ಉಡುಪಿ: ಇಲ್ಲಿನ ಶ್ರೀ ಮಹಾಲಿಂಗೇಶ್ವರ ಮಹಾಗಣಪ ದೇವಳದಲ್ಲಿ ವಿಶೇಷ ಕಟ್ಟದಪ್ಪ (ಕಟಾಹಾಪೂಪ) ಸಾವಿರಾರು ಭಕ್ತಾಧಿಗಳ ಸಮಕ್ಷಮದಲ್ಲಿ ವಿಜೃಂಭಣೆಯಿಂದ ನಡೆಯಿತು.
ಈ ಕ್ಷೇತ್ರದಲ್ಲಿ ಮಹಾಲಿಂಗೇಶ್ವರ ದೇವರು ಪ್ರಧಾನ ದೇವರಾದರೂ ಅತೀ ವಿಶಿಷ್ಟ ಸೇವೆಯಾದ ಅಪ್ಪಸೇವೆ ಶ್ರೀ ಮಹಾಗಣಪತಿಗೆ ಸಲ್ಲುವುದು ವಿಶೇಷ. ಅವಿಭಜಿತ ಜಿಲ್ಲೆಯಲ್ಲದೆ ದೇಶ ವಿದೇಶಗಳ ಭಕ್ತರು ಇಲ್ಲಿ ನಡೆಯುವ ವಿಶೇಷ ಕಟ್ಟದಪ್ಪ ಸೇವೆಯಲ್ಲಿ ಪಾಲ್ಗೊಳ್ಳುವುದು ಇಲ್ಲಿನ ಇನ್ನೊಂದು ವಿಶೇಷತೆ.
ಕಟ್ಟದಪ್ಪ ಸೇವೆಯೆಂದರೆ ದೇವರಿಗೆ ಬಲು ಪ್ರೀತಿ: ಶ್ರೀ ಮಹಾಗಣಪತಿ ದೇವರ ಇಷ್ಟಾರ್ಥವಾಗಿ ನಡೆಯುವ ಕಟ್ಟದಪ್ಪ ಮತ್ತು ಪೊಟ್ಟದಪ್ಪ ಸೇವೆಗಳು ಜಗತ್ಪ್ರಸಿದ್ಧ. ಕಳೆದ 30ವರ್ಷಗಳಿಂದ ದೇವಳದಲ್ಲಿ ಸುಮಾರು 80 ಜನರ ತಂಡ ಇಲ್ಲಿ ಕಟ್ಟದಪ್ಪ ತಯಾರಿಸುವ ಕಾಯಕ ಮಾಡುತ್ತಾ ಬಂದಿದೆ. ಹಿಂದೆ 20 ಮುಡಿ ಅಕ್ಕಿ ಹಿಟ್ಟಿನಿಂದ ಕಟ್ಟದಪ್ಪ ತಯಾರಿಸಲಾಗುತ್ತಿತ್ತು.
"ಈ ವರ್ಷ 100 ಮುಡಿ ಅಕ್ಕಿ ಹಿಟ್ಟು ಉಪಯೋಗಿಸಿ ಕಟ್ಟದಪ್ಪ ತಯಾರಿಸಲಾಗಿದೆ. ಈ ಬಾರಿ ಕಟ್ಟದಪ್ಪಕ್ಕೆ 80 ಮುಡಿ ಅಕ್ಕಿ ಹಿಟ್ಟು, 1,400 ತೆಂಗಿನ ಕಾಯಿ, 7 ಕ್ವಿಂಟಲ್ ಬಾಳೆ ಹಣ್ಣು, 3 ಕ್ವಿಂಟಾಲ್ ಬೆಲ್ಲ, 30 ಗೋಣಿ ಚೀಲ ಅರಳು, 5 ಕೆಜಿ ಏಲಕ್ಕಿ ಮತ್ತು 50 ಡಬ್ಬಿ ಕೊಬ್ಬರಿ ಎಣ್ಣೆ ಬಳಸಿ ಕಟ್ಟದಪ್ಪ ತಯಾರಿಸಲಾಗುತ್ತದೆ" ಎಂದು ದೇವಸ್ಥಾನದ ಆಡಳಿತ ಮಂಡಳಿಯವರು ಮಾಹಿತಿ ನೀಡಿದರು.
ಇನ್ನು, ರಾತ್ರಿ ವೇಳೆ ಸಾವಿರಾರು ಭಕ್ತರ ಸಮ್ಮುಖ ಶ್ರೀ ಗಣಪತಿಗೆ ವಿಶೇಷ ಪೂಜೆಯೊಂದಿಗೆ ಕಟ್ಟದಪ್ಪಗಳನ್ನು ಸಮರ್ಪಿಸಿದ ಬಳಿಕ ಭಕ್ತರಿಗೆ ಈ ಕಟ್ಟದಪ್ಪಗಳನ್ನು ವಿತರಿಸಲಾಗುತ್ತದೆ.
ಇದನ್ನೂ ಓದಿ: ಮೈಸೂರು ಅರಮನೆ ವೀಕ್ಷಿಸಲು ಕಾಯಬೇಕಿಲ್ಲ: ಇನ್ಮುಂದೆ ವಾಟ್ಸ್ಆ್ಯಪ್ ಮೂಲಕವೇ ಟಿಕೆಟ್ ಬುಕ್ ಮಾಡಿ - Mysuru Palace