ಧಾರವಾಡ: ಬರಗಾಲದ ಬೇಗೆಯಿಂದ ಬಳಲುತ್ತಿರುವ ರೈತರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು, ಮೇವು ಸಿಗುತ್ತಿಲ್ಲ. ಹಳ್ಳಿಗಳಲ್ಲಿ ಮತ ಕೇಳಲು ಬರುವ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ಛೀಮಾರಿ ಹಾಕಿ ಸ್ವಾಗತ ಕೋರಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ ಕರೆ ನೀಡಿದರು.
ಈ ಕುರಿತು ಉಳವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಸಭೆ ಮಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬರಗಾಲ ಕಾಡುತ್ತಿದೆ. ಹಳ್ಳಿಗಳಲ್ಲಿ ಕುಡಿಯುವ ನೀರು, ದನಗಳಿಗೆ ಮೇವು ಸಿಗುತ್ತಿಲ್ಲ. ರಾಜಕೀಯ ಪಕ್ಷಗಳು ಅಧಿಕಾರ ಹಿಡಿಯಲು ನಾನಾ ಕಸರತ್ತು ಮಾಡುತ್ತಿವೆ. ಅಧಿಕಾರಿಗಳು ಚುನಾವಣಾ ಗುಂಗಿನಲ್ಲಿದ್ದಾರೆ. ರೈತರು ಸೊರಗುತ್ತಿದ್ದಾರೆ. ಹಳ್ಳಿಗಳಿಗೆ ಮತ ಕೇಳಲು ಬರುವ ರಾಜಕೀಯ ಪಕ್ಷಗಳಿಗೆ ಮತ್ತು ಅಭ್ಯರ್ಥಿಗಳಿಗೆ ಛೀಮಾರಿ ಹಾಕಿ ಸ್ವಾಗತಿಸುವ ಮೂಲಕ ಸಮಸ್ಯೆ ಬಗ್ಗೆ ಗಮನ ಸೆಳೆಯಬೇಕು ಎಂದು ಹೇಳಿದರು.
ದೇಶದಲ್ಲಿ 70ರಷ್ಟು ಇರುವ ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಶಾಸನಬದ್ಧ ಬೆಲೆ ನಿಗದಿ ಮಾಡಿ ಎಂದರೆ ರೈತರ ಮೇಲೆ ಗೋಲಿಬಾರ್ ಮಾಡುತ್ತಾರೆ. ಆದರೆ ಶೇಕಡ 2 ರಷ್ಟು ಇರುವ ಸರ್ಕಾರಿ ನೌಕರರಿಗೆ 27 ರಷ್ಟು ಸಂಬಳ ಏರಿಕೆ ಮಾಡಬೇಕು ಎನ್ನುವ ವರದಿ ಸಲ್ಲಿಸುತ್ತಾರೆ. ಇಂತಹ ಪುರುಷಾರ್ಥಕ್ಕೆ ರೈತರು ಎಂಪಿಗಳನ್ನು ಗೆಲ್ಲಿಸಬೇಕೆ?.. ದೇಶದಲ್ಲಿ ಅನ್ನ ನೀಡುವ ರೈತನನ್ನು ಅನಾಥರನ್ನಾಗಿ ಮಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ವರ್ಷಾನುಕಾಲ ಹೋರಾಟ ಮಾಡಿದ ರೈತರ ಒತ್ತಾಯಕ್ಕೆ ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮಾಡಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಎಂಎಸ್ಪಿ ಗ್ಯಾರೆಂಟಿ ಕಾನೂನು ಜಾರಿ ಮಾಡುತ್ತೇವೆ, ಸಾಲ ಮನ್ನಾ ಮಾಡುತ್ತೇವೆ ಎಂದು ಘೋಷಣೆ ಮಾಡಿದೆ. ಈ ಬಗ್ಗೆ ಬಿಜೆಪಿ ಅಥವಾ ಪ್ರಧಾನಿ ಪ್ರತಿಕ್ರಿಯೆ ನೀಡದಿದ್ದರೆ ದೇಶದ ರೈತರು ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾಗುತ್ತದೆ ಎಂದು ಶಾಂತಕುಮಾರ್ ಎಚ್ಚರಿಸಿದರು.
ಬರಗಾಲದ ಸಂಕಷ್ಟದಲ್ಲಿರುವ ಕಬ್ಬು ಸರಬರಾಜು ರೈತರಿಗೆ ಸಕ್ಕರೆ ಕಾರ್ಖಾನೆಗಳು ಮೂರು ತಿಂಗಳಿಂದ ಹಣ ಕೊಟ್ಟಿಲ್ಲ. ರಾಜಕೀಯ ಪಕ್ಷಗಳ ಎಂಎಲ್ಎ ಮತ್ತು ಮಂತ್ರಿಗಳೇ ಬಾಕಿ ಉಳಿಸಿಕೊಂಡಿದ್ದಾರೆ. ಇವರಿಗೆ ನಾಚಿಕೆ ಇಲ್ಲವೇ ಎಂದು ಪ್ರಶ್ನಿಸಿದರು. ಒಂದು ವಾರದಲ್ಲಿ ಹಣ ನೀಡದಿದ್ದರೆ ಕಾರ್ಖಾನೆಗಳಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ರವಾನಿಸಿದರು.
ರಾಜ್ಯ ಸರ್ಕಾರ ಗ್ಯಾರಂಟಿ ಗುಂಗಿನಲ್ಲಿ ತೇಲಾಡುತ್ತಿದೆ. ರೈತರು ಬಲಿ ಪಶುಗಳಾಗುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಚುನಾವಣೆ ಗುಂಗಿನಲ್ಲಿ ನಿರತರಾದರೆ ರೈತರ ಗತಿ ಏನು. ರೈತರ ಸಂಕಷ್ಟ ರಾಜಕೀಯ ಪಕ್ಷಗಳಿಗೆ ಅರಿವಾದರೆ ರೈತರಿಗೆ ನ್ಯಾಯ ಸಿಗಲು ಸಾಧ್ಯ ಎಂದು ಹೇಳಿದರು.
ಓದಿ: ನೀರಿನ ದೂರುಗಳಿಗೆ ತಕ್ಷಣ ಸ್ಪಂದಿಸಬೇಕು, ನಿಯಮ ಪಾಲಿಸದ ಟ್ಯಾಂಕರ್ಗಳ ವಿರುದ್ಧ ಶಿಸ್ತು ಕ್ರಮ: ಸಿಎಂ ಸಿದ್ದರಾಮಯ್ಯ