ಮೈಸೂರು : ಕೊಡಗು ಹಾಗೂ ಕೇರಳದ ವಯನಾಡು ಪ್ರದೇಶದಲ್ಲಿ ಮುಂಗಾರು ಮಳೆ ಜೋರಾಗಿದೆ. ಇದರಿಂದಾಗಿ ಕಬಿನಿ ಹಾಗೂ ಕೆಆರ್‌ಎಸ್ ಜಲಾಶಯಗಳಿಗೆ ಒಳ ಹರಿವು ಹೆಚ್ಚಾಗಿದೆ. ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನ ಕಾವೇರಿ ಉಗಮ ಸ್ಥಾನ ಭಾಗಮಂಡಲದ ತ್ರೀವೇಣಿ ಸಂಗಮ ಸಂಪೂರ್ಣ ಜಲಾವೃತಗೊಂಡಿದೆ. ಮುಂಜಾಗ್ರತ ಕ್ರಮವಾಗಿ ಕೊಡಗಿನ ಮೂರು ತಾಲೂಕಿನ ಶಾಲೆಗಳಿಗೆ ಇಂದು ರಜೆ ಘೋಷಿಸಲಾಗಿದೆ.
ಕೊಡಗು, ಕೇರಳದ ವಯನಾಡು ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರ ಮುಂಗಾರು ಮಳೆ ಸುರಿಯುತ್ತಿದೆ. ಇದರಿಂದ ಈ ಭಾಗದಲ್ಲಿ ಕೃಷಿ ಚಟುವಟಿಕೆಗಳು ಗದಗೆದರಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಕೇರಳದ ವಯನಾಡಿನಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಗೆ ಮೈಸೂರು ಜಿಲ್ಲೆಯ ಹೆಚ್. ಡಿ ಕೋಟೆಯ ಬಳಿಯ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯಕ್ಕೆ ಹೆಚ್ಚು ಒಳ ಹರಿವು ಬರುತ್ತಿದ್ದು, ಕಬಿನಿ ಜಲಾಶಯದ ನೀರಿನ ಸಾಮರ್ಥ್ಯ 84 ಅಡಿ ಇದೆ. ಇಂದಿನ ನೀರಿನ ಸಾಮರ್ಥ್ಯ 69 ಅಡಿಗಳಾಗಿದ್ದು, ಒಳ ಹರಿವು 16,977 ಕ್ಯೂಸೆಕ್ ಆಗಿದೆ.
ಭಾಗಮಂಡಲ ಜಲಾವೃತ : ಕೊಡಗಿನಲ್ಲಿ ಕಳೆದ 2 ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮುಂಗಾರು ಮಳೆಗೆ ಕಾವೇರಿ ಉಗಮ ಸ್ಥಾನ ತ್ರಿವೇಣಿ ಸಂಗಮ ಸಂಪೂರ್ಣ ಜಲಾವೃತವಾಗಿದ್ದು, ಕೊಡಗಿನಲ್ಲಿ ಮಳೆಯ ಹಿನ್ನೆಲೆ ಜೂನ್ 27 ರಂದು ಮಡಿಕೇರಿ, ಪೊನ್ನಂಪೇಟೆ, ವಿರಾಜಪೇಟೆ ತಾಲೂಕಿನ ಶಾಲೆಗಳಿಗೆ ಒಂದು ದಿನ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಿಸಲಾಗಿದ್ದು, ಮಡಿಕೇರಿ ಸುತ್ತ ಮುತ್ತ ಇಂದು ಸಹ ಧಾರಾಕಾರ ಮಳೆ ಸುರಿಯುತ್ತಿದ್ದು, ಅಲ್ಲಲ್ಲಿ ಸಣ್ಣ-ಪುಟ್ಟ ಅನಾಹುತಗಳು ಸಂಭವಿಸಿವೆ.
ಕೊಡಗಿನಲ್ಲಿ ಧಾರಾಕಾರ ಮಳೆಯಿಂದ ಕಾವೇರಿ ನದಿಗೆ ಹೆಚ್ಚಿನ ನೀರು ಬರುತ್ತಿದ್ದು, ಕೆಆರ್‌ಎಸ್ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದೆ. ಕೆಆರ್ಎಸ್ನ ಜಲಾಶಯದ ಗರಿಷ್ಠ ನೀರಿನ ಮಟ್ಟ 124 ಅಡಿಯಾಗಿದ್ದು, ಇಂದಿನ ನೀರಿನ ಮಟ್ಟ 85 ಅಡಿಯಾಗಿದೆ. ಒಳ ಹರಿವು 3856 ಕ್ಯೂಸೆಕ್ ಇದೆ. ಒಳ ಹರಿವು ಇಂದು ಹೆಚ್ಚಾಗುವ ಸಾಧ್ಯತೆ ಇದೆ.
ಕೊಡಗು - ಮೈಸೂರು ಜಿಲ್ಲೆ ಹಾಗೂ ಕಬಿನಿ ಹಿನ್ನೀರಿನ ಕೇರಳದ ವಯನಾಡು ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಕಬಿನಿ ಮತ್ತು ಕಾವೇರಿ ಜಲಾಶಯಗಳಿಗೆ ಹೆಚ್ಚುವರಿ ನೀರು ಬರುತ್ತಿದ್ದು, ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ.
ಮುಂಗಾರು ಮಳೆಗೆ ತುಂಬಿದ ತುಂಗೆ : ಈ ಬಾರಿ ಆಶಾದಾಯಕ ಮುಂಗಾರು ಪ್ರಾರಂಭಗೊಂಡಿದೆ. ಪೂರ್ವ ಮುಂಗಾರು ಅಬ್ಬರಿಸಿದರೂ ಮುಂಗಾರು ಸ್ವಲ್ಪ ತಡವಾಗಿ ಮಲೆನಾಡಿನಲ್ಲಿ ಪ್ರಾರಂಭವಾಗಿದೆ. ರಾಜ್ಯದಲ್ಲಿಯೇ ಪ್ರಥಮವಾಗಿ ತುಂಬುವ ಡ್ಯಾಂ ಎಂದೆನಿಸಿಕೊಂಡಿರುವ ಶಿವಮೊಗ್ಗ ತಾಲೂಕಿನ ಗಾಜನೂರು ಡ್ಯಾಂ ಈ ಬಾರಿ ಬೇಗನೆ ಭರ್ತಿಯಾಗಿದೆ. ಭರ್ತಿಯಾದ ಡ್ಯಾಂನಿಂದ ಇಂದು ನದಿಗೆ ಎರಡು ಕ್ರಸ್ಟ್ ಗೇಟ್ಗಳ ಮೂಲಕ 1 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.
ತುಂಗಾ ಅಣೆಕಟ್ಟೆಗೆ ಒಳ ಹರಿವು 6 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದರಿಂದ ನದಿಗೆ ಎರಡು ಕ್ರಸ್ಟ್ ಗೇಟ್ ಮೂಲಕ 1 ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ. ಅದೇ ರೀತಿ ವಿದ್ಯುತ್ ಉತ್ಪಾದನೆಗಾಗಿ 5 ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ. ಇದರಿಂದ ನದಿಗೆ ಒಟ್ಟು 6 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ.
ತುಂಗಾ ಅಣೆಕಟ್ಟೆಯು 3.24 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿದೆ. ಅಣೆಕಟ್ಟೆಯು ಒಟ್ಟು 588.24 ಮೀಟರ್ ಎತ್ತರವಿದೆ. ಅಣೆಕಟ್ಟು ಸಂಪೂರ್ಣ ತುಂಬಿದೆ. ಇದರಿಂದ ನದಿಗೆ ನೀರು ಬಿಡುಗಡೆ ಮಾಡಲಾಗುತ್ತಿದೆ.
ಇಂದು ತುಂಗಾ ಮೇಲ್ದಂಡೆ ಯೋಜನೆಯ EE ಕೃಷ್ಣ ಪ್ರಸಾದ್ ಅವರ ನೇತೃತ್ವದಲ್ಲಿ ತುಂಗಾ ದೇವಿ ಮೂರ್ತಿಗೆ ಪೂಜೆ ಸಲ್ಲಿಸಿ, ಡ್ಯಾಂನಿಂದ ನದಿಗೆ ನೀರು ಬಿಡಲಾಯಿತು. ಈ ವೇಳೆ AWE ತಿಪ್ಪನಾಯ್ಕ್, AE ಶಂಕರಪ್ಪ ಹಾಗೂ ಡ್ಯಾಂ ಸಿಬ್ಬಂದಿ ಅಜಯ್, ಚೇತನ್ ಹಾಜರಿದ್ದರು. ಕಳೆದ ನಾಲ್ಕು ವರ್ಷದಲ್ಲಿ ಇದೇ ಮೊದಲ ಬಾರಿ ಜೂನ್ನಲ್ಲಿ ಡ್ಯಾಂ ಭರ್ತಿಯಾಗಿದೆ. ಈ ನೀರು ಮುಂದೆ ಹೊಸಪೇಟೆ ಡ್ಯಾಂಗೆ ಹೋಗುತ್ತದೆ.
ಇದನ್ನೂ ಓದಿ : ಮೀನುಗಾರರಿಗೆ ಎಚ್ಚರಿಕೆ; ಉಡುಪಿಯಲ್ಲಿ 77.8 ಮಿ.ಮೀ. ಭಾರಿ ಮಳೆ, ಮೆಸ್ಕಾಂಗೆ 17.8ಲಕ್ಷ ರೂ. ನಷ್ಟ - Heavy rain in Udupi