ಬೆಂಗಳೂರು: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಆಹಾರ ವ್ಯವಸ್ಥೆ ಹಾಗೂ ವಿತರಣೆಯನ್ನು ಮಾಡುವುದಕ್ಕೆ ಜಿಲ್ಲಾ ಮಟ್ಟದಲ್ಲಿ ಸಂಬಂಧಪಟ್ಟ ಸಮಿತಿಗಳಿವೆ. ಅದಕ್ಕೂ ಕನ್ನಡ ಸಾಹಿತ್ಯ ಪರಿಷತ್ತಿಗೂ ಯಾವುದೇ ಸಂಬಂಧವಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಸ್ಪಷ್ಟಪಡಿಸಿದ್ದಾರೆ.
ಪ್ರಸ್ತುತ ಮಂಡ್ಯದಲ್ಲಿ ಅಯೋಜನೆಗೊಂಡಿರುವ 87ನೆಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಒದಗಿಸುವ ಬಗ್ಗೆ ನಡೆಯುತ್ತಿರುವ ವಿವಾದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಮಂಡ್ಯದಲ್ಲಿ ಅಯೋಜೆಗೊಂಡಿರುವ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಎ. ಬಿ. ರಮೇಶ್ ಬಾಬು ಬಂಡಸಿದ್ದೇಗೌಡರ ಅಧ್ಯಕ್ಷತೆಯಲ್ಲಿ 35 ಜನರ ಆಹಾರ ಸಮಿತಿಯನ್ನು ರಚಿಸಲಾಗಿದ್ದು, ಸಮ್ಮೇಳನದಲ್ಲಿ ನಡೆಯಬೇಕಾದ ಊಟೋಪಚಾರಗಳ ವ್ಯವಸ್ಥೆಯನ್ನು ಅದು ನಿರ್ವಹಿಸಲಿದೆ. ಡಿಸೆಂಬರ್ 6ರಂದು ಈ ಸಮಿತಿಯು ಸಭೆ ಸೇರಿ ಸಮ್ಮೇಳನದಲ್ಲಿ ಮುದ್ದೆ, ಸೊಪ್ಪು ಸಾಂಬಾರ್ ವಿಶೇಷ ತಿನಿಸಾಗಿದ್ದು, ಉತ್ತರ, ದಕ್ಷಿಣ ಕರ್ನಾಟಕ ಶೈಲಿಯ ಊಟವನ್ನು 300 ಕೌಂಟರ್ಗಳಲ್ಲಿ ವ್ಯವಸ್ಥೆ ಮಾಡುವುದು ಸೇರಿದಂತೆ ಅನೇಕ ಮಹತ್ವದ ನಿರ್ಣಯಗಳನ್ನು ತೆಗೆದುಕೊಂಡಿದೆ ಎಂದಿದ್ದಾರೆ.
ಮಧು.ಜಿ. ಮದೇಗೌಡರ ಅಧ್ಯಕ್ಷತೆಯಲ್ಲಿ 30 ಜನರ ವಸ್ತು ಪ್ರದರ್ಶನ ಸಮಿತಿಯನ್ನು ರಚಿಸಲಾಗಿದ್ದು ಪುಸ್ತಕ ಮಳಿಗೆ, ವಾಣಿಜ್ಯ ಮಳಿಗೆ, ಆಹಾರ ಮಳಿಗೆಗಳ ಹೊಣೆಯನ್ನು ಇದು ಹೊತ್ತಿದೆ. ಈ ವಸ್ತು ಪ್ರದರ್ಶನ ಸಮಿತಿಯೇ ಈಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ‘ಮಾಂಸಾಹಾರ, ಮದ್ಯ ಮತ್ತು ತಂಬಾಕು ಮಾರಾಟವನ್ನು ನಿಷೇಧಿಸಲಾಗಿದೆ’ ಎಂಬ ಸೂಚನೆಯನ್ನು ನೀಡಿದೆ ಎಂದು ಹೇಳಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು, ಸಮ್ಮೇಳನದಲ್ಲಿ ಬಹುಮುಖ್ಯವಾದ ಸಮ್ಮೇಳನಾಧ್ಯಕ್ಷರ ಆಯ್ಕೆ , ವಿಚಾರ ಗೋಷ್ಟಿಗಳ ರೂಪಿಸುವಿಕೆ, ಸನ್ಮಾನಿತರ ಆಯ್ಕೆ, ಪುಸ್ತಕಪ್ರಕಟಣೆ ಮೊದಲಾದ ಹೊಣೆಗಳನ್ನು ನಿರ್ವಹಿಸುತ್ತದೆ. ಅದನ್ನೂ ಸಂಬಂಧಪಟ್ಟ ಸಮಿತಿಗಳಲ್ಲಿ ಪ್ರಸ್ತಾಪಿಸಿ ಅಲ್ಲಿಂದ ಅನುಮೋದನೆ ಪಡೆದ ನಂತರವೇ ತೀರ್ಮಾನಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಅನವಶ್ಯಕವಾಗಿ ನನ್ನ ಹೆಸರನ್ನು ಈ ವಿವಾದದಲ್ಲಿ ಎಳೆದು ತರುವಲ್ಲಿ ಕೆಲವರು ಮುಖ್ಯಪಾತ್ರ ವಹಿಸಿರುವುದು ಕನ್ನಡ ಸಾಹಿತ್ಯ ಪರಿಷತ್ತಿಗೂ ಧಕ್ಕೆಯನ್ನು ತಂದಿದೆ ಎಂದು ಡಾ.ಮಹೇಶ ಜೋಶಿ ಅಸಮಾಧಾನ ವ್ಯಕ್ತಪಡಿಸಿದರು.
ಡಿಸೆಂಬರ್ 20 ರಿಂದ ಮೂರು ದಿನ ಅಕ್ಷರ ಜಾತ್ರೆ; 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಡಿಸೆಂಬರ್ 20, 21 ಮತ್ತು 22ರಂದು ಮಂಡ್ಯ ನಗರದ ಹೊರವಲಯದಲ್ಲಿ ನಡೆಯಲಿದ್ದು ಇದಕ್ಕಾಗಿ ಸಿದ್ಧತೆ ಸಮರೋಪಾದಿಯಲ್ಲಿ ನಡೆದಿದೆ. ಮಂಡ್ಯದಲ್ಲಿ ನಡೆಯಲಿರುವ ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಗೊ.ರು. ಚನ್ನಬಸಪ್ಪ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಗೊ ರು ಚನ್ನಬಸಪ್ಪ ಆಯ್ಕೆ