ಹಾಸನ: ಸಿದ್ದರಾಮಯ್ಯ ಮುಖದಲ್ಲಿ ಪಾಪಪ್ರಜ್ಞೆ ಯಾವ ರೀತಿ ಕಾಡುತ್ತಾ ಇದೆ ಎನ್ನುವುದು ಅವರು ಮಾಧ್ಯಮದ ಮುಂದೆ ಕುಳಿತಾಗ ಗೊತ್ತಾಗುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಮುಡಾ ನಿವೇಶನ ಹಂಚಿಕೆ ವಿವಾದ ಮುಂದಿಟ್ಟು ಸಿಎಂ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಧಾನಸಭೆಯಲ್ಲಿ ನಿಮ್ಮ ಉತ್ತರ ಇದೆಯಲ್ಲಾ, ಹಿಂದೆ ಯಾವ ರೀತಿ ಉತ್ತರ ಕೊಡುತ್ತಿದ್ದಿರಿ? ಮೊನ್ನೆ ಯಾವ ರೀತಿ ನಡೆದುಕೊಂಡಿರಿ? ಎಂದು ಅವಲೋಕಿಸಿ ನೋಡಿ. ಕಳೆದ ಒಂದು ಕಾಲ ವರ್ಷದಿಂದ ಆಡಳಿತ ನಡೆಸುತ್ತಿದ್ದಾರೆ. 2010, 2011 ಇಸವಿಯದ್ದು ಈಗ ಮಾತನಾಡುತ್ತಿದ್ದೀರಿ, ಅವತ್ತು ನಿಮ್ಮ ಗಮನಕ್ಕೆ ಬಂದಿರಲಿಲ್ಲವಾ? ನೀವು ಮಾಡಿರುವ ಅಕ್ರಮಗಳನ್ನು ಮುಚ್ಚಿಕೊಳ್ಳಲು ಈಗ ತನಿಖೆ ಮಾಡಿಸುತ್ತೇವೆ ಎಂದು ಹೇಳುತ್ತಿದ್ದೀರಾ? ನಿಮ್ಮ ಈ ಸರ್ಕಾರದ ಪಾಪದ ಕೊಡ ತುಂಬಿದೆ ಎಂದು ಕಿರಿಕಾರಿದರು.
ಯಾವ ತನಿಖೆ ನಡೆಸಿ ಯಾರ ಮೇಲೆ ಕ್ರಮ ತಗೋತಿರಿ? ಜನರು ನನಗೆ ಸ್ವತಂತ್ರವಾದ ಸರ್ಕಾರ ಕೊಡಲಿಲ್ಲ. ಹೀಗಾಗಿ ನನಗೆ ಕೆಲವು ವರದಿಗಳನ್ನು ಕೊಡಲು ಆಗಲಿಲ್ಲ. ಮೈಸೂರು ಮುಡಾದಲ್ಲಿ ಅಷ್ಟೆಲ್ಲಾ ತಪ್ಪು ಮಾಡಿ ನನ್ನ ಬಾಮೈದ ತಪ್ಪು ಮಾಡಿದ್ದಾನೆ ಅಂತ ಅವರ ಮೇಲೆ ಹೇಳುತ್ತಿದ್ದಾರೆ. ಆ ಭೂಮಿ ನಿಮ್ಮ ಬಾಮೈದ ತೆಗೆದುಕೊಳ್ಳಲು ಅವಕಾಶ ಇತ್ತಾ? ಅದು ದಲಿತರಿಗೆ ಸೇರಿದ ಭೂಮಿ ಸಿದ್ದರಾಮಯ್ಯ ಅವರೇ. ನಿಮ್ಮ ಮುಡಾದಲ್ಲಿ ಯಾರದ್ದೋ ಜಮೀನನ್ನು, 62 ಕೋಟಿ ರೂ. ಕೊಟ್ಟರೆ ಪುಕ್ಸಟ್ಟೆ ಬಿಟ್ಟುಕೊಡ್ತೀರಾ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
1992ರಲ್ಲಿ ಫೈನಲ್ ನೋಟಿಫಿಕೇಷನ್ ಆಗಿದೆ. 1998ರಲ್ಲಿ ಭೂ ಮಾಲೀಕರು ಬದುಕೇ ಇಲ್ಲ. ಹೀಗಿರುವಾಗ ಡಿನೋಟಿಫಿಕೇಷನ್ ಮಾಡಿ ಎಂದು ಅರ್ಜಿ ಕೊಟ್ಟವರು ಯಾರು? ಮೂಲ ಮಾಲೀಕರು ತೀರಿಕೊಂಡಿದ್ದು ಯಾವಾಗ? ಡಿನೋಟಿಫಿಕೇಷನ್ ಮಾಡಿ ಅಂತ ಸ್ವರ್ಗದಿಂದ ಅರ್ಜಿ ಕೊಟ್ಟಿದ್ರಾ? ಆ ಜಮೀನನ್ನು ನಿಮ್ಮ ಬಾಮೈದ ಖರೀದಿ ಮಾಡಿ ದಾನ ಕೊಟ್ಟ ಎಂದು ಏನೆಲ್ಲಾ ಡ್ರಾಮಾ ಮಾಡುತ್ತೀರಾ ಎಂದು ಹೆಚ್ಡಿಕೆ ವ್ಯಂಗ್ಯವಾಡಿದರು.
ನನ್ನದು ಸೈಟ್ ಇದೆ ಅಂತಾ ಚರ್ಚೆ ಆಗಿದೆ. ನೂರಾರು ಬಾರಿ ಹೇಳಿದ್ದೇನೆ ನನ್ನದು ತೆರೆದ ಪುಸ್ತಕ ಅಂತ. ನನಗೆ 1985ರಲ್ಲಿ 21 ಸಾವಿರ ಅಡಿ ಇಂಡಸ್ಟ್ರಿಯಲ್ ಲೇಔಟ್ ಹಂಚಿಕೆ ಮಾಡಿ 40 ವರ್ಷ ಆಗಿದೆ. ಈಗ ತೆಗಿತಿದ್ದೀರಿ ಅಲ್ವಾ, ತೆಗಿರಿ, ನನಗೆ ಹಂಚಿಕೆಯಾಗಿದ್ದಕ್ಕೆ ಶುಲ್ಕ ಕಟ್ಟಿದ್ದೀನಿ. ನನಗೆ ಅಲಾಟ್ ಆಗಿರುವ ಜಾಗದಲ್ಲಿ ಯಾವನೋ ಬಿಲ್ಡಿಂಗ್ ಕಟ್ಟಿಕೊಂಡಿದ್ದಾನೆ. ಆ ಬಿಲ್ಡಿಂಗ್ ಕಟ್ಟಿರುವುದಕ್ಕೆ ಮತ್ತೆ ಅರ್ಜಿ ಹಾಕುವುದು ಬೇಡ ಅಂದುಕೊಂಡಿದ್ದೆ. ಆದರೆ ನನ್ನ ಸ್ನೇಹಿತರು ನನ್ನ ಗಮನಕ್ಕೆ ಬಾರದೆ ಸಹಿ ಹಾಕಿಸಿಕೊಂಡು ಹೋಗಿದ್ದಾರೆ. ಇಲ್ಲಿಯವರೆಗೆ ಯಾವುದೇ ಕಮ್ಯೂನಿಕೇಷನ್ ನನಗೆ ಬಂದಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.
ಮುಖ್ಯಮಂತ್ರಿಗಳೇ ದಯಮಾಡಿ ಹೇಳ್ತಿನಿ. ಯಾವ್ಯಾವ ಮಂತ್ರಿಗಳು ಹೇಳಿಕೆ ಕೊಡ್ತಿದ್ದಾರೆ ಜನರ ಮುಂದೆ ಇಟ್ಟುಬಿಡಿ. ವಿಷಯ ತಿಳಿದುಕೊಂಡು, ದಾಖಲೆ ಹಿಡಿದುಕೊಂಡು ಮಾತಾಡಬೇಕು. ಮುಡಾದ್ದು ದಾಖಲೆ ಸಮೇತ ಮಾತನಾಡುತ್ತಿದ್ದೇವೆ ಎಂದು ಕಿಡಿಕಾರಿದರು.
ನಾನು ಕರ್ನಾಟಕಕ್ಕೆ ಬರ್ತೀನಿ ಎಂದ್ರೆ ಅವರಿಗೆ ಕೈಕಾಲು ನಡುಗುತ್ತೆ: ಸಕಲೇಶಪುರ ತಾಲ್ಲೂಕಿನ, ದೊಡ್ಡತಪ್ಪಲು ಗ್ರಾಮದಲ್ಲಿ ಭೂ ಕುಸಿತವಾಗಿರುವ ಸ್ಥಳಕ್ಕೆ ಭೇಟಿ ಬಳಿಕ ಮಾತನಾಡಿದ ಕುಮಾರಸ್ವಾಮಿ ಅವರು, ಕರ್ನಾಟಕಕ್ಕೆ ನಾನು ಬರುವುದನ್ನೇ ಸಹಿಸಲ್ಲ ಅಂದರೆ ನನ್ನಿಂದ ಏನು ನಿರೀಕ್ಷೆ ಮಾಡ್ತಾರೆ? ನಾನು ಬರಲೇಬಾರದು ಎನ್ನುವ ರೀತಿ ಹೇಳಿಕೆ ನೀಡುತ್ತಿದ್ದಾರೆ. ಮಂಡ್ಯಕ್ಕೆ ಹೋದರೂ ಬೇಡ ಅಂತಾರೆ, ಉತ್ತರ ಕರ್ನಾಟಕ ಹೋಗ್ತಿನಿ ಅಂದರೆ ಅಲ್ಲಿಗೂ ಬೇಡ ಅಂತಾರೆ. ಸದ್ಯ ಹಾಸನಕ್ಕೆ ಬರಬೇಡಿ ಅನ್ನಲಿಲ್ಲ ಎಂದು ಗೇಲಿ ಮಾಡಿದರು.
ನಾನು, ಅಶೋಕ್ ಒಟ್ಟಿಗೆ ಬಂದಿದ್ದೇವೆ. ಇಲ್ಲಿ ಜಿಲ್ಲಾಡಳಿತ ಸೂಕ್ಷ್ಮವಾಗಿ ನೋಡಲು ಸ್ವಲ್ಪ ಸಹಕಾರ ಕೊಟ್ಟಿದ್ದಾರೆ. ನಿನ್ನೆ ಐದು ಕಿಲೋಮೀಟರ್ ಹಿಂದೆಯೇ ತಡೆಗೋಡೆ ಇಟ್ಟು ಏನೂ ಚಿತ್ರೀಕರಣ ಮಾಡದ ರೀತಿ ಮಾಧ್ಯಮದವರಿಗೆ ಆದೇಶ ಮಾಡಿದ್ದರು. ನಾನು ಯಾರನ್ನೂ ಟೀಕೆ ಮಾಡಲು ಹೋಗಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಪರಸ್ಪರ ವಿಶ್ವಾಸದಲ್ಲಿ ಕೆಲಸ ಮಾಡಬೇಕು. ಪಾಪ ಡಿ.ಕೆ. ಶಿವಕುಮಾರ್ ಅವರು ಮಿಲಿಟರಿ ತರಬೇಕು ಎಂದು ಹೇಳಿದ್ದಾರೆ. ಈ ರಾಜ್ಯದಲ್ಲಿ ದರೋಡೆ ನಡೆಯುತ್ತಿದೆ. ಟೆರರಿಸ್ಟ್ ಆ್ಯಕ್ಟಿವಿಟಿಗಿಂತಲೂ ದರೋಡೆ ಚೆನ್ನಾಗಿ ನಡೆಯುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹೆಚ್ಡಿಕೆ ಆರೋಪಿಸಿದರು.
ಇದನ್ನೂ ಓದಿ: ನಾವು ಯಾವುದೇ ಬೆದರಿಕೆಯೊಡ್ಡಿಲ್ಲ, ಸತ್ಯಾಂಶ ಜನರ ಮುಂದಿಟ್ಟಿದ್ದೇವೆ: ಸಿಎಂ ಸಿದ್ದರಾಮಯ್ಯ - CM Siddaramaiah