ಮಂಡ್ಯ: ಕೆರಗೋಡು ಗ್ರಾಮದ ಧ್ವಜ ವಿವಾದದ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಸಿ.ಟಿ.ರವಿ ಮಾತನಾಡುವಾಗ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಮಳವಳ್ಳಿ ಶಾಸಕ ಪಿ.ಎಂ ನರೇಂದ್ರಸ್ವಾಮಿ ಆರೋಪಿಸಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಅವರಿಗೆ ದೂರು ಸಲ್ಲಿಸಿದ್ದಾರೆ.
ಮಂಡ್ಯ ತಾಲೂಕು ಕೆರಗೋಡು ಗ್ರಾಮದಲ್ಲಿ ಜಿಲ್ಲಾಡಳಿತ ಹಾರಿಸಿರುವ ರಾಷ್ಟ್ರಧ್ವಜಕ್ಕೆ ಅಗೌರವ ತೋರುವ ರೀತಿಯಲ್ಲಿ ಸಿ ಟಿ ರವಿ ಮಾತನಾಡಿದ್ದಾರೆ. ಇದರಿಂದ ರಾಷ್ಟ್ರ ಮತ್ತು ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ್ದಾರೆ. ಇವರ ವಿರುದ್ಧ ಸೆಕ್ಷನ್ 51A (a) ಅನ್ವಯ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಶಾಸಕರು ಮನವಿ ಮಾಡಿದ್ದಾರೆ.
ರಾಷ್ಟ್ರ ಮತ್ತು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವುದರಿಂದ ಭಾರತದ ಪ್ರಜೆಯಾಗಿ ದೂರು ಸಲ್ಲಿಸಿದ್ದೇನೆ. ಪೊಲೀಸರು ಸೂಕ್ತ ಕ್ರಮ ವಹಿಸಲು ಮುಂದಾಗಬೇಕು. ರಾಷ್ಟ್ರಧ್ವಜ ಬಗ್ಗೆ ಮಾತನಾಡಿರುವ ಬಿಜೆಪಿ ಪಕ್ಷದ ಸಿ.ಟಿ ರವಿಗೆ ಬುದ್ಧಿ ಭ್ರಮಣೆಯಾಗಿದೆ. ಸಂವಿಧಾನಬದ್ಧವಾಗಿ ಎಲ್ಲರನ್ನೂ ಸಮಾನವಾಗಿ ಕಾಣುತ್ತೇನೆಂದು ಪ್ರಮಾಣವಚನ ಸ್ವೀಕರಿಸಿ ಸಚಿವರಾಗಿದ್ದ ಇವರು ಮಾನಸಿಕವಾಗಿ ವಿಚಲಿತರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದೆ. ಗುಂಡಿಗೆ ಎದೆಯೊಡ್ಡಿ ಪ್ರಾಣತ್ಯಾಗ ಮಾಡಿದ್ದಾರೆ, ಬಿಜೆಪಿಯವರು ಯಾವ ಸ್ವಾತಂತ್ರ್ಯ ಹೋರಾಟ ಮಾಡಿದ್ದಾರೆ. ಹೋರಾಟದಲ್ಲಿ ಎಂದಿಗೂ ಭಾಗಿಯಾಗದ ಇವರು ಬ್ರಿಟಿಷರಿಂದ ಗೌರವ ಧನ ಪಡೆದಿದ್ದಾರೆ, ತೋರಿಕೆಗಾಗಿ ದೇಶ ಭಕ್ತರು ಎಂದು ಕಿಡಿಕಾರಿದರು.
ಬಿಜೆಪಿ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಮೊದಲು ಬೀಜ ಬಿತ್ತಿದ್ದೆ ನರೇಂದ್ರಸ್ವಾಮಿ ಎಂಬುದನ್ನು ಮನವರಿಕೆ ಮಾಡಿಕೊಳ್ಳಲಿ. ಆ ದಿನದಲ್ಲಿ ನನಗೆ ಸಿ.ಟಿ ರವಿ ಯಾವ ರೀತಿ ಗೋಗರೆದಿದ್ದರು ಎಂಬುದನ್ನು ನೆನಪಿಸಿಕೊಳ್ಳಲಿ. ರಾಜ್ಯದಲ್ಲಿ ಎಂದಿಗೂ ಬಹುಮತದಿಂದ ಬಿಜೆಪಿ ಸರ್ಕಾರ ರಚಿಸಿಲ್ಲ, ಬದಲಾಗಿ ಆಪರೇಷನ್ ಕಮಲದ ಮೂಲಕ ಅಧಿಕಾರ ಚುಕ್ಕಾಣಿ ಹಿಡಿದಿದೆ ಎಂಬುದನ್ನು ಅರಿಯಬೇಕು ಎಂದು ತಿರುಗೇಟು ನೀಡಿದರು.
ಸೀಡ್ಲೇಸ್ ಎಂದ ಸಿ.ಟಿ ರವಿ ಹೇಳಿಕೆ ವಿಚಾರವಾಗಿ ಮಾತನಾಡಿದ ಶಾಸಕ ನರೇಂದ್ರಸ್ವಾಮಿ, 2008ರಲ್ಲಿ ನಾನು ಪಕ್ಷೇತರನಾಗಿ ಗೆದ್ದಾಗ ಸಿ.ಟಿ ರವಿ ನಂಗೆ ಎಷ್ಟು ಸರಿ ಕಾಲ್ ಮಾಡಿ ಮಾತ್ನಾಡಿದ್ದಾರೆ ಅಂತಾ ನನಗೆ ಗೊತ್ತು. 2008 ರಲ್ಲಿ ನಮ್ಮಿಂದಲೇ ಮೊದಲು ಬಿಜೆಪಿ ಸರ್ಕಾರ ಬಂದಿದ್ದು. ರಾಜ್ಯದಲ್ಲಿ ಬಿಜೆಪಿ ಸರ್ಕಾರಕ್ಕೆ ಬೀಜ ಹಾಕಿದ್ದೇ ನಾನು. ಇವಾಗ ಹೇಳಿ ಯಾರು ಸೀಡ್ಲೇಸ್ ಅಂತಾ? ಎಂದು ಟಾಂಗ್ ನೀಡಿದರು.
ಶಿವಮೊಗ್ಗದಲ್ಲಿ ಕಾಂಗ್ರೆಸ್ನಿಂದ ದೂರು: ರಾಷ್ಟ್ರಧ್ವಜಕ್ಕೆ ಸಿ.ಟಿ.ರವಿ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ನಗರದ ದೊಡ್ಡಪೇಟೆ ಪೊಲೀಸ್ ಠಾಣೆಗೆ ಶಿವಮೊಗ್ಗ ಯುವ ಕಾಂಗ್ರೆಸ್ ವತಿಯಿಂದ ದೂರು ನೀಡಲಾಯಿತು.
ದೂರು ಸಲ್ಲಿಸಿದ ಬಳಿಕ ಶಿವಮೊಗ್ಗ ಯುವ ಕಾಂಗ್ರೆಸ್ ಅಧ್ಯಕ್ಷರಾದ ಗಿರೀಶ್ ಮಾತನಾಡಿ, ಸಿ.ಟಿ.ರವಿ ಅವರು ರಾಷ್ಟ್ರ ದ್ವಜಕ್ಕೆ ಅಪಮಾನ ಮಾಡಿದ್ದಾರೆ. ರಾಷ್ಟ್ರಧ್ವಜ ನೀತಿ ಸಂಹಿತೆಯಡಿ ಅವರ ವಿರುದ್ಧ ಕ್ರಮ ಜರುಗಿಸಬೇಕು. ತಕ್ಷಣ ಸಿ.ಟಿ.ರವಿ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿದರು.
ಇದನ್ನೂ ಓದಿ: ಧರ್ಮಧ್ವಜ ಹಾರಿಸಲು ಪಂಚಾಯಿತಿಯ ಅನುಮತಿ ಇತ್ತು: ಸಿ.ಟಿ.ರವಿ
ಬಿಜೆಪಿಯಿಂದ ಎಸ್ಪಿಗೆ ದೂರು: ಕೆರಗೋಡು ಗ್ರಾಮದಲ್ಲಿ ಹಾಕಿದ ಹನುಮ ಧ್ವಜವನ್ನು ಬಲವಂತವಾಗಿ ಕೆಳಗಿಳಿಸಿ ಅದೇ ಜಾಗದಲ್ಲಿ ರಾಷ್ಟ್ರ ಧ್ವಜ ಹಾರಿಸುವಾಗ ನಿಯಮಗಳನ್ನು ಗಾಳಿಗೆ ತೂರಿ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಮುಖಂಡರು ಆಗ್ರಹಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದರು.
ಕೆರಗೋಡು ಪಿಡಿಓ, ಮಂಡ್ಯ ಉಪವಿಭಾಗಾಧಿಕಾರಿ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಈ ವೇಳೆ ಬಿಜೆಪಿ ಮುಖಂಡರಾದ ಸಿ.ಟಿ.ಮಂಜುನಾಥ್, ಚಂದ್ರು, ಶಿವಕುಮಾರ್, ವಿವೇಕ್, ಪ್ರಸನ್ನಕುಮಾರ್, ನವೀನ್ ಯಲಿಯೂರು ಇತರರಿದ್ದರು.