ಗಂಗಾವತಿ: ಕರ್ನಾಟಕದ ಭತ್ತದ ಕಣಜ ಗಂಗಾವತಿ ತಾಲೂಕಿನಲ್ಲಿ ಅನ್ನದಾತರಿಗೆ ಸಹಕಾರಿಯಾಗುವ ಯೋಜನೆಯೊಂದನ್ನು ಸರ್ಕಾರ ಆರಂಭಿಸಿದೆ. ಕೃಷಿ ಚಟುವಟಿಕೆ ಕೈಗೊಳ್ಳಲು ಕೂಲಿಕಾರರ ತೀವ್ರ ಸಮಸ್ಯೆ ಎದುರಿಸುತ್ತಿರುವ ರೈತ ವರ್ಗಕ್ಕೆ ನೆರವಾಗಲು ರಾಜ್ಯ ಸರ್ಕಾರ ಕೃಷಿ ಇಲಾಖೆಯ ಮೂಲಕ ಇದೇ ಮೊದಲ ಬಾರಿಗೆ ಕೊಪ್ಪಳ ಜಿಲ್ಲೆಯಲ್ಲಿ ಹೈಟೆಕ್ ಹಾರ್ವೆಸ್ಟರ್ ಹಬ್ ಆರಂಭಿಸಿದೆ.
ಸುಮಾರು 80 ಲಕ್ಷ ರೂಪಾಯಿ ಮೊತ್ತದಲ್ಲಿ ಭತ್ತ ಕಟಾವು ಯಂತ್ರ, ಮೇವು ಕಟ್ಟುವ ಯಂತ್ರ, ಧಾನ್ಯ ಎತ್ತುವ ಮತ್ತು ಒಣಗಿಸುವ ಯಂತ್ರ ಸೇರಿದಂತೆ ಕೃಷಿ ಚಟುವಟಿಕೆಯಲ್ಲಿ ಮುಖ್ಯವಾಗಿ ಭತ್ತದ ಕಟಾವಿಗೆ ಅಗತ್ಯವಾಗುವ ಯಂತ್ರೋಪಕರಣಗಳ ಹಬ್ಗೆ ಚಾಲನೆ ನೀಡಲಾಗಿದೆ.
ಕೃಷಿ ಕೂಲಿ ಕಾರ್ಮಿಕರ ಕೊರತೆ ನೀಗಿಸುವ ಉದ್ದೇಶ; ಗಂಗಾವತಿ ತಾಲೂಕಿನ ಕೋಟಯ್ಯ ಕ್ಯಾಂಪಿನ ಹಾಲು ಉತ್ಪಾದಕರ ಸಹಕಾರ ಸಂಘದ ಆಶ್ರಯದಲ್ಲಿ ಆರಂಭಿಸಲಾದ ಜಿಲ್ಲೆಯ ಮೊದಲ ಹೈಟೆಕ್ ಹಾರ್ವೆಸ್ಟರ್ ಯಂತ್ರಗಳ ಹಬ್ಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು "ಈ ಭಾಗ ನೀರಾವರಿ ಪ್ರದೇಶವಾಗಿದ್ದು, ರೈತರು ಅತಿ ಹೆಚ್ಚು ಭತ್ತ ಬೆಳೆಯುತ್ತಾರೆ. ಕೃಷಿ ಕೂಲಿ ಕಾರ್ಮಿಕರ ಕೊರತೆ ನೀಗಿಸಲು ಈ ಯೋಜನೆ ಜಾರಿಗೆ ತರಲಾಗಿದೆ. ಮುಂದಿನ ದಿನಗಳಲ್ಲಿ ಭತ್ತ ನಾಟಿ ಮಾಡುವ ಯಂತ್ರಗಳಿಗೂ ಹೆಚ್ಚಿನ ಸಹಾಯಧನ ನೀಡಲು ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು" ಎಂದರು.
ರೈತರಿಗೆ ಅನುಕೂಲವಾಗಲೆಂದು ಬ್ಯಾಂಕ್ ಸಾಲ ಸಹಾಯ; ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ್ ಪಟ್ಟದಕಲ್ ಮಾತನಾಡಿ, "ಕೃಷಿ ಕೂಲಿಕಾರರ ಸಮಸ್ಯೆ ನೀಗಿಸುವ ಉದ್ದೇಶಕ್ಕೆ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ಸುಮಾರು 80 ಲಕ್ಷ ರೂಪಾಯಿ ಮೊತ್ತದಲ್ಲಿ ಈ ಯೋಜನೆ ಜಾರಿ ಮಾಡಲಾಗುತ್ತಿದೆ. ರೈತರು ಖಾಸಗಿಯಾಗಿ ಇಷ್ಟು ದುಬಾರಿ ಮೊತ್ತದ ಯಂತ್ರೋಪಕರಣಗಳನ್ನು ಕೊಳ್ಳಲು ಸಾಧ್ಯವಾಗದ ಹಿನ್ನೆಲೆ ಸಂಘ-ಸಂಸ್ಥೆಗಳಿಗೆ ಶೇ. 70ರಷ್ಟು ಸಬ್ಸಿಡಿ ನೀಡಿ ಬ್ಯಾಂಕ್ ಮೂಲಕ ಸಾಲ ಕೊಡಿಸುವ ಮೂಲಕ ಅನುಕೂಲ ಕಲ್ಪಿಸಿ ಕೊಡಲಾಗುತ್ತಿದೆ" ಎಂದು ತಿಳಿಸಿದರು.
ಬಳಿಕ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಟಿ. ಎಸ್. ರುದ್ರೇಶಪ್ಪ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಎನ್. ಸತ್ಯನಾರಾಯಣ ಮಾತನಾಡಿದರು. ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ದೊಡ್ಡಪ್ಪ ದೇಸಾಯಿ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಇದನ್ನೂ ಓದಿ:ವಕ್ಫ್ ಆಸ್ತಿ ಸುರಕ್ಷತೆಗಾಗಿ ರಾಜ್ಯ ಸರ್ಕಾರ ಈವರೆಗೆ ಬಿಡುಗಡೆ ಮಾಡಿದ ಅನುದಾನದ ವಿವರ