ಬೆಂಗಳೂರು: ಪಾರದರ್ಶಕ ಚುನಾವಣೆ ನಡೆಸುವ ಸಲುವಾಗಿ ಕೂಡಲೇ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಅರೆಸೇನಾ ಪಡೆ ತುಕಡಿಗಳನ್ನು ನಿಯೋಜಿಸಬೇಕು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರನ್ನು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದರು.
ಪದ್ಮನಾಭನಗರದ ದೇವೇಗೌಡರ ನಿವಾಸದಲ್ಲಿ ಇಂದು ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕೆಲವು ಅಧಿಕಾರಿಗಳನ್ನು ತಕ್ಷಣವೇ ವರ್ಗಾವಣೆ ಮಾಡಬೇಕು ಎಂದು ಆಯೋಗವನ್ನು ಒತ್ತಾಯಿಸಿದ್ದಾರೆ.
ಕೇಂದ್ರ ಆಯೋಗ ಏನು ಮಾಡುತ್ತಿದೆ?: ಕರ್ನಾಟಕದಲ್ಲಿ ಚುನಾವಣೆ ಆಯೋಗ ಇದೆಯಾ? ಕೇಂದ್ರ ಆಯೋಗ ಏನು ಮಾಡುತ್ತಿದೆ? ಚುನಾವಣೆ ಘೋಷಣೆಯಾದ ನಂತರ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಏನು ನಡೆಯುತ್ತಿದೆ ಎನ್ನುವುದು ಆಯೋಗಕ್ಕೆ ಗೊತ್ತಿಲ್ಲವೇ? ಆಯೋಗದ ಸಿಬ್ಬಂದಿ ಏನು ಮಾಡುತ್ತಿದ್ದಾರೆ? ಭಾನುವಾರ ರಾತ್ರಿ ಈ ಕ್ಷೇತ್ರದಲ್ಲಿ ಏನು ನಡೆದಿದೆ ಎನ್ನುವುದನ್ನು ನೀವು ನೋಡಬೇಕು ಎಂದು ಆಯೋಗವನ್ನು ಒತ್ತಾಯ ಮಾಡಿದ ಕುಮಾರಸ್ವಾಮಿ, ಕಾಂಗ್ರೆಸ್ ಅಭ್ಯರ್ಥಿ ಮತದಾರರಿಗೆ ಹಂಚಲು ಇರಿಸಲಾಗಿದ್ದ ಕುಕ್ಕರ್ಗಳ ಲೋಡ್ ಇದ್ದ ಲಾರಿಗಳ ಚಿತ್ರಗಳು, ವಿಡಿಯೋಗಳನ್ನು ಮಾಧ್ಯಮಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.
100 ನಿಮಿಷದಲ್ಲಿ ಕ್ರಮ ಎಂದಿರಿ, ಇಲ್ಲಿ 48 ಗಂಟೆ ಆಗಿದೆ! ಚುನಾವಣಾ ದಿನಾಂಕ ಘೋಷಣೆಯಾದ ದಿನದಿಂದ ಕ್ಷೇತ್ರದಲ್ಲಿ ಚುನಾವಣಾ ಅಕ್ರಮಗಳು ಮಿತಿಮೀರಿವೆ. ಕುಕ್ಕರ್ ಮತ್ತು ಹಣವನ್ನು ಅವ್ಯಾಹತವಾಗಿ ಹಂಚಲಾಗುತ್ತಿದೆ. ಮರಳವಾಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮತದಾರರಿಗೆ ಹಂಚಲು ಇರಿಸಿದ್ದ ಕುಕ್ಕರ್ʼಗಳನ್ನು ಲೋಡ್ ಮಾಡಲಾಗಿದ್ದ ಎರಡು ಲಾರಿಗಳನ್ನು ಜೆಡಿಎಸ್ ಕಾರ್ಯಕರ್ತರು ಹಿಡಿದಿದ್ದಾರೆ. ಮಾಧ್ಯಮಗಳು ಕೂಡ ಅದನ್ನು ತೋರಿಸಿ ವರದಿ ಮಾಡಿವೆ. ದೇಶದಲ್ಲಿ ಇಂಥ ಅಕ್ರಮ ಎಲ್ಲೇ ನಡೆದರೂ ಅದರ ವಿಡಿಯೋ ಅಥವಾ ಫೋಟೋ ತೆಗೆದು ಕಳುಹಿಸಿದರೆ ಕೇವಲ ನೂರು ನಿಮಿಷದಲ್ಲಿ ಕ್ರಮ ಜರುಗಿಸಲಾಗುತ್ತದೆ ಎಂದು ಮುಖ್ಯ ಚುನಾವಣಾ ಆಯುಕ್ತರು ತಮ್ಮ ಮೂರು ಗಂಟೆ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದರು. ಈ ಅಕ್ರಮದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿ 48 ಗಂಟೆ ಕಳೆದಿದೆ. ಇನ್ನೂ ಕ್ರಮ ಆಗಿಲ್ಲ ಯಾಕೆ? ಎಂದು ಕುಮಾರಸ್ವಾಮಿ ಅವರು ಆಯೋಗವನ್ನು ಪ್ರಶ್ನಿಸಿದರು.
ಈ ಬಗ್ಗೆ ತಹಶೀಲ್ದಾರ್ ಅವರಿಗೆ ದೂರು ಕೊಟ್ಟರೆ, ಹೌದಾ? ನನ್ನ ಗಮನಕ್ಕೆ ಬಂದೇ ಇಲ್ಲ ಎನ್ನುತ್ತಾರೆ. ವಾಣಿಜ್ಯ ತೆರಿಗೆ ಇಲಾಖೆಗೆ ಮಾಹಿತಿ ಕೊಟ್ಟರೆ ಜಿಲ್ಲಾಧಿಕಾರಿಗೆ ತಿಳಿಸುತ್ತೇವೆ ಎನ್ನುತ್ತಾರೆ. ಜಿಲ್ಲಾಧಿಕಾರಿ ಅವರನ್ನು ಪ್ರಶ್ನಿಸಿದರೆ ನಮ್ಮ ಗಮನಕ್ಕೆ ಬಂದಿಲ್ಲ, ಪರಿಶೀಲನೆ ನಡೆಸುತ್ತೇವೆ ಎಂದು ಹಾರಿಕೆಯ ಉತ್ತರ ಕೊಡುತ್ತಾರೆ. ಚುನಾವಣೆ ಎಂದರೆ ಇದೇನಾ? ಈ ಅಕ್ರಮಗಳಿಗೆ ಕಡಿವಾಣ ಹಾಕಲು ಕೂಡಲೇ ಆಯೋಗವು ಕ್ಷೇತ್ರದಲ್ಲಿ ಅರೆಸೇನಾ ಪಡೆಯನ್ನು ನಿಯೋಜಿಸಬೇಕು ಎಂದು ಅವರು ಆಗ್ರಹಿಸಿದರು.
ಮಾಧ್ಯಮಗಳ ಮೂಲಕ ಆಯೋಗಕ್ಕೆ ಮನವಿ ಒತ್ತಾಯ ಮಾಡುವುದಷ್ಟೇ ಅಲ್ಲ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಚುನಾವಣಾ ಅಕ್ರಮಗಳ ಕುರಿತು ದಾಖಲೆ ಸಮೇತ ಚುನಾವಣಾ ಆಯೋಗಕ್ಕೆ ದೂರು ಕೊಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿಗಳು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಡಿಕೆಶಿ ಮೇಲೆ ನೇರ ವಾಗ್ದಾಳಿ: ಚುನಾವಣೆ ನಡೆಸುವುದು ಹೇಗೆ ಎನ್ನುವುದು ನನಗೂ ಗೊತ್ತಿದೆ ಮಿಸ್ಟರ್ ಡಿಕೆ ಶಿವಕುಮಾರ್. 2002ರ ಚುನಾವಣೆಯನ್ನು ನಿಮಗೆ ನೆನಪು ಮಾಡಿಕೊಡುತ್ತೇನೆ. ಮೈಸೂರು, ಶಿಡ್ಲಘಟ್ಟ, ದೇವನಹಳ್ಳಿ ಕಡೆಯಿಂದ ನೀವು ಜನರನ್ನು ಕರೆದುಕೊಂಡು ಬಂದು ಕಳ್ಳ ವೋಟು ಹಾಕಿಸಿದ್ದು ಮರೆತಿದ್ದೀರಾ? ಕಳ್ಳ ಮತ ಹಾಕಿಸಲು ಕರೆದುಕೊಂಡು ಬಂದಾಗ ರಾಜರಾಜೇಶ್ವರಿ ನಗರದ ಹೆಬ್ಬಾಗಿಲಲ್ಲಿ ನಾನು ನಿಮ್ಮವರನ್ನು ಹಿಡಿದು ಕೂರಿಸಿದ್ದನ್ನು ಮರೆಯಬೇಡಿ. ನನಗೆ ಚುನಾವಣೆ ಮಾಡುವುದು ಬರುವುದಿಲ್ಲ ಎಂದುಕೊಳ್ಳಬೇಡಿ. ಫೀಲ್ಡಿಗೆ ಇಳಿದರೆ ನಿಮಗಿಂತ ಚೆನ್ನಾಗಿ ಚುನಾವಣೆ ಮಾಡಬಲ್ಲೆ. ಆಗ ನೀವು ಅಧಿಕಾರದಲ್ಲಿ ಇದ್ದಿರಿ. ದೇವೇಗೌಡರನ್ನು ಸೋಲಿಸಲು ಪ್ರಯತ್ನ ಮಾಡಿದಿರಿ. ಆಸ್ಪತ್ರೆಯಿಂದ ನಾನು ವಾಪಸ್ ಬರ್ತಿನಿ, ಅದುವರೆಗೂ ನಿಮ್ಮ ಆಟ ನಡೆಯಲಿ ನೋಡೋಣ ಎಂದ ಕುಮಾರಸ್ವಾಮಿ, ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ನೇರವಾಗಿಯೇ ಟಾಂಗ್ ಕೊಟ್ಟರು.
ನಿಮಗೆ ನಾಚಿಕೆ ಆಗಬೇಕು. ಐದು ಗ್ಯಾರಂಟಿ ಕೊಟ್ಟಿದ್ದೇವೆ ಎಂದು ದಿನವೂ ಹೇಳಿದ್ದೇ ಹೇಳಿದ್ದು. ಮಿಸ್ಟರ್ ಸಿದ್ದರಾಮಯ್ಯ.. ನಿಮ್ಮ ಎರಡು ಸಾವಿರ ರೂಪಾಯಿ ಸಾಮಾನ್ಯ ಜನರ ಜೀವ ಉಳಿಸುತ್ತಿದೆ ಎಂದಾದರೆ ಈಗ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕುಕ್ಕರ್ʼಗಳನ್ನು ಯಾಕೆ ಹಂಚಿಕೆ ಮಾಡುತ್ತಿದ್ದೀರಿ? ನಿಮ್ಮ ಪಕ್ಷಕ್ಕೆ, ನಿಮಗೆ ನಾಚಿಕೆ ಎನ್ನುವುದು ಏನಾದರೂ ಇದೆಯಾ? ಎಂದು ಮಾಜಿ ಮುಖ್ಯಮಂತ್ರಿಗಳ ವಿರುದ್ಧ ತೀವ್ರ ಪ್ರಹಾರ ನಡೆಸಿದರು.
ಚುನಾವಣಾ ಆಯೋಗಕ್ಕೆ ನನ್ನ ನೇರ ಆಗ್ರಹ ಇಷ್ಟೇ. ಕೂಡಲೇ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕಬೇಕು. ತಪ್ಪಿದರೆ ನಾನೇ ಕಾರ್ಯಕರ್ತರರಿಗೆ ಕರೆ ಕೊಡಬೇಕಾಗುತ್ತದೆ. ಕುಕ್ಕರ್ ಎಲ್ಲೆಲ್ಲಿ ಅಡಗಿಸಿಟ್ಟಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕಾಗುತ್ತದೆ. ಆಮೇಲೆ ಕಾರ್ಯಕರ್ತರ ಮೇಲೆ ಈ ಅಧಿಕಾರಿಗಳು ಕೇಸ್ ದಾಖಲಿಸಲಿ ನೋಡೋಣ ಎಂದು ಎಚ್ಚರಿಕೆ ನೀಡಿದರು.
ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಿಂದ ಚುನಾವಣಾ ಅಕ್ರಮಗಳು ಅವ್ಯಾಹತವಾಗಿ ನಡೆಯುತ್ತಿದ್ದು, ಕೂಡಲೇ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಹ ಒತ್ತಾಯಿಸಿದರು.
ಚೆನ್ನೈಗೆ ತೆರಳಿದ ಹೆಚ್ಡಿಕೆ: ಮತ್ತೊಮ್ಮೆ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿರುವ ಕುಮಾರಸ್ವಾಮಿ, ಇಂದು ಸಂಜೆ ಚೆನ್ನೈಗೆ ತೆರಳಿದ್ದಾರೆ. ಮಾ. 21 ರಂದು ಅವರಿಗೆ ಹೃದಯ ಶಸ್ತ್ರಚಿಕಿತ್ಸೆ ನಡೆಯಲಿದೆ. ಇಂದು ಚೆನ್ನೈ ಆಸ್ಪತ್ರೆಯಲ್ಲಿ ಕೆಲ ಆರೋಗ್ಯ ತಪಾಸಣೆ ನಡೆಯಲಿದೆ. ಮಾ. 21ರಂದು ಶಸ್ತ್ರ ಚಿಕಿತ್ಸೆ ನಡೆಯಲಿದ್ದು, 24ರವರೆಗೂ ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ. ಮಾರ್ಚ್ 25ರಂದು ಅವರು ಬೆಂಗಳೂರಿಗೆ ವಾಪಸಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶಸ್ತ್ರ ಚಿಕಿತ್ಸೆ ಬಳಿಕ ವಿಶ್ರಾಂತಿ ಪಡೆದು ಚುನಾವಣೆ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಹಿಂದೆಯೂ ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿ ಹೃದಯಕ್ಕೆ ಸಂಬಂಧಿಸಿದಂತೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಇದನ್ನೂ ಓದಿ: ಆಡಳಿತಾತ್ಮಕವಾಗಿ ಬೆಳಗಾವಿ ನಗರ ಪೊಲೀಸ್ ಇಲಾಖೆಯಲ್ಲಿ ಸುಧಾರಣೆ ತರುವೆ: ಯಡಾ ಮಾರ್ಟಿನ್ ಮಾರ್ಬನ್ಯಾಂಗ್