ರಾಯಚೂರು: ಬಸ್ನಲ್ಲಿ ಬಿಟ್ಟು ಹೋಗಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಪ್ರಯಾಣಿಕನಿಗೆ ಹಿಂತಿರುಗಿಸುವ ಮೂಲಕ ಕೆಎಸ್‌ಆರ್‌ಟಿಸಿ ಕಂಡಕ್ಟರ್ ಹಾಗೂ ಚಾಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಘಟಕ 1ರಲ್ಲಿ ಕೆಲಸ ಕಾರ್ಯ ನಿರ್ವಹಿಸುತ್ತಿರುವ ಚಾಲಕ ಹನುಮಂತರಾಯ ಹಾಗೂ ನಿರ್ವಾಹಕ ಮಂಜುನಾಥ ಅವರು ಬಸ್ನಲ್ಲಿ ದೊರೆತ ಹಣವನ್ನು ಪ್ರಯಾಣಿಕ ಸೋಮಶೇಖರ್ ಪಾಟೀಲ್ ಅವರಿಗೆ ಮರಳಿಸಿದ್ದಾರೆ.
ಹುಬ್ಬಳ್ಳಿಯಿಂದ ಹೈದರಾಬಾದ್ಗೆ ತೆರಳುತ್ತಿದ್ದ ಬಸ್ನಲ್ಲಿ ಸೋಮಶೇಖರ್ ಪಾಟೀಲ್ ಅವರು ಮಾನ್ವಿ ಪಟ್ಟಣದಿಂದ ರಾಯಚೂರಿಗೆ ಬರುತ್ತಿದ್ದರು. ಆದರೆ ರಾಯಚೂರಿನಲ್ಲಿ ಇಳಿಯುವಾಗ ಹಣದ ಚೀಲವನ್ನು ಬಸ್‌ನಲ್ಲಿಯೇ ಬಿಟ್ಟು ಹೋಗಿದ್ದರು. ಬಸ್ ಹೈದರಾಬಾದ್ ತಲುಪಿದ ನಂತರ ಚೀಲವನ್ನು ಗಮನಿಸಿದ ಚಾಲಕ ಹಾಗೂ ನಿರ್ವಾಹಕರು ಪರಿಶೀಲಿಸಿದ್ದು, 2.5 ಲಕ್ಷ ನಗದು ಜೊತೆಯಲ್ಲಿ ಪ್ರಯಾಣಿಕನ ಬ್ಯಾಂಕ್ ಪಾಸ್ಬುಕ್ ಹಾಗೂ ಮೊಬೈಲ್ ನಂಬರ್ ಸಿಕ್ಕಿದೆ. ನಂತರ ಅವರು, ಸೋಮಶೇಖರ್ ಅವರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ಹೈದರಾಬಾದ್‌ನಿಂದ ಇಂದು ಮರಳಿ ಹುಬ್ಬಳ್ಳಿ ಕಡೆ ತೆರಳುವಾಗ ಪ್ರಯಾಣಿಕ ಹಣವನ್ನು ಮರಳಿಸಿ ಪ್ರಮಾಣಿಕತೆ ತೋರಿದ್ದಾರೆ.
ಕಂಡಕ್ಟರ್ ಮಂಜುನಾಥ ನವಲಗುಂದ ಮಾತನಾಡಿ, "ಪ್ರಯಾಣಿಕರೊಬ್ಬರು ನಮ್ಮ ಬಸ್ನಲ್ಲಿ ರಾಯಚೂರಿಗೆ ಬರುತ್ತಿದ್ದರು. ಗಡಿಬಿಡಿಯಲ್ಲಿ ಹಣದ ಚೀಲವನ್ನು ಬಸ್‌ನಲ್ಲಿಯೇ ಬಿಟ್ಟು ಹೋಗಿದ್ದರು. ನಾವು ಹೈದರಾಬಾದ್ಗೆ ತಲುಪಿದ ನಂತರ ಚೀಲವನ್ನು ನೋಡಿದ್ದೆವು. ಪರಿಶೀಲಿಸಿದಾಗ ಎರಡುವರೆ ಲಕ್ಷ ಹಣ ಇತ್ತು. ಜೊತೆಗೆ ಫೋನ್ ನಂಬರ್, ಬ್ಯಾಂಕ್ ಪಾಸ್ಬುಕ್ ಇತ್ತು. ಬಳಿಕ ನಾವು ನಿನ್ನೆ ಅವರನ್ನು ಸಂಪರ್ಕಸಿ ಇಂದು ಬಸ್ ನಿಲ್ದಾಣಕ್ಕೆ ಬರಲು ತಿಳಿಸಿದ್ದೆವು. ಇಂದು ರಾಯಚೂರು ಬಸ್ ನಿಲ್ದಾಣಾಧಿಕಾರಿ ಸಮ್ಮುಖದಲ್ಲಿ ಪ್ರಯಾಣಿಕನಿಗೆ ಹಣವನ್ನು ಮರಳಿಸಿದ್ದೇವೆ" ಎಂದರು.
ಸೋಮಶೇಖರ್ ಪಾಟೀಲ್ ಮಾತನಾಡಿ, "ನಾನು ಮಾನ್ವಿ ಪಟ್ಟಣದಿಂದ ರಾಯಚೂರಿಗೆ ಬಸ್ನಲ್ಲಿ ಪ್ರಯಾಣಿಸಿದ್ದೆ. ಆದರೆ ಹಣವಿದ್ದ ಬ್ಯಾಗ್ ಅನ್ನು ಬಸ್‌ನಲ್ಲಿಯೇ ಬಿಟ್ಟು ರಾಯಚೂರಿನಲ್ಲಿ ಇಳಿದಿದ್ದೆ. ಬ್ಯಾಗ್ನಲ್ಲಿ ಎರಡುವರೆ ಲಕ್ಷ ಹಣವಿತ್ತು. ಬಸ್ ಹೈದರಾಬಾದ್ ತಲುಪಿದ ಬಳಿಕ ಕಂಡಕ್ಟರ್ ಹಾಗೂ ಬಸ್ ಚಾಲಕ ಬ್ಯಾಗ್ ಗಮನಿಸಿ ಅದರಲ್ಲೇ ಸಿಕ್ಕ ನನ್ನ ನಂಬರ್ಗೆ ಕರೆ ಮಾಡಿ ವಿಷಯ ತಿಳಿಸಿದರು. ಇಂದು ರಾಯಚೂರು ಬಸ್ ನಿಲ್ದಾಣಾಧಿಕಾರಿ ಸಮ್ಮುಖದಲ್ಲಿ ನನಗೆ ಹಣವನ್ನು ಮರಳಿಸುವ ಮೂಲಕ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ" ಎಂದು ಹೇಳಿದರು.
ಇದನ್ನೂ ಓದಿ: ರಾಯಚೂರು: 371(ಜೆ) ಸಮರ್ಪಕ ಅನುಷ್ಠಾನಕ್ಕೆ ಆಗ್ರಹಿಸಿ ಪ್ರತಿಭಟನೆ - ARTICLE 371 J