ಬೆಂಗಳೂರು: ರೀಲ್ಸ್ ವ್ಯಾಮೋಹಕ್ಕೆ ದಾಸನಾಗಿ ಎಕೆ 47 ನಕಲಿ ಗನ್ ಖರೀದಿಸಿ ಸಾರ್ವಜನಿಕರಲ್ಲಿ ಭಯ ಮೂಡಿಸಿದ್ದ ಪ್ರಕರಣ ಸಂಬಂಧ ಆರೋಪಿಯನ್ನು ಕೊತ್ತನೂರು ಠಾಣೆ ಪೊಲೀಸರು ಇತ್ತೀಚೆಗೆ ಬಂಧಿಸಿದ್ದು, ವಿಚಾರಣೆ ನಡೆಸಿದಾಗ ಸ್ಯಾಂಡಲ್‌ವುಡ್ ಟೆಕ್ನಿಷಿಯನ್ ಗನ್‌ಗಳನ್ನು ಬಾಡಿಗೆ ನೀಡಿರುವುದು ಬೆಳಕಿಗೆ ಬಂದಿತ್ತು. ಆರೋಪಿ ನೀಡಿದ ಹೇಳಿಕೆ ಆಧರಿಸಿ ಅಲೀಂ ಪಾಷಾ (ಸಾಹಿಲ್ ಗನ್ ಮಾಸ್ಟರ್) ಎಂಬಾತನಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಬಂಧಿತ ಅರುಣ್ ಕಠಾರೆ (26) ಜೂನ್ 9ರಂದು ನಕಲಿ ಗನ್ ಹಿಡಿದು ಬಾಡಿಗಾರ್ಡ್‌ಗಳೊಂದಿಗೆ ಕೊತ್ತನೂರು ಠಾಣಾ ವ್ಯಾಪ್ತಿಯ ಚೊಕ್ಕನಹಳ್ಳಿಯ ಲೀಲಾ ಹೋಟೆಲ್ ಬಳಿ ಬಂದಿದ್ದಾನೆ. ಆತನನ್ನು ಕಂಡು ಆತಂಕಗೊಂಡ ಸಾರ್ವಜನಿಕರು ಹೊಯ್ಸಳ ಗಸ್ತು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಆರೋಪಿ ತನ್ನ ಇನ್ಸ್ಟ್ರಾಗ್ರಾಂ ಪೇಜ್ನಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದ. ಪೊಲೀಸರು ಆರೋಪಿ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಸಾರ್ವಜನಿಕ ಸ್ಥಳದಲ್ಲಿ ತೊಂದರೆ ಉಂಟುಮಾಡಿದ ಪ್ರಕರಣ ದಾಖಲಿಸಿ ಬಂಧಿಸಿದ್ದರು. ವಿಚಾರಣೆ ವೇಳೆ ರೀಲ್ಸ್ ಮಾಡಲು ಅಲೀಂ ಪಾಷಾ ಎಂಬಾತ ಎರಡು ಟಾಯ್ ಎಕೆ 47 ಗನ್‌ಗಳನ್ನು ಬಾಡಿಗೆಗೆ ನೀಡಿರುವುದಾಗಿ ಹೇಳಿಕೆ ನೀಡಿದ್ದ. ಈ ಹೇಳಿಕೆ ಆಧರಿಸಿ ಅಲೀಂ ಪಾಷಾಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನೋಟಿಸ್ನಲ್ಲೇನಿದೆ?: ಆರೋಪಿ ಅರುಣ್ ಕಠಾರೆಗೆ ಬಾಡಿಗೆ ನೀಡಲಾಗಿದ್ದ 2 ಎಕೆ 47 ಗನ್ಗಳ ನೈಜತೆ ತಿಳಿಯುವುದಕ್ಕಾಗಿ ಗನ್‌ಗಳನ್ನು ಹಾಜರುಪಡಿಸಬೇಕು. ನಕಲಿ ಗನ್‌ಗಳನ್ನು ಸರಬರಾಜು ಮಾಡಲು ಸಂಬಂಧಿಸಿದ ಪ್ರಾಧಿಕಾರದಿಂದ ಪಡೆದುಕೊಂಡಿರುವ ಅನುಮತಿ ಪತ್ರ, ಜಿಎಸ್ಟಿ ಪಾವತಿ ಮಾಡಿದ್ದರೆ ಅದರ ಪ್ರಮಾಣಪತ್ರ ಒದಗಿಸಬೇಕು. ಗನ್‌ಗಳನ್ನು ಸರಬರಾಜು ಮಾಡಿದ ರೀತಿ, ಬಾಡಿಗೆ ಹಣ ಪಾವತಿಸಿದ್ದರೆ ಸಂಬಂಧಿಸಿದ ಪೂರಕ ಸಾಕ್ಷ್ಯಾಧಾರ ನೀಡಬೇಕು. ಆರೋಪಿಗೆ ಸರಬರಾಜು ಮಾಡಿದ ಗನ್ಗಳು ಅಸಲಿಯೇ ಅಥವಾ ನಕಲಿಯೇ ಎಂಬುದಕ್ಕೆ ನಿಮ್ಮ ಬಳಿಯಿರುವ ಸಾಕ್ಷ್ಯಾಧಾರಗಳನ್ನು ವಿಚಾರಣೆಗೆ ಹಾಜರುಪಡಿಸಬೇಕು ಎಂದು ನೋಟಿಸ್ನಲ್ಲಿ ಪೊಲೀಸರು ತಿಳಿಸಿದ್ದಾರೆ.
ಯಾರು ಸಾಹಿಲ್: ಕನ್ನಡದ ಸೂಪರ್ ಹಿಟ್ ಸಿನಿಮಾಗಳಿಗೆ ಡಮ್ಮಿ ಗನ್ ಒದಗಿಸುವ ಟೆಕ್ನಿಷಿಯನ್ ಸಾಹಿಲ್, ಹೊಂಬಾಳೆ ಫಿಲ್ಸ್, ಗೀತಾ ಪಿಕ್ಚರ್ಸ್ನಂತಹ ಬ್ಯಾನರ್ಗಳ ಸಿನಿಮಾಗಳಿಗೆ ಟೆಕ್ನಿಷಿಯನ್ ಆಗಿ ಕೆಲಸ ಮಾಡಿದ್ದಾರೆ. ಕಬ್ಜ, ಭೈರತಿ ರಣಗಲ್, ಮಫ್ತಿ ಸಿನಿಮಾಗಳಿಗೂ ಡಮ್ಮಿ ಗನ್ ಒದಗಿಸಿದ್ದರು.