ಶಿವಮೊಗ್ಗ: ಬಿಜೆಪಿಯಿಂದ ಉಚ್ಚಾಟನೆ ಮಾಡುತ್ತಾರೆ ಎಂದು ನಿರೀಕ್ಷಿಸಿದ್ದೆ. ಪಕ್ಷವೇ ಕ್ರಮ ಕೈಗೊಳ್ಳಲಿ ಎಂದು ಕಾಯುತ್ತಿದ್ದೆ. ಇಂತಹ ಯಾವುದೇ ನಿರ್ಧಾರಕ್ಕೆ ನಾನು ಹೆದರುವುದಿಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು, ಪ್ರಧಾನಿ ಮೋದಿ ಅವರನ್ನು ಬೆಂಬಲಿಸುವೆ ಎಂದು ಬಿಜೆಪಿಯಿಂದ ಉಚ್ಚಾಟಿತ, ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದರು.
ಶಿವಮೊಗ್ಗದ ತಮ್ಮ ನಿವಾಸದಲ್ಲಿ ಇಂದು ಮಾತನಾಡಿದ ಅವರು, ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಬಿಜೆಪಿಯಲ್ಲಿದ್ದಾಗಲೇ ಹೇಳಿಕೊಂಡು ಬಂದಿದ್ದೇನೆ. ಈಗ ಪಕ್ಷ ನನ್ನ ವಿರುದ್ಧ ಕ್ರಮ ಕೈಗೊಂಡಿರುವ ಬಗ್ಗೆ ಮಾಹಿತಿ ಇದೆ. ಇನ್ನೂ ನನಗೆ ಯಾವುದೇ ಅಧಿಕೃತ ಪತ್ರ ಸಿಕ್ಕಿಲ್ಲ. ಹೀಗಾಗಿ ನಾನು ಚುನಾವಣೆಗೆ ನಿಲ್ಲುವುದೂ ಸ್ಪಷ್ಟ, ಗೆಲ್ಲುವುದೂ ಸ್ಪಷ್ಟ. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡೋಕೆ ಕೈ ಎತ್ತುತ್ತೇನೆ ಎಂದರು.
ಬಿಜೆಪಿ ಕಾರ್ಯಕರ್ತರು, ಜೆಡಿಎಸ್ ಮತ್ತು ಕಾಂಗ್ರೆಸ್ನವರು ಕೂಡ ನನಗೆ ಬೆಂಬಲ ನೀಡುತ್ತಿದ್ದಾರೆ. ಉಚ್ಚಾಟನೆಯ ಪತ್ರ ನನಗೆ ಇನ್ನೂ ತಲುಪಿಲ್ಲ. ಇದಕ್ಕೆಲ್ಲಾ ನಾನು ಹೆದರಲ್ಲ. ನಾಳೆಯಿಂದ ನನ್ನ ಪ್ರಚಾರ ಇನ್ನೂ ಬಿರುಸಾಗಿ ಮಾಡುವೆ ಎಂದು ಗುಡುಗಿದರು.
ಬಿಜೆಪಿ ಶುದ್ಧೀಕರಣಕ್ಕಾಗಿ ಹೋರಾಟ: ಮಾಜಿ ಸಿಎಂ ಯಡಿಯೂರಪ್ಪ ಮತ್ತು ಅವರ ಕುಟುಂಬದ ಹಿಡಿತದಲ್ಲಿ ಸಿಲುಕಿರುವ ಬಿಜೆಪಿಯನ್ನು ಶುದ್ಧೀಕರಣ ಮಾಡಲು ನಾನು ಈ ಹೋರಾಟ ಮಾಡುತ್ತಿದ್ದೇನೆ. ಜನರು ನನ್ನನ್ನು ಬೆಂಬಲಿಸಿ, ಹೊಗಳುತ್ತಿದ್ದಾರೆ. ನಾನು ಸ್ಪರ್ಧೆ ಮಾಡಿರುವುದು ಸಾಕಷ್ಟು ಜನರಿಗೆ ಖುಷಿ ತಂದಿದೆ. ನನ್ನನ್ನು ಉಚ್ಚಾಟಿಸಿದ ಬಗ್ಗೆ ಯಡಿಯೂರಪ್ಪನವರು ಯಾವ ಮುಖ ಇಟ್ಟುಕೊಂಡು ಪ್ರತಿಕ್ರಿಯಿಸುತ್ತಾರೆ. ಅವರು ನನ್ನ ಕುರಿತು ಮಾತನಾಡಲ್ಲ ಎಂದು ಟೀಕಿಸಿದರು.
ರೈತನ ಚಿಹ್ನೆಯಲ್ಲಿ ಮತ ಕೇಳುವೆ: ಉಚ್ಚಾಟನೆಗೂ ಮೊದಲು ನಾನು ಬಿಜೆಪಿಯ ಜೊತೆಗೆ ಪಕ್ಷೇತರ ಅಭ್ಯರ್ಥಿಯಾಗಿ ನೀಡುವ ಚಿಹ್ನೆಯನ್ನು ಪ್ರದರ್ಶಿಸಿ ಮತ ಕೇಳುವೆ. ಈಗ ಲಭ್ಯವಾಗಿರುವ ರೈತ ಮತ್ತು ಎರಡು ಕಬ್ಬಿನ ಸಂಕೇತದಡಿಯಲ್ಲಿ ಜನರ ಬಳಿ ಹೋಗುವೆ. ರೈತರ ಹೆಸರಿನಲ್ಲಿ ನಾನು ಹೋರಾಟ ಮಾಡಿದ್ದೇನೆ. ಕಮಲ ಚಿಹ್ನೆಯಿಂದ ತಾತ್ಕಾಲಿಕ ಹಿಂದೆ ಸರಿಯುತ್ತಿದ್ದೇನೆ. ಧರ್ಮಕ್ಕೆ ಜಯ ಸಿಗುತ್ತದೆ. ನನ್ನ ಹೋರಾಟಕ್ಕೆ ಜಯ ಸಿಗುತ್ತದೆ. ಬಿಜೆಪಿ ನನಗೆ ತಾಯಿ ಇದ್ದಂತೆ. ಮುಂದೆ ನಾನು ಮತ್ತೆ ಬಿಜೆಪಿಗೆ ಸೇರಿಕೊಳ್ಳುತ್ತೇನೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಸೋಲುವ ಕಾರಣ ಅಲ್ಲಿನ ಕಾರ್ಯಕರ್ತರು ನನಗೆ ಓಟು ಹಾಕ್ತಾರೆ. ಬಿಜೆಪಿಯ ಅನೇಕ ಕಾರ್ಯಕರ್ತರು ಅಭ್ಯರ್ಥಿ ಬಿ.ವೈ.ರಾಘವೇಂದ್ರರಿಗೆ ಮತ ಹಾಕಲ್ಲ. ಈ ವೋಟುಗಳೂ ನನಗೆ ಬರುತ್ತವೆ. ಹೀಗಾಗಿ ನಾನು ಗೆದ್ದೇ ಗೆಲ್ಲುತ್ತೇನೆ. ಜನರು ನಿಮಗೇ ಓಟ್ ಹಾಕುತ್ತೇವೆ ಎಂದು ಆಣೆ ಮಾಡುತ್ತಿದ್ದಾರೆ. ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿಯಲ್ಲಿನ ಹೆಚ್ಚು ಕಾರ್ಯಕರ್ತರು ನನ್ನ ಜೊತೆಗಿದ್ದಾರೆ. ಕಾಂಗ್ರೆಸ್ ಜೆಡಿಎಸ್ನವರು ಕೂಡ ಬೆಂಬಲ ಕೊಟ್ಟಿದ್ದಾರೆ ಎಂದು ಈಶ್ವರಪ್ಪ ಹೇಳಿದರು.
ಇದನ್ನೂ ಓದಿ: ಬಿಜೆಪಿಯಿಂದ ಕೆ.ಎಸ್.ಈಶ್ವರಪ್ಪ 6 ವರ್ಷ ಉಚ್ಚಾಟನೆ - K S Eshwarappa Expelled