆ ಕಾರ್ಖಾನೆಗಳ ಒತ್ತಡಕ್ಕೆ ಮಣಿದು ರೈತರಿಗೆ ವ್ಯವಸ್ಥಿತ ವಂಚನೆ ನಡೆಸಲು ಸಹಕಾರ ನೀಡುತ್ತಿದೆಯೇ? ಎಂಬ ಅನುಮಾನ ಮೂಡಿಸುತ್ತಿದೆ ಎಂದರು.
ಕಳೆದ ಎಂಟು ತಿಂಗಳಿಂದ ಸಕ್ಕರೆ ಕಾರ್ಖಾನೆಗಳು ಸುಮಾರು 700 ಕೋಟಿ ರೂ. ರೈತರಿಗೆ ಪಾವತಿಸಿಲ್ಲ. ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇದ್ದರೆ ಇಂತಹ ಕಾರ್ಖಾನೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಿ. ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಿ ಎಂದು ಆಗ್ರಹಿಸಿದರು.
ಅತ್ಯಂತ ಅಮಾನುಷ ಘಟನೆ- ಪ್ರಮೋದ್ ಮುತಾಲಿಕ್: ದರ್ಶನ್ ಒಬ್ಬ ಶ್ರೇಷ್ಠ ನಟ. ಅವರ ನಟನೆಗೆ ನನ್ನ ಸೆಲ್ಯೂಟ್ ಇದೆ. ಅವರೊಂದಿಗೆ ನಾನು ಒಂದೇ ವೇದಿಕೆಯಲ್ಲಿ ಕುಳಿತು ಸಂಗೊಳ್ಳಿ ರಾಯಣ್ಣ ಸಿನಿಮಾ ನೋಡಿದ್ದೇನೆ. ಆದರೆ ಈಗ ನಡೆದಿರುವ ಘಟನೆ ಅತ್ಯಂತ ಅಮಾನುಷವಾಗಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದರು.
ಅಭಿಮಾನ ಅಭಿನಯಕ್ಕೆ ಮಾತ್ರ ಇರಲಿ: ದರ್ಶನ್ ಅವರ ನಟನೆ ಬೇರೆ, ವರ್ತನೆ ಬೇರೆ ಆಗಿದೆ. ಈ ವರ್ತನೆ ಕೀಳುಮಟ್ಟದ್ದು. ಈ ರೀತಿ ಯಾರಿಗೂ ಆಗಬಾರದು. ಪೊಲೀಸರು ಕೂಡಲೇ ಕ್ರಮ ಕೈಗೊಂಡಿದ್ದಾರೆ. ಅಭಿಮಾನಿಗಳ ಅಭಿಮಾನ ನಟರ ಅಭಿನಯಕ್ಕೆ ಮಾತ್ರ ಇರಬೇಕು ಎಂದು ಕಿವಿಮಾತು ಹೇಳಿದರು.
ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆಗೈದ ಸ್ಥಳಕ್ಕೆ ದರ್ಶನ್ ಕರೆದೊಯ್ದು ಮಹಜರು ನಡೆಸಿದ ಪೊಲೀಸರು - Renukaswamy Murder Case