ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ)ದಲ್ಲಿ ನೇಮಕಾತಿಯ ಆಯ್ಕೆ ಪಟ್ಟಿಯ ಕಡತವೇ ನಾಪತ್ತೆಯಾಗಿದ್ದು, ಈ ಸಂಬಂಧ ಆಯೋಗದ ಅಧಿಕಾರಿಗಳು ನೀಡಿದ ದೂರು ಆಧರಿಸಿ ವಿಧಾನಸೌಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
2016ರಲ್ಲಿ ಕರ್ನಾಟಕ ಕೊಳಗೇರಿ ಮಂಡಳಿ ಕಿರಿಯ ಇಂಜಿನಿಯರ್ಗಳ ನೇಮಕಾತಿ ಆಗಿತ್ತು. 2018ರಲ್ಲಿ ಹೆಚ್ಚುವರಿ ಆಯ್ಕೆ ಪಟ್ಟಿಯನ್ನ ಪ್ರಕಟಿಸಲಾಗಿತ್ತು. ಇದನ್ನ ಪ್ರಶ್ನಿಸಿ ವಿವೇಕಾನಂದ ಹೆಚ್.ಡಿ ಎಂಬುವರು ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದ ಆದೇಶದಂತೆ ಕೆಪಿಎಸ್ಸಿ ಗೌಪ್ಯ ಶಾಖೆ-3ಯು ಆಯ್ಕೆ ಪಟ್ಟಿ ಕಡತನ್ನು ಸಿದ್ಧಪಡಿಸಿತ್ತು. ಬಳಿಕ 2024ರಲ್ಲಿ ಜನವರಿ 22ರಂದು ಕೆಪಿಎಸ್ಸಿ ಆಪ್ತ ಕಾರ್ಯದರ್ಶಿ ಅವರಿಗೆ ಸಲ್ಲಿಸಲಾಗಿತ್ತು. ಆ ಬಳಿಕ ಕಡತ ನಾಪತ್ತೆಯಾಗಿದೆ ಎಂದು ದೂರಿನಲ್ಲಿ ಆಯೋಗದ ಸಹಾಯಕ ಅಧಿಕಾರಿ ರಾಘವೇಂದ್ರ ಅವರು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಕೆಪಿಎಸ್ಸಿ ನೇಮಕಾತಿ: ಮೋಟಾರು ವಾಹನ ನಿರೀಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ - Motor Vehicle Inspector job
ಕಡತಕ್ಕಾಗಿ ಶೋಧ ನಡೆಸಿದ ಕೆಪಿಎಸ್ಸಿ: ಕಣ್ಮರೆಯಾಗಿರುವ ಕಡತವು ಆಕಸ್ಮಿಕವಾಗಿ ಆಯೋಗದ ಬೇರೆ ಶಾಖೆಗಳಿಗೆ ಹೋಗಿರುವ ಸಾಧ್ಯತೆಯಿದ್ದು, ಈ ಸಂಬಂಧ ಎಲ್ಲಾ ಶಾಖೆಗಳಿಗೆ ಕಡತ ಶೋಧಿಸುವಂತೆ ಜ್ಞಾಪನ ಪತ್ರ ಹೊರಡಿಸಲಾಗಿತ್ತು. ನಿರಂತರವಾಗಿ ಪರಿಶೀಲನೆ ನಡೆಸಿದರೂ ಕಡತ ಸಿಗದಿರುವ ಬಗ್ಗೆ ಆಯಾ ಶಾಖೆಗಳ ಅಧಿಕಾರಿಗಳು ಉತ್ತರಿಸಿದ್ದರು. ಈ ಹಿನ್ನೆಲೆಯಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಯೊಳಗೊಂಡ ತಂಡ ರಚಿಸಿ ಎಲ್ಲಾ ಶಾಖೆಗಳಿಗೂ ತೆರಳಿ ಪರಿಶೀಲಿಸಿತ್ತು. ಆಗಲೂ ಕಡತ ಸಿಗದ ಪರಿಣಾಮ ಸಂಬಂಧಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಮಾರ್ಚ್ 13ರಂದು ಆಯೋಗ ಸಭೆ ನಡೆಸಿ ಪೊಲೀಸ್ ದೂರು ನೀಡುವಂತೆ ತೀರ್ಮಾನಿಸಲಾಗಿತ್ತು. ಇದರಂತೆ ರಾಘವೇಂದ್ರ ಅವರು ನೀಡಿದ ದೂರಿನ ಮೇರೆಗೆ ವಿಧಾನಸೌಧ ಪೊಲೀಸರು ಎಫ್ಐರ್ ದಾಖಲಿಸಿಕೊಂಡಿದ್ದಾರೆ.
ಪ್ರಕರಣ ಸಂಬಂಧ ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಹೆಚ್.ಟಿ ಮಾತನಾಡಿ, ಕಡತ ನಾಪತ್ತೆ ಬಗ್ಗೆ ಕೆಪಿಎಸ್ಸಿ ಕಾರ್ಯದರ್ಶಿ ದೂರು ಕೊಟ್ಟಿದ್ದಾರೆ. 2016ರಲ್ಲಿ ಕೊಳಗೇರಿ ಮಂಡಳಿಯ ಜ್ಯೂನಿಯರ್ ಎಂಜಿನಿಯರ್ ಸಿವಿಲ್ ನೇಮಕಾತಿ ನಡೆದಿತ್ತು. 2018ರಲ್ಲಿ ಹೆಚ್ಚುವರಿ ಆಯ್ಕೆ ಪಟ್ಟಿ ಪ್ರಕಟ ಆಗಿತ್ತು. ಇದನ್ನ ಪ್ರಶ್ನಿಸಿ ಅಭ್ಯರ್ಥಿಯೊಬ್ಬರು ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಆದೇಶ ಪಾಲನೆಯಂತೆ ಕಡತವನ್ನು ಆಯೋಗ ತಯಾರಿಸಿತ್ತು. ಆ ಬಳಿಕ ಮುಂದಿನ ಕ್ರಮಕ್ಕೆ ಕಾರ್ಯದರ್ಶಿ ಕಚೇರಿಯಲ್ಲಿ ಕಡತ ಸ್ವೀಕಾರಗೊಂಡಿತ್ತು. ಆದರೆ ಆ ಕಡತ ನಾಪತ್ತೆಯಾಗಿದೆ. ಎಲ್ಲಾ ಶಾಖೆಗಳಲ್ಲಿ ಹುಡುಕಿ ದೃಢೀಕರಣ ಪತ್ರ ಕೊಡಬೇಕೆಂದು ಹೇಳಿದ್ದರು. ಆದರೆ ಯಾವ ಶಾಖೆಯಲ್ಲೂ ಕಡತ ಸಿಗಲಿಲ್ಲ. ಸಭೆಯಲ್ಲಿ ಪ್ರಕರಣ ದಾಖಲಿಸಲು ತೀರ್ಮಾನವಾಗಿತ್ತು. ಈ ಬಗ್ಗೆ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಶಂಕಿತರ ಬಗ್ಗೆ ಯಾವುದೇ ಮಾಹಿತಿ ಕೊಟ್ಟಿಲ್ಲ. ನಾವು ಎಲ್ಲಾ ಮಾಹಿತಿ ಕೇಳಿದ್ದೇವೆ, ತನಿಖೆ ನಡೆಯುತ್ತಿದೆ ಎಂದರು.