ಶಿವಮೊಗ್ಗ: ಮುಡಾ ಹಗರಣದ ಕುರಿತು ಬಿಜೆಪಿ-ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆಯಲ್ಲಿ ನಡೆಯುತ್ತಿರುವ ಆರೋಪ-ಪ್ರತ್ಯಾರೋಪದಲ್ಲಿ ರಾಜಕೀಯ ನಾಯಕರು ಬೆತ್ತಲಾಗುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಟೀಕಿಸಿದ್ದಾರೆ.
ಶಿವಮೊಗ್ಗ ಪ್ರೆಸ್ಟ್ರಸ್ಟ್ನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಭಟನೆ ನಡೆಯುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ. ಯಡಿಯೂರಪ್ಪ, ವಿಜಯೇಂದ್ರ, ಕಾಂಗ್ರೆಸ್ನವರು ಪ್ರತಿದಿನ ಪತ್ರಿಕೆಗಳನ್ನು ಓದಬೇಕು. ಯಾವ ವಿಚಾರಕ್ಕೆ ಪ್ರತಿಭಟನೆ ನಡೆಸಲಾಗುತ್ತಿದೆ ಎಂಬುದೇ ಇವರಿಗೆ ಗೊತ್ತಿಲ್ಲ. ಕೇವಲ ಮುಡಾ ಬಗ್ಗೆ ಪ್ರತಿಭಟನೆ ನಡೆಯದೇ, ವೈಯಕ್ತಿಕ ಟೀಕೆಗಳು ನಡೆಯುತ್ತಿವೆ. ಪರಸ್ಪರ ಆಸ್ತಿಗಳ ಬಗ್ಗೆ ಆರೋಪ-ಪ್ರತ್ಯಾರೋಪ ಮಾಡುತ್ತಿದ್ದಾರೆ. ರಾಜಕೀಯವನ್ನೇ ನಗ್ನಾವಸ್ಥೆಗೆ ತರಲಾಗುತ್ತಿದೆ ಎಂದರು.
ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆಯ ಬಗ್ಗೆ ಡಿ.ಕೆ.ಶಿವಕುಮಾರ್ ಒಪ್ಪಿಕೊಂಡಿದ್ದಾರೆ. ನಾನು ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಿದಾಗ ಹೊಂದಾಣಿಕೆ ರಾಜಕೀಯದ ಬಗ್ಗೆ ಮಾತನಾಡಿದ್ದೆ. ಕಾಂಗ್ರೆಸ್, ಬಿಜೆಪಿ ಹೊಂದಾಣಿಕೆ ರಾಜಕೀಯ ಮಾಡುತ್ತಿದೆ ಎಂದು ಹೇಳಿದ್ದೆ. ಇದು ಈಗ ಸಾಕ್ಷಿ ಸಮೇತ ಸಾಬೀತಾಗಿದೆ. ಎಂದು ವ್ಯಂಗ್ಯವಾಡಿದರು.
ಬಾಂಗ್ಲಾ ಗಲಭೆ: ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಗಳು ಧ್ವಂಸವಾಗುತ್ತಿವೆ. ರಾಷ್ಟ್ರಗೀತೆ ಬರೆದ ರವೀಂದ್ರನಾಥ ಟ್ಯಾಗೂರ್ ಪ್ರತಿಮೆ ನಾಶಪಡಿಸಿದ್ದಾರೆ. ಮಹಿಳೆಯರ ಮೇಲೆ ಹಲ್ಲೆ, ಅತ್ಯಾಚಾರಗಳು ನಡೆಯುತ್ತಿವೆ. ವಿಶ್ವಸಂಸ್ಥೆ ಕೂಡಲೇ ಮಧ್ಯಸ್ಥಿಕೆ ವಹಿಸಬೇಕು. ಭಾರತದಲ್ಲಿ ಕ್ರಿಶ್ಚಿಯನ್ನರು, ಮುಸ್ಲಿಮರು ಅಣ್ಣ ತಮ್ಮಂದಿರಂತೆ ಇದ್ದೇವೆ ಎಂದು ಹೇಳಿದರು.
ಮಹಾನಗರ ಪಾಲಿಕೆಗಳ ಚುನಾವಣೆ: ಮಹಾನಗರ ಪಾಲಿಕೆ ಚುನಾವಣೆಯನ್ನು ತಕ್ಷಣವೇ ಮಾಡಬೇಕು. ಶಿವಮೊಗ್ಗ, ತುಮಕೂರು, ಹುಬ್ಬಳ್ಳಿ ಮಹಾನಗರ ಪಾಲಿಕೆಗಳ ಚುನಾವಣೆ ಕೂಡಲೇ ನಡೆಸಿ. ಮಹಾನಗರ ಪಾಲಿಕೆ ಚುನಾವಣೆಗೆ ಡಿಲಿಮಿಟೇಶನ್ ವಿಚಾರ ಇಲ್ಲ. ಸುಪ್ರೀಂ ಕೋರ್ಟ್ ಚುನಾವಣೆ ನಡೆಸಿ ಎಂದು ಆದೇಶಿಸಿದೆ. ಕೋರ್ಟ್ ತೀರ್ಪಿಗೆ ಬೆಲೆ ಕೊಡಬೇಕು. ಯಾವುದೇ ಕಾರಣಕ್ಕೂ ಅಧಿಕಾರಿಗಳ ಕೈಯಲ್ಲಿ ಆಡಳಿತ ನೀಡಬೇಡಿ. ಚುನಾಯಿತ ಪ್ರತಿನಿಧಿಗಳಿರಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಸೇರ್ಪಡೆ ವಿಚಾರ: ಬಿಜೆಪಿಯಿಂದ ಕೆಲವರು ಹೇಳಿ ಕಳುಹಿಸುತ್ತಿದ್ದಾರೆ. ಕೆಲ ವಿಚಾರಗಳನ್ನು ನಾನು ಮುಂದಿಟ್ಟಿದ್ದೇನೆ. ನನ್ನ ಜೊತೆಗೆ ಚರ್ಚಿಸಿದ ಬಳಿಕ ನಿರ್ಧಾರ ಕೈಗೊಳ್ಳುತ್ತೇನೆ ಎಂದರು.