ಬೆಂಗಳೂರು: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2024-25ನೇ ಸಾಲಿನ ಕೇಂದ್ರದ ಆಯವ್ಯಯ ಮಧ್ಯಂತರ ಆಯವ್ಯಯ ಆಗಿದ್ದು, ಜುಲೈ 2024ರಲ್ಲಿ ಲೋಕಸಭೆ ಚುನಾವಣೆ ನಡೆದ ನಂತರ ಸಂಪೂರ್ಣ ಆಯವ್ಯಯ ವನ್ನು ಮಂಡಿಸಲಾಗುವುದು. ತೆರಿಗೆಗಳ ಕುರಿತು ಯಥಾಸ್ಥಿತಿ ಕಾಪಡಿಕೊಂಡಿರುವ ಕೇಂದ್ರ ಸರ್ಕಾರದ ಕ್ರಮ ಸ್ವಾಗತಾರ್ಹ ಎಂದು ಕಾಸಿಯಾ ಅಧ್ಯಕ್ಷ ಶಶಿಧರ್ ಶೆಟ್ಟಿ ತಿಳಿಸಿದ್ದಾರೆ.
ಇದು ಸಾಮಾನ್ಯ ಬಜೆಟ್ ಆಗಿದ್ದು, ಚುನಾವಣಾ ಆಧಾರಿತವಾಗಿಲ್ಲ. ಯಾವುದೇ ದೇಶವನ್ನು ಅಭಿವೃದ್ಧಿಪಡಿಸಲು ಮೂಲಸೌಕರ್ಯ ಅಭಿವೃದ್ಧಿ ಮತ್ತು ಆದಾಯವನ್ನು ಗಳಿಸಲು ಬೆಂಬಲಿಸುವ ಯೋಜನೆಗಳ ಮೇಲೆ ಹೆಚ್ಚಿನ ಒತ್ತಡದ ಅಗತ್ಯವಿದೆ. ಆ ನಿಟ್ಟಿನಲ್ಲಿ ಈ ಆಯವ್ಯಯ ನಿಜಕ್ಕೂ ಸಂತೋಷ ತಂದಿದೆ. ಆಯವ್ಯಯದಲ್ಲಿ ಕೈಗಾರಿಕೋದ್ಯಮಿಗಳಿಗೆ ಅಥವಾ ತೆರಿಗೆ ಪಾವತಿದಾರರಿಗೆ ಹೊಸತೇನೂ ಇಲ್ಲ. ಆದರೆ, ರೈಲ್ವೆ ಕಾರಿಡಾರ್, ಮೆಟ್ರೊ ರೈಲು ಮಾರ್ಗದಂತಹ ಮೂಲಸೌಕರ್ಯ ಅಭಿವೃದ್ಧಿಗೆ ಹಣ ಮೀಸಲಿಟ್ಟಿರುವುದರಿಂದ ಖಂಡಿತವಾಗಿಯೂ ದೇಶದ ಆರ್ಥಿಕ ಅಭಿವೃದ್ಧಿಗೆ ಸಹಾಯವಾಗಲಿದೆ ಎಂದಿದ್ದಾರೆ.
ಪ್ರಸಕ್ತ ವರ್ಷದ ವಿತ್ತೀಯ ಕೊರತೆಯು ಜಿಡಿಪಿಯ ಶೆಕಡಾ 5.8ರಷ್ಟು ಇದ್ದು, 2024-25ರಲ್ಲಿ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇಕಡಾ 5.1 ಕ್ಕೆ ಇಳಿಕೆಯಾಗುವ ನಿರೀಕ್ಷೆಯನ್ನು ಹೊಂದಿರುವುದು ಸ್ವಾಗತಾರ್ಹ ವಿತ್ತೀಯ ಕೊರತೆಯ ಇಳಿಕೆ ಹಣದುಬ್ಬರವನ್ನು ನಿಯಂತ್ರಿಸಲಿದೆ. ಹೂಡಿಕೆಯ ಅಗತ್ಯಗಳನ್ನು ಪೂರೈಸುವ ಮೂಲಕ ಜಾಗತಿಕ ಮಟ್ಟದಲ್ಲಿ ಸ್ಫರ್ಧಿಸಲು ಎಂಎಸ್‌ಎಂಇ ಗಳಿಗೆ ತರಬೇತಿ ನೀಡುವುದನ್ನು ಹೊರತುಪಡಿಸಿದರೆ ಕೈಗಾರಿಕೆಗಳಿಗೆ ವಿಶೇಷವಾದದ್ದೇನೂ ಈ ಆಯವ್ಯಯದಲ್ಲಿ ಇಲ್ಲ ಎಂದು ಅಭಿಪ್ರಯಪಟ್ಟಿದ್ದಾರೆ.
ಸಾರ್ವಜನಿಕ ಖಾಸಗಿ ಹೂಡಿಕೆ ಮಾದರಿಯ ಮೂಲಕ ಮೈಕ್ರೋ ಫುಡ್ ಪ್ರೊಸೆಸಿಂಗ್ ಯೋಜನೆಗೆ ನೀಡಿರುವ ಒತ್ತು ದೇಶದ ಕೃಷಿಗೆ ಮಾತ್ರವಲ್ಲದೇ ಕೈಗಾರಿಕೆಗಳಿಗೂ ಉತ್ತೇಜನ ನೀಡುತ್ತದೆ. 2047 ರ ವೇಳೆಗೆ 'ವಿಕಸಿತ್ ಭಾರತ್' (ಅಭಿವೃದ್ಧಿ ಹೊಂದಿದ ಭಾರತ) ಸ್ಥಾಪಿಸುವ ಸರ್ಕಾರದ ದೃಷ್ಟಿಕೋನವನ್ನು ಹೊಂದಿರುವುದು ನಿಜಕ್ಕೂ ಶ್ಲಾಘನೀಯ. ಬರುವ ಜುಲೈ ತಿಂಗಳಿನಲ್ಲಿ ಮಂಡಿಸಲಿರುವ ಪೂರ್ಣ ಪ್ರಮಾಣದ ಬಜೆಟ್‌ನಲ್ಲಿ ಎಂ ಎಸ್ಎಂಇ ಗಳ ಅಗತ್ಯಗಳನ್ನು ಪೂರೈಸಲಾಗುವುದು ಎನ್ನುವ ಆಶಾವಾದವಿದೆ ಎಂದು ಹೇಳಿದ್ದಾರೆ.
ಬಜೆಟ್ ಸ್ವಾಗತಾರ್ಹ ಎಂದ ಎಫ್ಕೆಸಿಸಿಐ ಉಪಾಧ್ಯಕ್ಷೆ: ಇದಕ್ಕೂ ಮೊದಲು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಮಂಡಳಿ ಉಪಾಧ್ಯಕ್ಷೆ ಉಮಾ ರೆಡ್ದಿ ಕೂಡ, ಇದೊಂದು ಉತ್ತಮ ನೀತಿಗಳನ್ನು ಒಳಗೊಂಡಿರುವ ಬಜೆಟ್ ಆಗಿದೆ. ಉತ್ಪಾದನೆಯ ಮೂಲಸೌಕರ್ಯ ಹೆಚ್ಚಿಸಲು ಬಜೆಟ್ ಸಹಾಯ ಮಾಡಲಿದೆ. ಆಡಳಿತ, ಅಭಿವೃದ್ಧಿ ಹಾಗೂ ಕಾರ್ಯಕ್ಷಮತೆಯ ಮೇಲೆ ಹೆಚ್ಚಿನ ಗಮನವನ್ನು ಈ ಬಜೆಟ್ ಕೇಂದ್ರಿಕರಿಸಿದೆ ಎಂದು ಹೇಳಿದ್ದರು.
ಇದನ್ನೂ ಓದಿ: ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಬಜೆಟ್; ಜಗದೀಶ್ ಶೆಟ್ಟರ್