ಶಿವಮೊಗ್ಗ: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ವಹಿಸಬೇಕು ಅಥವಾ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅವರಿಂದ ತನಿಖೆ ನಡೆಯಬೇಕೆಂದು ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಶಿವಮೊಗ್ಗದಲ್ಲಿಂದು ಆಗ್ರಹಿಸಿದರು.
ಶಿವಮೊಗ್ಗದ ಕೆಂಚಪ್ಪ ಬಡಾವಣೆಯಲ್ಲಿರುವ ಚಂದ್ರಶೇಖರನ್ ಮನೆಗೆ ಕೋಟಾ ಶ್ರೀನಿವಾಸ ಪೂಜಾರಿ ಭೇಟಿ ನೀಡಿದಾಗ ಸಿಐಡಿ ಅಧಿಕಾರಿಗಳು ಮನೆಯಲ್ಲಿದ್ದರು. ಹಾಗಾಗಿ, ಚಂದ್ರಶೇಖರನ್ ಪತ್ನಿ ಕವಿತಾ ಹಾಗೂ ಇಬ್ಬರು ಮಕ್ಕಳನ್ನು ಮನೆಯ ಕೆಳಗೆ ಕರೆಯಿಸಿಕೊಂಡು ಮಾತನಾಡಿಸಿ, ಸಾಂತ್ವನ ಹೇಳಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತಾ, "ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕ್ಷಕ ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಪ್ರಾಮಾಣಿಕ ಅಧಿಕಾರಿಯಾಗಿದ್ದರು. ಬಡವರ ಮಕ್ಕಳ ಶಿಕ್ಷಣ, ಆರೋಗ್ಯದ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸಲಾಗಿತ್ತು. 87 ಕೋಟಿ ರೂ ಅನ್ಯ ಕಾರ್ಯಕ್ಕೆ ವರ್ಗಾವಣೆ ಮಾಡಲಾಗಿದೆ. ಅಧಿಕಾರಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ ನೋಟ್‌ನಲ್ಲಿ ಅಧಿಕಾರಿಯ ಹೆಸರು ಬರೆದಿದ್ದಾರೆ. ಪರಿಶಿಷ್ಟರ ಅಭಿವೃದ್ಧಿ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಈ ಬಗ್ಗೆ ಗಮನಹರಿಸಬೇಕು. ನಿಮ್ಮ ಗೌರವ ಉಳಿಯಬೇಕಾದರೆ ಸಚಿವರನ್ನು ತಕ್ಷಣ ವಜಾ ಮಾಡಬೇಕು. ಇಲ್ಲದಿದ್ದರೆ ಪ್ರಕರಣದಲ್ಲಿ ನಿಮ್ಮ ಕೈವಾಡ ಇದೆಯೇನೋ ಎಂಬ ಅನುಮಾನ ಮೂಡುತ್ತದೆ" ಎಂದು ಹೇಳಿದರು.
25 ಲಕ್ಷ ರೂ ಪರಿಹಾರ ಕೊಡಬೇಕು: ಚಂದ್ರಶೇಖರನ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಹೀಗಾಗಿ ಮೃತರ ಕುಟುಂಬಕ್ಕೆ ಸರ್ಕಾರ ತಕ್ಷಣ 25 ಲಕ್ಷ ರೂ. ನೀಡಬೇಕು ಎಂದು ಇದೇ ವೇಳೆ ಕೋಟಾ ಆಗ್ರಹಿಸಿದರು.
ಈ ಹಿಂದೆ ಸಚಿವರಾಗಿದ್ದ ಈಶ್ವರಪ್ಪನವರ ಮೇಲೆ ಆರೋಪ ಬಂದಾಗ ಅವರು ರಾಜೀನಾಮೆ ಕೊಟ್ಟಿದ್ದರು. ಈಗ ನಾಗೇಂದ್ರ ಏಕೆ ರಾಜೀನಾಮೆ ಕೊಟ್ಟಿಲ್ಲ?. 87 ಕೋಟಿ ರೂ. ವಂಚನೆ ಆಗಿದೆ. ಇದುವರೆಗೆ ಒಬ್ಬರೇ ಒಬ್ಬರನ್ನೂ ಬಂಧಿಸಿಲ್ಲ. ಪ್ರಕರಣ ಮುಚ್ಚಿ ಹಾಕಲು ಸಚಿವರನ್ನು ರಕ್ಷಣೆ ಮಾಡಲು ಸಿದ್ದರಾಮಯ್ಯ ಸರಕಾರ ಯತ್ನಿಸುತ್ತಿದೆ. ಸಚಿವರನ್ನು ವಜಾ ಮಾಡದಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ರಾಜೀನಾಮೆ ಕೊಡಬೇಕು ಎಂದರು.
ವಜಾ ಮಾಡದಿದ್ದರೆ ಹೋರಾಟ: ಸಚಿವ ನಾಗೇಂದ್ರರನ್ನು ಸಚಿವ ಸ್ಥಾನದಿಂದ ವಜಾ ಮಾಡದಿದ್ದರೆ ವಿಧಾನಸಭಾ ಕಲಾಪದಲ್ಲೂ, ಹೊರಗೂ ಹೋರಾಟ ಮಾಡುತ್ತೇವೆ. ಈ ಬಗ್ಗೆ ರಾಜ್ಯಪಾಲರಿಗೆ ದೂರು ಕೊಡುವ ಬಗ್ಗೆ ಚಿಂತನೆ ಮಾಡುತ್ತೇವೆ ಎಂದು ಹೇಳಿದರು.