ಕಾರವಾರ(ಉತ್ತರ ಕನ್ನಡ): ಭಾರೀ ಮಳೆ ಸುರಿದ ಬೆನ್ನಲ್ಲೇ ಜಿಲ್ಲೆಯಲ್ಲಿ ಏಕಾಏಕಿ ಸಂಭವಿಸಿದ ಸಾಲು ಸಾಲು ದುರಂತಗಳಿಂದ ಜಿಲ್ಲೆಯ ಜನ ತತ್ತರಗೊಳ್ಳುವಂತಾಗಿದೆ. ವಾರದ ಹಿಂದೆ ಸಂಭವಿಸಿದ ಕಾಳಿ ಸೇತುವೆ ಕುಸಿತ ಕೂಡ ತಡರಾತ್ರಿ ಸಂಭವಿಸಿದ ಕಾರಣ ಅತಿ ದೊಡ್ಡ ದುರಂತ ತಪ್ಪಿದಂತಾಗಿದೆ. ಆದರೆ ಈ ಅವಘಡದಲ್ಲಿ ಯಾರ ಜೀವಕ್ಕೂ ಹಾನಿಯಾಗದಿರುವುದಕ್ಕೆ ಸೇತುವೆ ಸಮೀಪದ ಖಾಫ್ರಿ ದೇವರು ಹಾಗೂ ಕಾಳಿ ಮಾತೆಯ ಕೃಪಾಕಟಾಕ್ಷವೇ ಕಾರಣ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.
ಆ.6ರಂದು ಮಧ್ಯರಾತ್ರಿ 12.50ರ ಸುಮಾರಿಗೆ ಸಂಭವಿಸಿದ ಸೇತುವೆ ಕುಸಿತ ದುರಂತದಲ್ಲಿ ತಮಿಳುನಾಡು ಮೂಲದ ಲಾರಿಯೊಂದು ನದಿಗೆ ಬಿದ್ದು ಮುಳುಗಡೆಯಾಗಿತ್ತು. ಆದರೆ ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದರು. ನೀರಿನ ಸೆಳವಿನ ನಡುವೆಯೂ ಲಾರಿಯಿಂದ ಹೊರಬಂದ ಚಾಲಕ ಕ್ಯಾಬಿನ್ ಏರಿ ಅಪಾಯದಿಂದ ಪಾರಾಗಿದ್ದರು. ಅದು ಕೂಡ ತಡರಾತ್ರಿ ನಡೆದಿದ್ದರಿಂದ ನಡೆಯಬಹುದಾದ ದೊಡ್ಡ ದುರ್ಘಟನೆ ತಪ್ಪಿತ್ತು.
ಈ ಬಗ್ಗೆ ಇಲ್ಲಿನ ಸ್ಥಳೀಯರು ಹಾಗೂ ಖಾಪ್ರಿ ದೇವಸ್ಥಾನದ ಅರ್ಚಕ ವಿನಾಯಕ ನಾಯ್ಕ ಮಾತನಾಡಿ, "ಸೇತುವೆ ಕುಸಿದರೂ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಇದಕ್ಕೆ ಇಲ್ಲಿನ ರಕ್ಷಕ ದೇವ ಖಾಫ್ರಿ ದೇವರ ಕೃಪೆ ಹಾಗೂ ಸೇತುವೆ ಸುತ್ತಲೂ ಇರುವ ಕಾಳಿ ಮಾತೆ, ದುರ್ಗಾದೇವಿ, ನರಸಿಂಹ ದೇವರ ಅಭಯವೇ ಕಾರಣ" ಎಂದರು.
ಕೋಡಿಭಾಗ ಸದಾಶಿವಗಡ ಸಂಪರ್ಕದ ಕೊಂಡಿಯಾಗಿ 1965ರಲ್ಲಿ ಸೇತುವೆಯ ಕಾಮಗಾರಿ ಆರಂಭಗೊಂಡಿತ್ತು. 1974ರ ವೇಳೆ ಸುಮಾರು 7 ಜನರು ಸಾವನ್ನಪ್ಪಿದ್ದರು ಎಂದು ಸೇತುವೆ ಕಾಮಗಾರಿಯಲ್ಲಿ ತೊಡಗಿಕೊಂಡಿದ್ದ ಸ್ಥಳೀಯರು ಹೇಳಿದ್ದಾರೆ.
ಸುಮಾರು 800 ಮೀಟರ್ ಉದ್ದದ ಸೇತುವೆ ಕಾಮಗಾರಿ ವೇಳೆಯಲ್ಲಿ ಸಾಕಷ್ಟು ಎಡರು ತೊಡರುಗಳು ಎದುರಾಗಿತ್ತು. ಕೆಲವಷ್ಟು ಕಂಪನಿಗಳು ಬಂದು ಕಾಮಗಾರಿ ನಡೆಸದೇ ಅರ್ಧದಲ್ಲೇ ಕೈ ಬಿಟ್ಟು ಹೋಗಿದ್ದವು. ಸೇತುವೆ ಕಾಮಗಾರಿ ನಡೆಸಲು ಅಸಾಧ್ಯ ಎನ್ನುವ ಪರಿಸ್ಥಿತಿ ಉಂಟಾಗಿತ್ತು. ಆಗ ಇಲ್ಲಿಯ ಜನ ಸೇತುವೆಯ ಆಸೆಯನ್ನೇ ಬಿಟ್ಟಿದ್ದರು ಎಂದು ಅವರು ತಿಳಿಸಿದರು.
ಈ ವೇಳೆ ಕೋಡಿಭಾಗದ ಗ್ರಾಮಸ್ಥರು ಖಾಫ್ರಿ ದೇವರಿಗೆ ಹರಕೆ ಹೊತ್ತುಕೊಂಡಿದ್ದಾರೆ. ಸಾಕಷ್ಟು ಸಮಸ್ಯೆಗಳನ್ನು ಮೆಟ್ಟಿ ನಿಂತು ಮದ್ಯ, ಸಿಗರೇಟು, ಪೂಜಾ ಹರಕೆಯ ಸಮರ್ಪಣೆಯ ಬಳಿಕ ಸೇತುವೆ ಕಾಮಗಾರಿ ಆರಂಭಗೊಂಡು 18 ವರ್ಷಗಳ ನಂತರ ಕಾಮಗಾರಿ ಮುಕ್ತಾಯವಾಗಿತ್ತು ಎಂದು ಅವರು ಸ್ಮರಿಸಿದರು.
ಸುಮಾರು 80 ದಶಕಗಳ ಪೂರ್ವದಲ್ಲಿ ಕೋಡಿಭಾಗ ಸದಾಶಿವಗಡ ಸಂಪರ್ಕಕ್ಕೆ ಸಾಕಷ್ಟು ಸಮಸ್ಯೆ ಎದುರಿಸಬೇಕಾಗಿತ್ತು. ಅಲ್ಲದೆ ಇಲ್ಲಿನ ಸಾಕಷ್ಟು ಜನ ಗೋವಾ ರಾಜ್ಯದೊಂದಿಗೆ ಹೆಚ್ಚಿನ ಸಂಪರ್ಕ ಹೊಂದಿದ್ದರಿಂದ ಉದ್ಯೋಗ, ಕುಟುಂಬ ಪರಿವಾರದ ಸಂಬಂಧವೂ ಬೆಸೆದಿತ್ತು. ಮಕ್ಕಳು ಮಡದಿಯೊಂದಿಗೆ ಜೀವ ಕೈಯಲ್ಲಿ ಹಿಡಿದು ಒಂದು ಬದಿಯಿಂದ ಇನ್ನೊಂದು ಬದಿಗೆ ಸಾಗಬೇಕಿತ್ತು.
ಹೀಗಾಗಿ ಸೇತುವೆ ನಿರ್ಮಾಣಕ್ಕಾಗಿ ಜನಪ್ರತಿನಿಧಿಗಳು ಸೇರಿದಂತೆ ಸಾಕಷ್ಟು ಪ್ರಯತ್ನಪಟ್ಟಿದ್ದ ಸ್ಥಳೀಯ ಜನರು ಸುತ್ತಲಿನ ಪರಿವಾರ ದೇವತೆಗಳಾದ ಕಾಳಿ ಮಾತಾ, ದುರ್ಗಾದೇವಿ ಹಾಗೂ ನರಸಿಂಹ ದೇವರಲ್ಲಿ ಸಾಕಷ್ಟು ಪ್ರಾರ್ಥನೆಗಳನ್ನು ಮಾಡಿಕೊಂಡಿದ್ದರಂತೆ. ಕೊನೆಗೂ ದೈವದ ಅಭಯದ ಫಲವಾಗಿ ಎರಡು ರಾಜ್ಯವನ್ನು ಬೆಸೆಯುವ ಕೊಂಡಿಯಾಗಿ ಸೇತುವೆ ನಿರ್ಮಾಣಗೊಂಡಿದ್ದು, 41 ವರ್ಷಗಳ ಬಳಿಕ ಇದೀಗ ಕುಸಿದಿದೆ.
ಈ ಮಧ್ಯೆ ಕೋಟ್ಯಂತರ ಜನ ಸಂಚಾರ ಮಾಡಿ ಯಾವುದೇ ಜೀವಹಾನಿಗೆ ಆಸ್ಪದ ನೀಡದೆ ಸೇತುವೆ ತನ್ನ ಸೇವೆಯಿಂದ ಮುಕ್ತಿ ಪಡೆದುಕೊಂಡಿದೆ. ಆದರೆ ಇಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಯಾವುದೇ ಜೀವ ಹಾನಿ ಆಗದಿರಲು ಸುತ್ತಲಿನ ದೈವದ ಸಮೂಹವೇ ಕಾರಣ ಎನ್ನುವುದು ಎಲ್ಲ ಜನರ ಬಾಯಲ್ಲಿ ಕೇಳಿ ಬರುತ್ತಿರುವ ಮಾತು.
ಇದನ್ನೂ ಓದಿ: "ದುರಂತದಲ್ಲಿ ನಾನು ಬದುಕಿದ್ದೇ ಪವಾಡ!": ಕಾಳಿ ಸೇತುವೆ ಕುಸಿತದಲ್ಲಿ ಬಚಾವಾದ ಲಾರಿ ಚಾಲಕನ ಮನದಾಳ!! - Kali bridge collapse